Advertisement

ಸ್ಪೀಕರ್‌ ಎದುರು ಸಂಪಾದಕರು ಹಾಜರ್‌

03:45 AM Jul 04, 2017 | Team Udayavani |

ಬೆಂಗಳೂರು: ಶಾಸಕರ ಹಕ್ಕು ಚ್ಯುತಿ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಯ್‌ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಹಾಗೂ ಯಲಹಂಕ ವಾಯ್ಸ ಪತ್ರಿಕೆ ಸಂಪಾದಕ ಅನಿಲ್‌ ರಾಜ್‌ ಸೋಮವಾರ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್‌ ಎದುರು ಹಾಜರಾದರು.

Advertisement

ಜತೆಗೆ ತಮ್ಮ ಪರ ವಕೀಲರ ಮೂಲಕ ಸ್ಪೀಕರ್‌ ನೀಡಿರುವ ಆದೇಶವನ್ನು ಮರು ಪರಿಶೀಲನೆ ಮಾಡುವಂತೆಯೂ ಮನವಿ ಮಾಡಿಕೊಂಡರು.  ಈ ಬಗ್ಗೆ ಪರಿಶೀಲಿಸುವುದಾಗಿ ಸ್ಪೀಕರ್‌ ಭರವಸೆ ನೀಡಿದರು. ಆದರೆ, ಅದುವರೆಗೂ ಇಬ್ಬರನ್ನೂ ಬಂಧಿಸಬೇಕೆ? ಬೇಡವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರವಿಬೆಳಗೆರೆ ಹಾಗೂ ಅನಿಲ್‌ರಾಜ ಪರ ವಕೀಲರ ಶಂಕರಪ್ಪ,  ಸ್ಪೀಕರ್‌ಗೆ ಎಲ್ಲ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮುಂದಿನ ಅಧೀವೇಶನದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ರವಿ ಬೆಳೆಗೆರೆ ಮತ್ತು ಅನಿಲ್‌ ರಾಜ್‌ ಅವರನ್ನು ಬಂಧಿಸುವಂತಿಲ್ಲ ಎಂದು ತಿಳಿಸಿದರು.

ಆದರೆ, ಸ್ಪೀಕರ್‌ ಕೆ.ಬಿ.ಕೋಳಿವಾಡ್‌,  ಇಬ್ಬರು ಸಂಪಾದಕರ ವಿರುದ್ಧ ಹಕ್ಕು ಬಾಧ್ಯತಾ ಸಮಿತಿ ನೀಡಿರುವ ಶಿಫಾರಸ್ಸಿನಂತೆ ಸದನ ನಿರ್ಣಯ ಕೈಗೊಂಡಿದೆ. ಸದನದ ನಿರ್ಣಯ ತಡೆ ಹಿಡಿಯಲು ನನಗೆ ಅಧಿಕಾರವಿಲ್ಲ. ಅವರನ್ನು ಬಂಧಿಸುವಂತೆ ಸದನ ಮಾಡಿರುವ ನಿರ್ಣಯವನ್ನು ಜಾರಿಗೊಳಿಸಲು ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ಸೂಚಿಸಿದ್ದೇನೆ. ಅವರ ಪರ ವಕೀಲರು ಬಂದು ಸದನದ ಆದೇಶವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅದನ್ನು ನಾನು ತೀರ್ಮಾನ ಕೈಗೊಳ್ಳಲು ಬರುವುದಿಲ್ಲ. ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದರೆ, ಮತ್ತೆ ಸದನದಲ್ಲಿಯೇ ನಿರ್ಧಾರವಾಗಬೇಕು. ಅಲ್ಲಿಯವರೆಗೂ ಸದನದ ಆದೇಶ ಯಥಾಸ್ಥಿತಿಯಲ್ಲಿರುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಇಬ್ಬರು ಸಂಪಾದಕರುಸ ಸ್ಪೀಕರ್‌ ಮುಂದೆ ಹಾಜರಾದ ನಂತರ ಅವರ ಪರವಾಗಿ ಸ್ಪೀಕರ್‌ ಕೆ.ಬಿ. ಕೋಳಿವಾಡ್‌ ಅವರಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ವಕೀಲ ಶಂಕರಪ್ಪ, ಸದನದ ಒಳಗೆ ಶಾಸಕರಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡರೆ ಮಾತ್ರ ಅಂತಹವರ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅವಕಾಶವಿದೆ. ಆದರೆ, ನಮ್ಮ ಕಕ್ಷಿದಾರರು, ಯಾವುದೇ ಶಾಸಕರಿಗೆ ಸದನದ ಒಳಗೆ ಹಕ್ಕುಚ್ಯುತಿಯಾಗುವಂತೆ ನಡೆದುಕೊಂಡಿಲ್ಲ ಎಂದು ವಿವರಿಸಿದರು. ಅಲ್ಲದೇ ಅದಕ್ಕೆ ಪೂರಕ ಎನ್ನುವಂತೆ ಗುಜರಾತ್‌ ಅಸೆಂಬ್ಲಿ ಹಾಗೂ ಇಂಗ್ಲೆಂಡ್‌ ಸಂಸತ್ತಿನ ಉದಾಹರಣೆ ನೀಡಿದರು.

