Advertisement

ಅಪ್ಪನ ಕರೆ ಲೆಕ್ಕಿಸದೇ ಪಿಯು ಪರೀಕ್ಷೆ ಬರೆಯೋದು ಬಿಟ್ಟು ಕ್ರಿಕೆಟ್ ನಲ್ಲಿ ಮಿಂಚಿದ ಬಿಶ್ನೋಯ್!

10:16 AM Feb 15, 2020 | Mithun PG |

ಅದು 2018ರ ಮಾರ್ಚ್ ತಿಂಗಳು. ಜೈಪುರ ಅಂಗಳದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನೆಟ್ ನಲ್ಲಿ ಬೆವರು ಹರಿಸುತ್ತಿದ್ದರು. ಅಲ್ಲಿ 17 ರ ಹರೆಯದ ಹುಡುಗನೋರ್ವನನ್ನು ನೆಟ್ಸ್ ನಲ್ಲಿ ಬಾಲ್ ಹಾಕಲು ಕರೆಸಲಾಗಿತ್ತು.  ಮೊದಲ ಎರಡು ದಿನಗಳ ಅಭ್ಯಾಸ ಮುಗಿದಿತ್ತು. ಆದರೆ ಆ ಹುಡುಗನಿಗೆ ಇನ್ನೂ ಅವಕಾಶ ದೊರೆತಿರಲಿಲ್ಲ. ನಿರಾಶನಾಗಿ ಕುಳಿತಿದ್ದವನಿಗೆ ಮನೆಯಿಂದ ಫೋನ್ ಬಂದಿತ್ತು. ಆ ಕಡೆಯಿಂದ ಅಪ್ಪ ಒಂದೇ ಉಸಿರಲ್ಲಿ ಹೇಳಿದ್ದರು,

Advertisement

ಕ್ರಿಕೆಟ್ ಆಡಿದ್ದು ಸಾಕು, ಮನೆಗೆ ಬಾ…!

ಇನ್ನು ಕೆಲವೇ ದಿನಗಳಲ್ಲಿ ಆತನ 12ನೇ ತರಗತಿ ಪಬ್ಲಿಕ್ ಪರೀಕ್ಷೆ ಇತ್ತು. ಅದಕ್ಕಾಗಿ ಬಂದಿತ್ತು ಅಪ್ಪನ ಬುಲಾವ್. ಇತ್ತ ನೆಟ್ಸ್ ನಲ್ಲಿ ಬಾಲ್ ಹಾಕಲೂ ಅವಕಾಶವಿಲ್ಲ. ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಯಾದರೂ ಬರೆದು ಬರುವ ಎಂದು ಹುಡುಗ ಹೊರಟಿದ್ದ. ಆದರೆ ಕೋಚ್ ತಡೆದಿದ್ದರು.

ಕ್ರಿಕೆಟ್ ಈಗ  ಇಲ್ಲವೇ ಮತ್ತೆಂದೂ ಇಲ್ಲ..!

ನಿಂತ. ಆಡಿದ. ತನ್ನ ಸ್ಪಿನ್‌ ಜಾಲದಿಂದ ಎಲ್ಲರನ್ನೂ ಮೋಡಿ ಮಾಡಿದ. ಅಂಡರ್‌ 19 ವಿಶ್ವ ಕಪ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತು ದಾಖಲೆ ಬರೆದ. ಆತನೇ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದ ರವಿ ಬಿಶ್ನೋಯ್.

Advertisement

ರವಿ ರಾಜಸ್ಥಾನದ ಜೋಧ್ ಪುರದವನು. ಕ್ರಿಕೆಟ್ ಅಂದರೆ ಪಂಚಪ್ರಾಣ. ತಂದೆ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್. ಸಹಜವೆಂಬಂತೆ ಶಿಸ್ತಿನ ಮನುಷ್ಯ. ಆಟಕ್ಕಿಂತ ಪಾಠಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದವರು. ಅಪ್ಪನಿಗೆ ಗೊತ್ತಿಲ್ಲದ ಹಾಗೆ ಆಡಿದ್ದೇ ಜಾಸ್ತಿ. ಆದರೆ ರವಿಯ ಆಟಕ್ಕೆ ಹೆಚ್ಚಿನ ಬೆಂಬಲ ಸಿಕ್ಕದ್ದು ಅಮ್ಮನಿಂದ. ಅಪ್ಪನಿಲ್ಲದ ಸಮಯದಲ್ಲಿ ಅಮ್ಮನ ಜೊತೆ ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದ.

