ಲಾಕ್‌ಡೌನ್ ಸಾಕಷ್ಟು ಮಂದಿಗೆ ತಮ್ಮ ಮೂಲವೃತ್ತಿಯನ್ನು ನೆನಪಿಸಿದೆ. ಬಹುತೇಕರು ಹಲವು ಕ್ಷೇತ್ರಗಳಲ್ಲಿ ವೃತ್ತಿ ಅರಸಿ, ಹಳ್ಳಿಯಿಂದ ನಗರಕ್ಕೆ ಬಂದವರಿದ್ದಾರೆ. ಈಗ ಇಡೀ ಜಗತ್ತೇ ಕೋವಿಡ್ 19 ದಿಂದ ತತ್ತರಿಸಿದೆ. ಈ ನಿಟ್ಟಿನಲ್ಲಿ ಒಂದಷ್ಟು ಮಂದಿ, ಲಾಕ್‌ಡೌನ್ ಆಗುತ್ತಿದ್ದಂತೆಯೇ ತಮ್ಮ ತಮ್ಮ ಗ್ರಾಮಗಳನ್ನು ಸೇರಿಕೊಂಡಿದ್ದಾರೆ. ಕೆಲವರು ಹೊಲ-ಗದ್ದೆ ಕೆಲಸದಲ್ಲಿ ನಿರತರಾದರೆ, ಇನ್ನೂ ಕೆಲವರು ತೋಟದಲ್ಲಿ ತೆಂಗಿನ ಮರ ಏರಿ ಎಳೆನೀರು ಕೀಳುವ ಕೆಲಸಕ್ಕಿಳಿದಿದ್ದಾರೆ.
ತಮ್ಮ ತಂದೆ, ಸಹೋದರರ ಜೊತೆ ಕೃಷಿಚಟುವಟಕೆಗಳಲ್ಲಿ ತೊಡಗಿದ್ದಾರೆ. ಅದಕ್ಕೆ ಸಿನಿಮಾ ರಂಗದವರೂ ಹೊರತಲ್ಲ. ಆ ಪೈಕಿ ಹೇಳುವುದಾದರೆ, “ಕೆಜಿಎಫ್’ ಚಿತ್ರದ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ಈಗ ತಮ್ಮೂರಿನಲ್ಲಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೂಲ ವೃತ್ತಿ ಮೇಲೆ ಪ್ರೀತಿ ತೋರಿಸುವ ಮೂಲಕ ಎಲ್ಲರಿಗೂ ಇನ್ನಷ್ಟು ಹತ್ತಿರವಾಗಿದ್ದಾರೆ.
ಹೌದು, ರವಿ ಬಸ್ರೂರು ಅವರೀಗ ಮೂಲ ಕಸುಬು ಕುಲುಮೆ ಕೆಲಸದಲ್ಲಿ ನಿರತರಾಗಿದ್ದಾರೆ. ಲಾಕ್‌ಡೌನ್ ಆದಾಗಿನಿಂದಲೂ ಅವರು, ತಮ್ಮ ಕಸುಬು ಮೇಲಿನ ಪ್ರೀತಿ ತೋರಿಸಿದ್ದಾರೆ. ಕುಲುಮೆ ಮುಂದೆ ಕುಳಿತ ಅವರು ಕಬ್ಬಿಣ ಕಾಯಿಸಿ, ಬಡಿಯುವ ಮೂಲಕ ಹಾರೆಯೊಂದನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ, ಅವರ ತಮ್ಮ ಕೈಯಲ್ಲಿ ದೇವರಿಗೆ ಕಿರೀಟವೊಂದನ್ನೂ ತಯಾರಿಸುತ್ತಿದ್ದಾರೆ. ಆ ಮೂಲಕ ತಾನೊಬ್ಬ ಶಿಲ್ಪಿ ಅನ್ನುವುದನ್ನೂ ಸಾಬೀತುಪಡಿಸಿದ್ದಾರೆ. ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ “ಹಳೆಯ ನೆನಪುಗಳ ನೆನಪಿಸಿದ ಭಗವಂತಿನಿಗೆ ಧನ್ಯವಾದ ‘ ಎಂದು ತಮ್ಮ ಮುಖಪುಟದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಅದೇನೆ ಇರಲಿ, “ಕೆಜಿಎಫ್’ ಚಿತ್ರದಲ್ಲಿ ಸಂಗೀತ ನೀಡಿ ಎಲ್ಲರ ಮನ ಗೆದ್ದ ರವಿ ಬಸ್ರೂರು, ಕುಲುಮೆ ಕೆಲಸ ಮಾಡುವ ಫೋಟೋ ಹಾಗು ವಿಡಿಯೊ ಹಂಚಿಕೊಂಡು, “ಇವತ್ತು 35 ರುಪಾಯಿ ದುಡಿಮೆ. ತಲೆಬಿಸಿ ಫುಲ್ ಕಮ್ಮಿ ಆಯ್ತು. ಅಪ್ಪಯ್ಯಂಗೆ ಜೈ’ಎಂದು ಹೇಳಿದ್ದಾರೆ.ಮೂಲವೃತ್ತಿಯಲ್ಲೂ ಶಬ್ಧ ಸಂಗೀತದ ಕೆಲಸ ಮುಂದುವರೆದಿದೆ. ಅಲ್ಲೂ ಕಾಯಕವೇ ಕೈಲಾಸ ಎಂಬುದನ್ನು ಸಾರಿ ಹೇಳಿದ್ದಾರೆ.