Advertisement

Ravi Basrur: ಕಲಿತ ಶಾಲೆಗೆ ಕಾಯಕಲ್ಪ ನೀಡಿದ ರವಿ ಬಸ್ರೂರು

12:31 PM Apr 17, 2024 | Team Udayavani |

ಬಸ್ರೂರು: ತಾನು ಕಲಿತ ಶಾಲೆ, ಬದುಕು ಕಟ್ಟಿಕೊಡಲು ನೆರವಾದ ಶಾಲೆಯ ಅಭಿವೃದ್ಧಿಗೆ, ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುವ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇತರರಿಗೂ ಮಾದರಿಯಾಗಿದ್ದಾರೆ.

Advertisement

ಬಸ್ರೂರಿನ ಕೇಂದ್ರ ಸ್ಥಾನದಲ್ಲಿ, ಶತಮಾನದ ಇತಿಹಾಸ ಹೊಂದಿರುವ ಬಿ.ಎಮ್‌. ಶಾಲೆಯನ್ನು ರವಿ ಬಸ್ರೂರು ಅವರು ಸುಮಾರು 25 ಲಕ್ಷ ರೂ. ವಿನಿಯೋಗಿಸಿದ್ದು, ಇದರಿಂದ ಶಾಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. 132 ವರ್ಷಗಳ ಹಿಂದೆ 1892 ರ ನ.1 ರಂದು ಎಕ್ಸುಲರಿ ಬಾಸೆಲ್‌ ಮಿಷನ್‌ ಸ್ಕೂಲ್‌ ಅಸೋಸಿಯೇಶನ್‌ನಿಂದ ಬಸ್ರೂರಿನಲ್ಲಿ ಬಿ.ಎಂ. ಶಾಲೆ ಸ್ಥಾಪನೆ ಮಾಡಿದ್ದರು. ಸಹಸ್ರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಾಕ್ಷಿಯಾದ ಈ ಶಾಲೆಯಲ್ಲಿ ಒಂದರಿಂದ ಏಳನೇ
ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ.

ಸುದೀರ್ಘ‌ ಇತಿಹಾಸವಿದ್ದರೂ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ಬಾಗಿಲುಗಳು ಗಟ್ಟಿಯಾಗಿರಲಿಲ್ಲ. ನೆಲ ಕುಳಿ ಬಿದ್ದಿದೆ. ಹೀಗೆ ಕೆಲವು ವರ್ಷಗಳಿಂದ ಹತ್ತಾರು ಸಮಸ್ಯೆಗಳು ಉದ್ಭವವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಂಚೂಣಿಯಲ್ಲಿ ನಿಂತವರು, ಇದೇ ಶಾಲೆಯಲ್ಲಿ ಕಲಿತ ರವಿ ಬಸ್ರೂರು ಅವರು.

ಶಾಲೆಗೆ ಸದೃಢ ಗೇಟ್‌, ಕಾಂಪೌಂಡ್‌, ಉತ್ತಮ ಅಡುಗೆ ಮನೆ, ಹೊಸ ಬಾಗಿಲುಗಳು, ಹೊಸ ಕಿಟಕಿಗಳು, ಗೋಡೆಗೆ ರಾಷ್ಟ್ರ ನಾಯಕರ ಭಾವಚಿತ್ರ, ಬಾಲಕರ ಶೌಚಾಲಯ, ಬಾಲಕಿಯರ ಶೌಚಾಲಯ, ಹೊಸ ಭೋಜನಾಲಯ, ಬಾವಿಯಿಂದ ನೇರವಾಗಿ ನೀರು ಶಾಲೆಗೆ ಬರುವ ವ್ಯವಸ್ಥೆ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕೇವಲ 3 ತಿಂಗಳಲ್ಲಿಯೇ ಈ ಕಾರ್ಯ ಮುಗಿದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಿ.ಎಂ. ಶಾಲೆ ಹೊಸ ರೂಪ ಪಡೆದಂತಾಗಿದೆ.

ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಒಂದು ಮಿನಿ ಥಿಯೇಟರ್‌ ನಿರ್ಮಿಸುವ ಯೋಚನೆ ರವಿ ಬಸ್ರೂರು ಅವರಿಗಿದೆ. ಶಾಲೆಯೆದುರು ಒಂದು ಉದ್ಯಾನವನವನ್ನು ನಿರ್ಮಿಸುವ ಯೋಚನೆಯೂ ಇದೆ. ಜತೆಗೆ ಇಲ್ಲಿ ಖಾಯಂ ಶಿಕ್ಷಕರಿರುವುದು ಇಬ್ಬರೇ. ಇವರ ಜತೆಗೆ ಉಳಿದಂತೆ ನಾಲ್ವರು ಗೌರವ ಶಿಕ್ಷಕರು ದುಡಿಯುತ್ತಿದ್ದರೂ ಅವರಿಗೆ ನೀಡಲಾಗುತ್ತಿದ್ದ ಸಂಬಳ ಅತಿ ಕಡಿಮೆ ಎನ್ನುವ ಸತ್ಯ ಅರಿತ ರವಿ ಬಸ್ರೂರು ಇದಕ್ಕಾಗಿ ಎಲ್ಲ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ತಿಂಗಳಿಗೆ 100 ರೂ. ಹಣ ಸಂಗ್ರಹಿಸುವ ಹೊಸ ಪರಿಕಲ್ಪನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಒಂದು ಆ್ಯಪ್‌ ಮಾಡಿಕೊಂಡು ಶಾಲೆಯ ಸ್ಥಿತಿಗತಿ ತಿಳಿಯುವ ಯೋಜನೆಯನ್ನೂ ರೂಪಿಸಿದ್ದು, ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ.

Advertisement

ತೆಲುಗು ಚಿತ್ರರಂಗದ ನೆರವು
ಶಾಲೆಗೆ ದೂರದ ತೆಲುಗು ಚಿತ್ರರಂಗದಿಂದಲೂ ಸಹಾಯ ಹಸ್ತ ಬಂದಿದೆ. ಅಲ್ಲಿನ ಹಿನ್ನೆಲೆ ಕಲಾವಿದರು ತಿಂಗಳಿಗೆ 100 ರೂ.ಯನ್ನು ಈಗಾಗಲೇ ಕೊಡುತ್ತಿದ್ದು, ಕೆಲವರು 1,000 ರೂ. ಯಂತೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ವರ್ಷದಿಂದ ಮತ್ತಷ್ಟು ಯೋಜನೆಗಳು ಜಾರಿಯಾಗುತ್ತಿದ್ದು, ಶಾಲೆಗೆ ಈಗ ನವ ಚೈತನ್ಯ ಸಿಕ್ಕಂತಾಗಿದೆ.

ಮರುಜೀವ ನೀಡುವ ಕನಸು
ನಾನು ಕಲಿತ ಶಾಲೆಗೆ ಮರು ಜೀವ ನೀಡಬೇಕು ಎನ್ನುವ ಮನಸ್ಸಾಯಿತು. ಪ್ರಸ್ತುತ 86 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಬೆಂಚುಗಳು ಮುರಿದು ಹೋಗಿರುವುದನ್ನು ಕಂಡು ಮೇಜು ಮತ್ತು ಕುರ್ಚಿ ವ್ಯವಸ್ಥೆ ಮಾಡಿದ್ದೇನೆ. ಗೌರವ ಶಿಕ್ಷಕರ ಸಂಬಳ ಹೆಚ್ಚಿಸುವ ಗುರಿಯಿಂದ ಹಳೆ ವಿದ್ಯಾರ್ಥಿಗಳು, ದಾನಿಗಳಿಂದ ತಿಂಗಳಿಗೆ 100 ರೂ.ಯನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಮುಂದೆಯೂ ಕೆಲವು ಯೋಜನೆಯಿದ್ದು, ಮಾಡುವ ಮನಸ್ಸಿದೆ.
*ರವಿ ಬಸ್ರೂರು,
ಚಲನಚಿತ್ರ ಸಂಗೀತ ನಿರ್ದೇಶಕ

ಶಾಲೆಗೆ ಪುನರ್ಜನ್ಮ
ರವಿ ಬಸ್ರೂರು ನಾನು ಕಲಿಸಿದ ಹಳೆ ವಿದ್ಯಾರ್ಥಿ. ಅವರ ಯೋಜನೆಯಿಂದ ಶಾಲೆಗೆ ಮರುಜೀವ ಬಂದಿದೆ. 132 ವರ್ಷಗಳ ಇತಿಹಾಸ ಹೊಂದಿರುವ ಶಾಲೆಗೆ ಸರಕಾರದಿಂದ ಯಾವ ಸೌಲಭ್ಯವೂ ದೊರೆಯುತ್ತಿಲ್ಲ. ಹಳೆ ವಿದ್ಯಾರ್ಥಿಗಳ ಸಹಕಾರ ಅದರಲ್ಲೂ ರವಿ ಬಸ್ರೂರು ಅವರಂತಹ ಹಳೆ ವಿದ್ಯಾರ್ಥಿಯಿಂದ ಶಾಲೆ ಪುನರ್ಜನ್ಮ ಪಡೆದಿದೆ ಎಂದು ಹೇಳಲು
ಸಂತೋಷವಾಗುತ್ತದೆ.
*ಸುವರ್ಣಲತಾ ಎಸ್‌.
ಕೋರ್ನಾಯ, ಶಾಲಾ ಸಂಚಾಲಕಿ

Advertisement

Udayavani is now on Telegram. Click here to join our channel and stay updated with the latest news.

Next