ಬೆಂಗಳೂರು: ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟ ಪ್ರಕರಣದ ವಿಚಾರಣೆ ನಡೆಸಿದ 65ನೇ ಸಿಸಿಎಚ್ ನ್ಯಾಯಾಲಯ ರವಿಬೆಳಗೆರೆಗೆ ನೀಡಿರುವ ಷರತ್ತು ಬದ್ಧ ಮಧ್ಯಂತರ ಜಾಮೀನನ್ನು ಡಿ.18ರ ವರೆಗೆ ವಿಸ್ತರಣೆ ಮಾಡಿದೆ.
ವಿಚಾರಣೆ ವೇಳೆ ಮಧ್ಯಂತರ ಜಾಮೀನು ವಿಸ್ತರಿಸದಂತೆ ಸರ್ಕಾರಿ ಪರ ವಕೀಲರು ಮೌಖೀಕವಾಗಿ ಕೋರ್ಟ್‌ಗೆ ಮನವಿ ಮಾಡಿದ್ದರು. ಅಲ್ಲದೆ, ಮುಖ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲವಕಾಶ ನೀಡಬೇಕೆಂದು ಮನವಿ ಮಾಡಿದರು. “ರವಿ ಬೆಳಗೆರೆಗೆ ಆರೋಗ್ಯ ಚೆನ್ನಾಗಿದೆ, ಹೀಗಾಗಿ ಅವರಿಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಬೇಡಿ’ ಎಂದು ವಾದಿಸಿದರು.
ಈ ವೇಳೆ ನ್ಯಾಯಾಧೀಶ ಮಧುಸೂದನ್, ರವಿಬೆಳಗೆರೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅವರ ವಕೀಲರು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಈ ದಾಖಲೆಗಳು ಹಳೇಯ ದಾಖಲೆಗಳು, ತೀರಾ ಇತ್ತೀಚಿನ ಯಾವುದೇ ದಾಖಲೆಗಳು ಅವರ ಬಳಿ ಇಲ್ಲ ಎಂದರು.
ಮತ್ತೂಂದೆಡೆ ರವಿ ಬೆಳಗೆರೆಗೆ ಜಾಮೀನು ನೀಡಬಾರದು ಎಂದು ಸುನಿಲ್ ಹೆಗ್ಗರವಳ್ಳಿ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಬೆಳಗೆರೆ ಪರ ವಕೀಲ ದಿವಾಕರ್, ಈ ಪ್ರಕರಣದಲ್ಲಿ ಸುನಿಲ್ ಹೆಗ್ಗರವಳ್ಳಿ ಅರ್ಜಿದಾರರಲ್ಲ. ದೂರುದಾರರೂ ಅಲ್ಲ. ಈ ಹಿನ್ನೆಲೆಯಲ್ಲಿ ಅವರ ವಾದ ಪರಿಗಣಿಸದಂತೆ ವಾದ ಮಂಡಿಸಿದರು.
ಕೊನೆಗೆ ವಾದ ಪ್ರತಿವಾದ ಆಲಿಸಿದ ನ್ಯಾ.ಮಧುಸೂದನ್ ಅವರು, ರವಿ ಬೆಳಗೆರೆಗೆ ಡಿ.16ರವರೆಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿಯನ್ನು ಡಿ.18ರವರೆಗೆ ವಿಸ್ತರಿಸಿ ಆದೇಶಿಸಿದರು.