Advertisement
ಭಾನುವಾರವೂ ಹಲವು ಆಯಾಮಗಳಲ್ಲಿ ರವಿಬೆಳಗೆರೆಯನ್ನು ವಿಚಾರಣೆ ನಡೆಸಿದ ಸಿಸಿಬಿ ತಂಡಕ್ಕೆ ” ನನಗೂ ಈ ಆರೋಪಕ್ಕೂ ಸಂಬಂಧವಿಲ್ಲ’ ಸುಮ್ಮನೆ ಯಾಕೆ ಪದೇ ಪದೇ ಆ ವಿಚಾರ ಕೆಳುತ್ತೀರಿ. ನಾನ್ಯಾಕೆ ಅವನ ಹತ್ಯೆಗೆ ಸುಫಾರಿ ನೀಡಲಿ, ಅದರ ಅಗತ್ಯ ನನಗಿಲ್ಲ ಎಂಬ ಉತ್ತರವೇ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ರವಿ ಬೆಳಗೆರೆ ವಿಚಾರಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ಸಿಕ್ಕಿಲ್ಲವಾದ್ದರಿಂದ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತಷ್ಟು ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲು ಸಿಸಿಬಿ ಪೊಲೀಸರು ನಿರ್ಧರಿಸಿದ್ದಾರೆ.
ಈ ಮಧ್ಯೆ ಸೋಮವಾರ ರವಿ ಬೆಳಗೆರೆ ಪರ ವಕೀಲರು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಬೆಳಗೆರೆ ಅರ್ಜಿ ವಿಚಾರಣೆಯನ್ನು ಇಂದೇ ವಿಚಾರಣೆ ನಡೆಸುವಂತೆ ಜ್ಞಾಪನ ಪತ್ರ ( ಮೆಮೊ) ಸಲ್ಲಿಸುವ ಸಾಧ್ಯತೆಯಿದೆ.
Related Articles
ರವಿಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿಯವರನ್ನು ರಾಜರಾಜೇಶ್ವರಿ ನಗರದ ಅವರ ನಿವಾಸದಲ್ಲಿಯೇ ಸಿಸಿಬಿ ಅಧಿಕಾರಿಗಳ ತಂಡ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಮಹಿಳಾ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಸುಫಾರಿ ನೀಡಿದ ಆರೋಪ ಪ್ರಕರಣದ ಬಗ್ಗೆ ನನಗೆ ಏನು ಗೊತ್ತಿಲ್ಲ. ಸುನೀಲ್ ಹೆಗ್ಗರವಳ್ಳಿ ನಮ್ಮ ಪತ್ರಿಕೆಯ ವರದಿಗಾರ. ಸ್ನೇಹಿತನಷ್ಟೇ ಈ ಪ್ರಕರಣದ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ. ರವಿ ಬೆಳಗೆರೆ ಬಂಧನದ ವಿಷಯ ತಿಳಿದು ಶಾಕ್ ಆಗಿದೆ. ಬೆಳಗೆರೆ ಹಾಗೂ ಸುನೀಲ್ ನಡುವೆ ಯಾವ ಕಾರಣಕ್ಕೆ ಮುನಿಸಿತ್ತು ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ವೈಯಕ್ತಿವಾಗಿ ಈ ಪ್ರಕರಣದಲ್ಲಿ ನನ್ನ ಹೆಸರು ತರುತ್ತಿರುವುದು ನೋವಾಗುತ್ತಿದೆ ಎಂದಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
Advertisement
ಲೋಕೇಶ್ ಕೊಪ್ಪದ್ ವಿಚಾರಣೆ !ಮತ್ತೂಂದೆಡೆ ಸುಫಾರಿ ಹಂತಕರಿಗೆ ಹಾಯ್ ಬೆಂಗಳೂರು ಪತ್ರಿಕೆಯ ವರದಿಗಾರ ಲೋಕೇಶ್ ಕೊಪ್ಪದ್ ಅವರ ಮೊಬೈಲ್‌ನಿಂದಲೇ ಬೆಳಗೆರೆ ಕರೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾನುವಾರ 1 ಗಂಟೆ ಕಾಲ ಲೋಕೇಶ್ ಅವರನ್ನು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಲೋಕೇಶ್, ನನ್ನ ವಿರುದ್ಧದ ಆರೋಪ ಸುಳ್ಳಾಗಿದೆ, ಬೆಳಗೆರೆ ಅವರು ನನ್ನ ಮೊಬೈಲ್‌ನಿಂದ ಯಾರಿಗೂ ಕರೆ ಮಾಡಿಲ್ಲ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಲೋಕೇಶ್ ಕೊಪ್ಪದ್, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದೇನೆ. ನನ್ನ ಮೊಬೈಲ್‌ನಿಂದ ಯಾರಿಗೂ ದೂರವಾಣಿ ಕರೆ ಮಾಡಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಸ್ಪಷ್ಟಪಡಿಸಿದ್ದೇನೆ. ಸುನೀಲ್ ಹೆಗ್ಗರವಳ್ಳಿ ನನ್ನ ಸಹದ್ಯೋಗಿ, ಅವರಿಗೂ ರವಿ ಬೆಳಗೆರೆಯವರಿಗೂ ವೈಯಕ್ತಿಕ ಕಾರಣಗಳಿಗೆ ಮುನಿಸುಗಳಿರಬಹುದು ಅದು ನನಗೆ ಗೊತ್ತಿಲ್ಲ. ಇಡೀ ಪ್ರಕರಣಕ್ಕೆ ದಿನಕ್ಕೊಂದು ಹೊಸ ಆಯಾಮ, ರೆಕ್ಕೆ ಪುಕ್ಕ ಬರುತ್ತಿದೆ. ತನಿಖೆ ಪೂರ್ಣಗೊಳ್ಳಲಿ, ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದರು. ರವಿ ಬೆಳಗೆರೆ ಭೇಟಿ ಮಾಡಿದ ಶ್ರೀನಗರ ಕಿಟ್ಟಿ
