ದುಬೈ: ಆಸ್ಟ್ರೇಲಿಯ ವಿರುದ್ಧ ಭಾರತ 4-1 ಸರಣಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಸ್ಪಿನ್ನರ್ ರವಿ ಬಿಷ್ಣೋಯ್ ಐಸಿಸಿ ಟಿ 20 ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ.
ಬುಧವಾರ ಐಸಿಸಿ ನೂತನ ರ‍್ಯಾಂಕಿಂಗ್ ಪ್ರಕಟಿಸಿದ್ದು, ಯುವ ಆರಂಭಿಕ ಬ್ಯಾಟ್ಸ್ ಮ್ಯಾನ್ ಶುಭಮನ್ ಗಿಲ್ ಏಕದಿನ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಆಸೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಬಿಷ್ಣೋಯ್ ಒಂಬತ್ತು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಬಿಷ್ಣೋಯ್ ಅಗ್ರಸ್ಥಾನಕ್ಕೆರಿದ ನಂತರ, ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಆದಿಲ್ ರಶೀದ್ ಮತ್ತು ವನಿಂದು ಹಸರಂಗ ತೃತೀಯ ಸ್ಥಾನದಲ್ಲಿದ್ದಾರೆ. ಮಹೇಶ್ ತೀಕ್ಷಣ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಾರತದ ಇನ್ನೋರ್ವ ಸ್ಪಿನ್ನರ್ ಅಕ್ಷರ್ ಪಟೇಲ್ 16 ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ತಲುಪಿದ್ದಾರೆ. 21 ವರ್ಷದ ಯಶಸ್ವಿ ಜೈಸ್ವಾಲ್ ಇತ್ತೀಚಿನ ಐಸಿಸಿ ಟಿ 20 ಬ್ಯಾಟರ್ಸ್ ಶ್ರೇಯಾಂಕದಲ್ಲಿ ಅತಿದೊಡ್ಡ ಪ್ರಗತಿ ಕಂಡಿದ್ದು 16 ಸ್ಥಾನಗಳನ್ನು ಮೇಲಕ್ಕೇರಿ 19 ನೇ ಸ್ಥಾನಕ್ಕೆ ತಲುಪಿದ್ದಾರೆ.
ಏಕದಿನ ರ‍್ಯಾಂಕಿಂಗ್‌ನಲ್ಲಿ ಬೌಲಿಂಗ್ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ.
ಬಾಂಗ್ಲಾದೇಶ ಮತ್ತು ನ್ಯೂಜಿ ಲ್ಯಾಂಡ್ ನಡುವಿನ ಪಂದ್ಯದ ನಂತರ ಟೆಸ್ಟ್ ಶ್ರೇಯಾಂಕದಲ್ಲಿ ಕೆಲವು ಬದಲಾವಣೆಗಳಾಗಿದೆ. ಕಿವೀಸ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಒಂದು ಸ್ಥಾನ ಜಿಗಿದು ಬ್ಯಾಟರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಕಿವೀಸ್ ಬ್ಯಾಟರ್ ಕೇನ್ ವಿಲಿಯಮ್ಸನ್ ಟೆಸ್ಟ್ ಬ್ಯಾಟ್ಸ್ ಮ್ಯಾನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ.