Advertisement
ಸೋಮವಾರಕ್ಕೆ ಸಿಸಿಬಿ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಮಧ್ಯಾಹ್ನ 12.30ರ ಸುಮಾರಿಗೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ರವಿ ಬೆಳಗೆರೆಯನ್ನ ಹಾಜರು ಪಡಿಸಲಾಗಿತ್ತು.ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಜಗದೀಶ್ ರವಿ ಬೆಳಗೆರೆಗೆ ಡಿ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
Related Articles
ಇದೇ ವೇಳೆ ಆರೋಪಿ ರವಿ ಬೆಳಗೆರೆ ಪರ ವಕೀಲ ದಿವಾಕರ್, ರವಿ ಬೆಳೆಗೆರೆ ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಸುಮಾರು 100 ಪುಟ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ರವಿಬೆಳಗೆರೆ ದಿನಕ್ಕೆ 30ಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸುತ್ತಾರೆ. ಹೀಗಾಗಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯನ್ನು ಸೂಚಿಸಬೇಕು ಎಂದು ಮನವಿ ಮಾಡಿದರು.
Advertisement
ಮನವಿ ತಿರಸ್ಕರಿಸಿದ ನ್ಯಾ.ಜಗದೀಶ್, ಇಂತಹ ಪ್ರಕರಣದಲ್ಲಿ ಆ ರೀತಿ ಆದೇಶ ನೀಡಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ಜೈಲಿನ ಮುಖ್ಯಅಧೀಕ್ಷಕರಿಗೆ ಸಲ್ಲಿಸಿ ಅಲ್ಲಿಯೇ ಸೂಕ್ತ ಚಿಕಿತ್ಸೆ ಕೊಡುತ್ತಾರೆ. ಒಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅನಿವಾರ್ಯವಾದರೆ, ಜೈಲಿನ ಅಧಿಕಾರಿಗಳೇ ದಾಖಲಿಸುತ್ತಾರೆ ಎಂದು ಆದೇಶಿಸಿದರು.
ಬುಧವಾರ ಜಾಮೀನು ಅರ್ಜಿ ಸಲ್ಲಿಕೆನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರವಿ ಬೆಳಗೆರೆ ಪರ ವಕೀಲ ದಿವಾಕರ್, ನಮಗೆ ಸಿಕ್ಕಿರುವ ಮಾಹಿತಿ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದರೆ, ಇದೊಂದು ದೊಡ್ಡ ಮಟ್ಟದ ಷಡ್ಯಂತ್ರ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಸಮರ್ಥ ದಾಖಲೆಗಳ ಜತೆ ಜಾಮೀನು ಅರ್ಜಿ ಸಲ್ಲಿಸುತ್ತೇವೆ. ಜತೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕೊಲೆ ಯತ್ನ ಪ್ರಕರಣದ ಜಾಮೀನು ಅರ್ಜಿ ಸಲ್ಲಿಸಲು ಬರುವುದಿಲ್ಲ. ಹೀಗಾಗಿ ಬುಧವಾರ ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದರು. ರವಿ ಬೆಳಗೆರೆ ಕೈದಿ ನಂಬರ್ 12785
ರವಿ ಬೆಳಗೆರೆಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಕಳೆದ ನಾಲ್ಕು ದಿನಗಳಿಂದ ಸಿಸಿಬಿ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ರವಿ ಬೆಳಗೆರೆಯನ್ನು ನ್ಯಾಯಾಲಯ ಆದೇಶದನ್ವಯ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಕಳುಹಿಸಲಾಗಿದೆ. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಪ್ರತ್ಯೇಕ ವಾರ್ಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೈಲಿಗೆ ಕರೆದೊಯ್ದ ಸಿಸಿಬಿ ಅಧಿಕಾರಿಗಳು ರವಿ ಬೆಳಗೆರೆ ಅವರನ್ನು ಜೈಲಿನ ಅಧಿಕಾರಿಗಳಿಗೆ ಒಪ್ಪಿಸಿ, ಅವರ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದರು. ನಂತರ ಜೈಲಿನ ನಿಯಮದಂತೆ 12785ನೇ ವಿಚಾರಾಣಾಧೀನ ಕೈದಿ ಸಂಖ್ಯೆ ಕೊಟ್ಟು ಸಮವಸ್ತ್ರ ನೀಡಲಾಯಿತು. ಅವರ ಹೆಸರನ್ನು ನೋಂದಣಿ ಪುಸ್ತಕದಲ್ಲಿ ಬರೆದುಕೊಳ್ಳಲಾಯಿತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ರವಿ ಬೆಳಗೆರೆಯವರನ್ನು ಜೈಲಿನೊಳಗೆ ಕರೆದೊಯ್ಯುತ್ತಿದ್ದಂತೆ ಅವರನ್ನು ಕಾಣಲು ಕೆಲ ಕೈದಿಗಳು ಮುಗಿಬಿದ್ದರು. ನಮ್ಮ ಬಗ್ಗೆ ರವಿಬೆಳಗೆರೆ ಪತ್ರಿಕೆಯಲ್ಲಿ ಬರೆದಿದ್ದಾರೆ. ಅವರಿಗೆ ಅನಾರೋಗ್ಯವಾಗಿದೆ ನಾವು ಅವರ ಸೇವೆ ಮಾಡುತ್ತೇವೆ ಎಂದು ಜೈಲಿನ ಅಧಿಕಾರಿಗಳ ಬಳಿ ಕೆಲವರು ಕೇಳಿಕೊಂಡರು. ಆದರೆ, ಇದಕ್ಕೆ ಅವಕಾಶ ನಿರಾಕರಿಸಲಾಯಿತು ಎಂದು ತಿಳಿದು ಬಂದಿದೆ. ಸಿಎಂಗೆ ಮನವಿ ಸಲ್ಲಿಸಿದ ಸುನಿಲ್
ಈ ಮಧ್ಯೆ ತಮ್ಮ ಕೊಲೆಗೆ ಸುಪಾರಿ ನೀಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ತಮಗೆ ರಕ್ಷಣೆ ನೀಡುವಂತೆ ವಿಧಾನಸೌಧಕ್ಕೆ ಆಗಮಿಸಿ ಸಿಎಂ ಸಿದ್ದರಾಮಯ್ಯಅವರನ್ನು ಭೇಟಿ ಮಾಡಿದರು. ರವಿ ಬೆಳಗೆರೆ ಪ್ರಭಾವಿ ವ್ಯಕ್ತಿಯಾಗಿದ್ದು, ಭೂಗತ ಲೋಕದ ನಂಟಿದೆ. ಹೀಗಾಗಿ ಅವರು ಜೈಲಲ್ಲಿದ್ದುಕೊಂಡೇ ಅಥವ ಹೊರಗೆ ಬಂದಲ್ಲಿ ನನ್ನ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ನನಗೆ ವಯಸ್ಸಾದ ತಂದೆ -ತಾಯಿ, ಮಡದಿ ಮಕ್ಕಳಿದ್ದಾರೆ. ಸಾಕಷ್ಟು ಜನ ಗನ್ ಮ್ಯಾನ್ ಇಟ್ಟುಕೊಳ್ಳುವ ಸಾಮರ್ಥ್ಯವೂ ಇಲ್ಲ. ಹೀಗಾಗಿ ಪೊಲೀಸ್ ರಕ್ಷಣೆ ನೀಡುವಂತೆ ಸುನಿಲ್ ಮನವಿ ಸಲ್ಲಿಸಿದರು. ವಿಜಯಪುರದಲ್ಲಿ ಪತ್ರಕರ್ತ ಮಳಗೊಂಡ ವಿಚಾರಣೆ