ಸಿಸಿಬಿ ಕಸ್ಟಡಿಯಲ್ಲಿರುವ ರವಿಬೆಳಗೆರೆ ಅವರನ್ನು ಅಳಿಯ ಶ್ರೀನಗರ ಕಿಟ್ಟಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾವ ರವಿಬೆಳಗೆರೆ ಆರೋಗ್ಯ ಸುಧಾರಿಸಿದೆ. ಅವರ ವಿರುದ್ಧದ ಆರೋಪ ಪ್ರಕರಣದ ತನಿಖೆ ಪೂರ್ಣಗೊಳ್ಳಲಿ. ಕಾನೂನಿನ ಬಗ್ಗೆ ನಂಬಿಕೆಯಿದೆ. ಸುನೀಲ್ ಹೆಗ್ಗರವಳ್ಳಿ ಬಗ್ಗೆ ನಾನು ಮಾತನಾಡಲ್ಲ, ಯಾವ ವ್ಯಕ್ತಿಯ ಬಗ್ಗೆಯೂ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಹೆಗ್ಗರವಳ್ಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಭದ್ರತೆ ಕೋರಿದ ಸುನೀಲ್ ಹೆಗ್ಗರವಳ್ಳಿ
ಸುಫಾರಿ ಹತ್ಯೆಗೆ ಒಳಗಾಗಿದ್ದರು ಎನ್ನಲಾಗುತ್ತಿರುವ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ, ತಮಗೂ ತಮ್ಮ ಕುಟುಂಬಕ್ಕೂ ಜೀವ ಭಯವಿದ್ದು ಭದ್ರತೆ ನೀಡುವಂತೆ ಕೋರಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಆಯುಕ್ತರು, ಕೂಡಲೇ ಸೂಕ್ತ ರಕ್ಷಣೆ ನೀಡುವಂತೆ ದಕ್ಷಿಣ ವಿಭಾಗದ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರಿಂದ ಭದ್ರತೆಯ ಭರವಸೆ ದೊರೆತಿದೆ. ಅಂಗರಕ್ಷಕರನ್ನು ನೀಡುವಂತೆಯೂ ಮನವಿ ಮಾಡಲಾಗಿದ್ದು, ಕೆಲವು ಕಾನೂನು ಕ್ರಮಗಳನ್ನು ಪಾಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ ಎಂದು ಸುನೀಲ್ ಹೆಗ್ಗರವಳ್ಳಿ ಉದಯವಾಣಿಗೆ ತಿಳಿಸಿದರು. ಸಿಸಿಬಿ ಪೊಲೀಸರಿಗೆ ಸಿಗಲಿಲ್ಲ ವಿಜು ಬಡಿಗೇರ್!
ಇದುವರೆಗೂ ಆರೋಪಿ ಶಶಿಧರ್ ಮುಂಡೇವಾಡಿ ಹೇಳಿಕೆ ಆಧರಿಸಿಯೇ ಬೆಳಗೆರೆಯನ್ನು ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರಿಗೆ ಮತ್ತೂಬ್ಬ ಆರೋಪಿ ವಿಜುಬಡಿಗೇರ್ ಬಂಧನ ಸವಾಲಾಗಿ ಪರಿಗಣಿಸಿದೆ. ರವಿ ಬೆಳಗೆರೆ ಸುಫಾರಿ ನೀಡಿದ್ದರು ಎಂಬ ಶಶಿಧರ್ ಹೇಳಿಕೆಯ ಖಚಿತತೆ ಬಗ್ಗೆ ವಿಜುಬಡಿಗೇರ್ ಬಂಧನ ಅನಿವಾರ್ಯವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು, ವಿಜಯಪುರ, ಬಾಗಲಕೋಟೆ, ಜಮಖಂಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿಜು ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಸಿಗರೇಟ್‌ಗಾಗಿ ಗರಂ ಆದ ಬೆಳಗೆರೆ
ರವಿಬೆಳಗೆರೆ ಆರೋಗ್ಯ ತಪಾಸಣೆ ನಡೆಸುವ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ಸಿಸಿಬಿ ಪೊಲೀಸರಿಗೆ ಬೆಳಗೆರೆ ಸಿಗರೇಟ್‌ಗಾಗಿ ಬೇಡಿಕೆ ಇಟ್ಟರು. ಸಿಗರೇಟ್ ನೀಡದಿದ್ದರೆ ಕಾರಿನ ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸಿಗರೇಟ್ ನೀಡುವವರೆಗೂ ಗರಂ ಆಗಿದ್ದ ಬೆಳಗೆರೆ ಸಿಗರೇಟ್ ನೀಡಿದ ಬಳಿಕವೇ ಕಾರಿನ ಬಾಗಿಲು ತೆಗೆದರು.