ಅದಕ್ಕೆ ಪ್ರತಿಯಾಗಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಸದನದ ನಿಯಮಗಳ ಪ್ರಕಾರ ಶಾಸಕರ ಹಕ್ಕಿಗೆ ಸದನದ ಒಳಗೆ ಅಥವಾ ಹೊರಗೆ ಎಲ್ಲಿಯೇ ಚ್ಯುತಿಯಾದರೂ, ಅಂತಹವರ ವಿರುದ್ಧ ಸದನ ವಾಗ್ಧಂಡನೆ ವಿಧಿಸಲು ಹಾಗೂ ಜೈಲಿಗೆ ಕಳುಹಿಸುವ ಅಧಿಕಾರ ಹೊಂದಿದೆ ಎಂದು ಪ್ರತಿಪಾದಿಸಿದರು.

Advertisement

ನಂತರ ಶಂಕರಪ್ಪ  ಇಬ್ಬರು ಸಂಪಾಕದರು, ಶಾಸಕರ ಹಕ್ಕು ಚ್ಯುತಿಯಾಗಿರುವುದಕ್ಕೆ ಬೇಷರತ್‌ ಕ್ಷಮೆ ಕೇಳಲು ಸಿದ್ದರಿದ್ದಾರೆ. ಅವರ ಪ್ರಕರಣವನ್ನು ಮರು ಪರಿಶೀಲನೆ ನಡೆಸಿ, ಒಂದು ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿರುವುದನ್ನು ಮರು ಪರಿಶೀಲಿಸಬೇಕು ಎಂದು ಮನವಿ ಮಾಡಿಕೊಂಡರು. ಅದಕ್ಕೆ ಸ್ಪೀಕರ್‌ ಈ ಬಗ್ಗೆ ಪರಿಗಣಿಸುವುದಾಗಿ ತಿಳಿಸಿದರು.

ಇಬ್ಬರು ಸಂಪಾದಕರನ್ನು ಬಂಧಿಸುವಂತೆ ನೀಡಿರುವ ಆದೇಶವನ್ನು ತಡೆ ಹಿಡಿಯುವಂತೆ ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ನನಗೆ ಯಾವುದೇ ರೀತಿಯ ಸೂಚನೆಯನ್ನೂ ನೀಡಿಲ್ಲ. ಅವರನ್ನು ಬಂಧಿಸುವಂತೆ ಸದನ ತೆಗೆದುಕೊಂಡ ನಿರ್ಧಾರದಂತೆ ಗೃಹ ಇಲಾಖೆಗೆ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಗೃಹ ಇಲಾಖೆ ಕ್ರಮ ಕೈಗೊಂಡಿದಿಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು. ಬಂಧನದ ಯಾವುದೇ ಆದೇಶವನ್ನು ತಡೆ ಹಿಡಿದಿಲ್ಲ. ಜೈಲು ಶಿಕ್ಷೆ ಪ್ರಕರಣ ಮರು ಪರಿಶೀಲನೆ ನಡೆಸಲು ಸರ್ಕಾರ ವಿಶೇಷ ಅಧಿವೇಶನ ಕರೆಯಬಹುದು. ಅಧಿವೇಶನ ಕರೆಯುವ  ನಿರ್ಧಾರ ನಾನು ತೆಗೆದುಕೊಳ್ಳಲು ಬರುವುದಿಲ್ಲ.
– ಕೆ.ಬಿ.ಕೋಳಿವಾಡ್‌, ಸ್ಪೀಕರ್‌.

Advertisement

Udayavani is now on Telegram. Click here to join our channel and stay updated with the latest news.

Next