Advertisement

ರವಿ ಬೆಳಗೆರೆ ವಿಚಾರಣೆಗೆ ಕಸರತ್ತು ; 2 ನೇ ಪತ್ನಿ ನಾಪತ್ತೆ

12:16 PM Dec 09, 2017 | Team Udayavani |

ಬೆಂಗಳೂರು: ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ “ಹಾಯ್‌ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ ಬೆನ್ನಲ್ಲೇ  ಅವರ 2 ನೇ ಪತ್ನಿ ನಾಪತ್ತೆಯಾಗಿದ್ದು, ಅವರ ಮೊಬೈಲ್‌ ಸ್ವಿಚ್‌ಡ್‌ ಆಫ್ ಆಗಿದ್ದು, ಫೇಸ್‌ಬುಕ್‌ ಖಾತೆಯನ್ನೂ ಕೂಡ ಸ್ಥಗಿತಗೊಳಿಸಿದ್ದಾರೆ. 

Advertisement

ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಲೇಔಟ್‌ನಲ್ಲಿರುವ ನಿವಾಸದಲ್ಲಿ ಯಶೋಮತಿ  ಅವರು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. 

ಸುಪಾರಿ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ  ವಿಚಾರಣೆ ನಡೆಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 

 ಈ ಹಿಂದೆ “ಹಾಯ್‌ ಬೆಂಗಳೂರು’ ಪತ್ರಿಕೆಯಲ್ಲಿರವಿ ಬೆಳಗೆರೆ ಬಳಿಯೇ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿಯನ್ನು  ಕೊಲೆ ಮಾಡಲು ವಿಜಯಪುರದ ಶಶಿಧರ್‌ ರಾಮಚಂದ್ರ ಮುಂಡೆವಾಡಿ ಎಂಬಾತನಿಗೆ 30 ಲಕ್ಷ ರೂ.ಗೆ ಸುಪಾರಿ ನೀಡಿ ಮುಂಗಡವಾಗಿ 15 ಸಾವಿರ ರೂ. ಜತೆಗೆ ಒಂದು ಗನ್‌ ಹಾಗೂ ನಾಲ್ಕು ಗುಂಡು ಸಹನೀಡಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿತ್ತು. 

ಸುನಿಲ್‌ ಮತ್ತು ಯಶೋಮತಿ ನಡುವೆ ಅನೈತಿಕ ಸಂಬಂಧ ಇದ್ದ ಕಾರಣಕ್ಕೆ ಸುಪಾರಿ  ನೀಡಿದ್ದರು ಎಂದು ಹೇಳಲಾಗಿದೆ. 

Advertisement

ವಿಚಾರಣೆಗೆ ಕಸರತ್ತು 
ಬಂಧನಕ್ಕೊಳಗಾಗಿರುವ  ರವಿ  ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದು, ಪುತ್ರಿ ಚೇತನಾ ಬೆಳಗೆರೆ ಅವರು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಬೆಳಗೆರೆಪೊಲೀಸರ ಬಳಿ ನನಗೆ ಹೆಚ್ಚಿಗೆ ಮಾತನಾಡಲು ಸಾಧ್ಯವಿಲ್ಲ, ನನಗೆ ಪೆನ್‌ ಮತ್ತು ಪೇಪರ್‌ ಕೋಡಿ  ಎಂದು ಕೇಳಿದ್ದು, ಅದರಲ್ಲಿ ಕೆಲ ವಿಚಾರಗಳನ್ನು ಬರೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಬಳಿಯಿರುವ ರವಿ ಬೆಳಗೆರೆಯ ತೋಟದ ಮನೆ, ಚಿಕ್ಕಮಗಳೂರಿನಲ್ಲಿರುವ ಕಾಫಿ ಎಸ್ಟೇಟ್‌ನಲ್ಲೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. 

ಅರಣ್ಯಾಧಿಕಾರಿಗಳಿಂದ ತನಿಖೆ 

ಬೆಳಗೆರೆ ಕಚೇರಿಯಲ್ಲಿ ಸುಮಾರು 50 ವರ್ಷ ಹಳೆಯದಾದ ಜಿಂಕೆಯ ಚರ್ಮ ಮತ್ತು ಆಮೆಯ ಚಿಪ್ಪು ಪತ್ತೆಯಾಗಿರುವ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಗಳಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸಿಸಿಬಿ ಅಧಿಕಾರಿಗಳು ಪತ್ರ ಬರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next