ವಿಜಯಪುರ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಜೈಲು ಸೇರಿರುವ ಪತ್ರಕರ್ತ ರವಿ ಬೆಳೆಗೆರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಆಗಮಿಸಿರುವ ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆಯೇ ಜಿಲ್ಲೆಗೆ ಆಗಮಿಸಿರುವ ಸಿಸಿಬಿ ಪೊಲೀಸರು, ಸುನೀಲ್ ಹತ್ಯೆಗೆ ಸುಪಾರಿ ಪಡೆದಿರುವ ಆರೋಪ ಎದುರಿಸುತ್ತಿರುವ ಶಶಿಧರ ಮುಂಡೇವಾಡನ ಸಂಪರ್ಕ ಜಾಲ ಬೇಧಿಸಲು ಹಲವರ ವಿಚಾರಣೆ ನಡೆಸಿದ್ದಾರೆ. ಇದರ ಮಧ್ಯೆ ಸೋಮವಾರ ನಗರದ ಹೋಟೆಲ್ ಒಂದಕ್ಕೆ ಸ್ಥಳೀಯ ಪತ್ರಿಕೆಯ ಸಂಪಾದಕ ಟಿ.ಕೆ. ಮಳಗೊಂಡ ಅವರನ್ನು ಕರೆಸಿಕೊಂಡು ಸುಮಾರು 5 ಗಂಟೆ ವಿಚಾರಣೆ ನಡೆಸಿದ್ದಾರೆ. ಸುನೀಲ ಹೆಗ್ಗರವಳ್ಳಿ ಹತ್ಯೆಗೆ ರವಿ ಬೆಳಗೆರೆ ಅವರಿಂದ ಸುಪಾರಿ ಪಡೆದಿರುವ ಆರೋಪ ಎದುರಿಸುತ್ತಿರುವ ಶಶಿಧರ ಜೊತೆ ಪತ್ರಕರ್ತ ಟಿ.ವಿ. ಮಳಗೊಂಡ ಸಂಪರ್ಕ ಹೊಂದಿದ್ದರೆನ್ನಲಾಗಿದೆ. ಅಲ್ಲದೇ ಅಪರಾಧ ಕೃತ್ಯಗಳಲ್ಲಿ ಶಶಿಧರ ಜತೆ ಕೈ ಜೋಡಿಸಿರುವ ಆರೋಪ ಎದುರಿಸುತ್ತಿರುವ ಆತನ ಅಳಿಯ ವಿಜು ಬಡಿಗೇರಗಾಗಿ ಶೋಧ ನಡೆಸಿದ್ದಾರೆ. ರವಿ ಬೆಳಗೆರೆ ಅವರು ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ ತಾಲೂಕಿನಲ್ಲಿ ನಡೆದ ಹತ್ಯೆ ಪ್ರಕರಣಗಳಿಗೆ “ಭೀಮಾ ತೀರದ ಹಂತಕರು’ ಎಂದು ವ್ಯಾಖ್ಯಾನಿಸಿದ್ದರು. ಈ ವೇಳೆ ಭೀಮಾ ತೀರದ ಅಪರಾಧ ಕೃತ್ಯಗಳ ವರದಿಗಾಗಿ ರವಿ ಬೆಳಗೆರೆ ಜಿಲ್ಲೆಗೆ ಬಂದಾಗ ಟಿ.ಕೆ.ಮಳಗೊಂಡ ಅವರನ್ನೇ ಸಂಪರ್ಕಿಸುತ್ತಿದ್ದರು. ಇತ್ತೀಚೆಗೆ ಹಲವು ದೃಶ್ಯ ಮಾಧ್ಯಮಗಳಿಗೂ ಹೇಳಿಕೆ ನೀಡಿರುವ ಪತ್ರಕರ್ತ ಮಳಗೊಂಡ, ಭೀಮಾ ತೀರದ ರಕ್ತ ಚರಿತ್ರೆಯ ಕುರಿತು ವಿವರಗಳನ್ನು ಹಂಚಿಕೊಂಡಿದ್ದರು. ಹೀಗಾಗಿ ರವಿ ಬೆಳಗೆರೆ, ಭೀಮಾ ತೀರದಲ್ಲಿ ಶಾರ್ಪ್ ಶೂಟರ್ ಎನಿಸಿಕೊಂಡಿರುವ ಶಶಿಧರ ನಂಬರ್ ತಮ್ಮ ಬಳಿ ಇಲ್ಲದ ಕಾರಣ ತಮ್ಮೊಂದಿಗೆ ಸಂಪರ್ಕದಲ್ಲಿರುವ ಮಳಗೊಂಡ ಅವರನ್ನು ಸಂಪರ್ಕಿಸಿ ಶಶಿಧರ ಮೊಬೈಲ್ ನಂಬರ್ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ರವಿ ಬೆಳೆಗೆರೆಗೆ ನಿಮ್ಮ ನಂಬರ್ ಕೊಡಬಹುದೇ ಎಂದು ಮುಂಡೇವಾಡನನ್ನು ಸಂಪರ್ಕಿಸಿ ಆತನ ಸಮ್ಮತಿಯ ಬಳಿಕವೇ ಬೆಳಗೆರೆಗೆ ಮಳಗೊಂಡ ಅವರು ಮೊಬೈಲ್ ನಂಬರ್ ನೀಡಿದ್ದರು ಎನ್ನಲಾಗಿದೆ. ಶಶಿಧರ ಮುಂಡೇವಾಡನ ಅಳಿಯ ವಿಜು ಬಡಿಗೇರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ಜಿಲ್ಲೆಯ ಇಂಡಿ, ಸಿಂದಗಿ, ಚಡಚಣ ತಾಲೂಕಿನ ಹಲವು ಪ್ರದೇಶಗಳಲ್ಲಿ ಶೋಧ ನಡೆಸಿದ್ದಾರೆ.