ಜೋಧ್ ಪುರದಲ್ಲಿ ಕ್ರಿಕೆಟ್ ಗೆ ಬೇಕಾದ ವಾತಾವರಣವಿರಲಿಲ್ಲ. ಅಕಾಡೆಮಿಯೂ ಇರಲಿಲ್ಲ. ಏಳು ವರ್ಷಗಳ ಹಿಂದೆ ನನ್ನ ಹಿರಿಯ ಗೆಳೆಯರು ಸೇರಿ ಅಕಾಡೆಮಿ ಮಾಡಲು ಯೋಚಿಸಿದ್ದರು. ಸರಿಯಾದ ಹಣಕಾಸು ವ್ಯವಸ್ಥೆ ಇರಲಿಲ್ಲ. ಹಾಗಾಗಿ ನಾವೇ ಕೆಲಸಗಳನ್ನು ಮಾಡುತ್ತಿದ್ದೆವು ಎನ್ನುತ್ತಾರೆ ರವಿ. ಹೀಗೆ ಕ್ರಿಕೆಟ್ ಪಟ್ಟುಗಳನ್ನು ಕಲಿತು ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ ನ ನೆಟ್ಸ್ ಬೌಲರ್ ಆದಾಗ ಕ್ರಿಕೆಟ್ ವಲಯದಲ್ಲಿ ರವಿ ಬಿಶ್ನೋಯ್ ಹೆಸರು ಕೇಳಿತ್ತು. ಆದರೆ ಪರೀಕ್ಷೆ ದಿನ ಹತ್ತಿರ ಬಂದಿತ್ತು. ಅಪ್ಪನ ಕರೆ ಬಂದಿತ್ತು. ಕೋಚ್ ಹೇಳಿದ ಮಾತು ಕಿವಿಯಲ್ಲಿತ್ತು. ” ಇಂದು ಇಲ್ಲವೇ ಮತ್ತೆಂದೂ ಇಲ್ಲ” ರವಿ ಅಲ್ಲೇ ನಿಂತ. ಕ್ರಿಕೆಟ್ ನ ಕೈ ಹಿಡಿದ. ಕ್ರಿಕೆಟ್ ಆತನ ಕೈ ಹಿಡಿಯಿತು. ಆತ ಇನ್ನೂ 12ನೇ ತರಗತಿ ಪರೀಕ್ಷೆ ಬರೆದಿಲ್ಲ!

ಐಪಿಎಲ್ ಮುಗಿದ ನಂತರ ವಿನು ಮಂಕಡ್ ಟ್ರೋಫಿಯಲ್ಲಿ ರಾಜಸ್ಥಾನ ರಾಜ್ಯ ತಂಡದ ಪರ ಮೊದಲ ಬಾರಿಗೆ ರವಿ ಆಡಿದ. ಆರು ಲಿಸ್ಟ್ ಎ ಪಂದ್ಯಗಳಿಂದ ಎಂಟು ವಿಕೆಟ್, ಆರು ಟಿ20 ಪಂದ್ಯಗಳಲ್ಲಿ ಆರು ವಿಕೆಟ್ ಪಡೆದ ರವಿ ಮೊದಲ ಬಾರಿಗೆ ಅಂಡರ್‌ 19 ತಂಡಕ್ಕೆ ಆಯ್ಕೆಯಾದ. ಬಾಂಗ್ಲಾದೇಶದ ವಿರುದ್ಧದ ಅದ್ಭುತ ಪ್ರದರ್ಶನದಿಂದ ವಿಶ್ವ ಕಪ್ ತಂಡಕ್ಕೂ ಆಯ್ಕೆಯಾದ. ವಿಶ್ವ ಕಪ್ ನಲ್ಲೂ ಅಭೂತಪೂರ್ವ ಯಶಸ್ಸು ಗಳಿಸಿದ ರವಿ ಒಟ್ಟು 17 ವಿಕೆಟ್ ಪಟೆದ. ಇದು ಅಂಡರ್ 19 ವಿಶ್ವ ಕಪ್ ಇತಿಹಾಸದಲ್ಲಿ ಭಾರತೀಯ ಬೌಲರ್ ಓರ್ವನ ದಾಖಲೆ. ಫೈನಲ್‌ ನಲ್ಲೂ ನಾಲ್ಕು ವಿಕೆಟ್ ಪಡೆದು ಗೆಲುವಿನ ಆಸೆ ಚಿಗುರಿಸಿದ್ದ.

ಐಪಿಎಲ್ ನಲ್ಲಿ ರವಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಯ್ಕೆಯಾಗಿದ್ದಾನೆ. 20 ಲಕ್ಷ ಮೂಲ ಬೆಲೆಯ ರವಿ ಪಡೆದಿದ್ದು ಬರೋಬ್ಬರಿ ಎರಡು ಕೋಟಿ. ಸಹಜವಾಗಿ ಖುಷಿಗೊಂಡಿದ್ದರೂ ಇದಕ್ಕಿಂತ ಖುಷಿ ಭಾರತ ತಂಡವನ್ನು ಸೇರುವಾಗ ಆಗುತ್ತದೆ. ಆ ದಿನವನ್ನು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ.

 

-ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next