Advertisement

ಅಶ್ವಿನ್ ಮ್ಯಾಜಿಕ್ ಗೆ ಗಂಟುಮೂಟೆ ಕಟ್ಟಿದ ಆಂಗ್ಲರು: ಭಾರತಕ್ಕೆ ಬೃಹತ್ ಮುನ್ನಡೆ

10:47 PM Feb 14, 2021 | Team Udayavani |

ಚೆನ್ನೈ: ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ರವಿಚಂದ್ರನ್ ಅಶ್ವಿನ್ ಸೇರಿದಂತೆ ಭಾರತೀಯ ಬೌಲರ್ ಗಳ ಬಿಗುದಾಳಿಗೆ ನಲುಗಿದ ಇಂಗ್ಲೆಂಡ್ ತಂಡ ಕೇವಲ 134 ರನ್ ಗೆ ಆಲ್ ಔಟ್ ಆಗಿದೆ.

Advertisement

ಅಶ್ವಿನ್ ಮತ್ತು ಅಕ್ಞರ್ ಪಟೇಲ್ ಸ್ಪಿನ್ ಜಾಲಕ್ಕೆ ಆಂಗ್ಲ ಬ್ಯಾಟ್ಸ್ ಮನ್ ಗಳು ಉತ್ತರ ಕಂಡುಕೊಳ್ಳಲು ವಿಫಲರಾದರು. ಅಶ್ವಿನ್ ಐದು ವಿಕೆಟ್ ಪಡೆದರೆ, ಅಕ್ಷರ್ ಮತ್ತು ಇಶಾಂತ್ ತಲಾ ಎರಡು ವಿಕೆಟ್ ಉರುಳಿಸಿದರು. ಒಂದು ವಿಕೆಟ್ ಸಿರಾಜ್ ಪಾಲಾಯಿತು.

ಇಂಗ್ಲೆಂಡ್ ಪರ ವಿಕೆಟ್ ಕೀಪರ್ ಫೋಕ್ಸ್ ಹೊರತುಪಡಿಸಿ ಯಾರೊಬ್ಬರು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಫೋಕ್ಸ್ ಅಜೇಯ 42 ರನ್ ಗಳಿಸಿದರು. ಉಳಿದಂತೆ 22 ರನ್ ಗಳಿಸಿದ ಒಲಿ ಪೋಪ್ ಅವರದ್ದೇ ಹೆಚ್ಚಿನ ಗಳಿಕೆ.

ಇದನ್ನೂ ಓದಿ:ಅಬ್ಬರಿಸಿದ ಪಂತ್, ಪೆವಿಲಿಯನ್ ಪರೇಡ್ ನಡೆಸಿದ ಬಾಲಂಗೋಚಿಗಳು: ಆಂಗ್ಲರಿಗೆ ಆರಂಭಿಕ ಆಘಾತ

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 329 ರನ್ ಗಳಿಸಿತ್ತು. ರೋಹಿತ್ ಶರ್ಮಾ 161 ರನ್ ಗಳಿಸಿದರೆ, ರಹಾನೆ 67 ಮತ್ತು ಪಂತ್ ಅಜೇಯ 58 ರನ್ ಗಳಿಸಿದ್ದರು.

Advertisement

195 ರನ್ ಗಳ ಮುನ್ನಡೆ ಪಡೆದ ಭಾರತ ತಂಡ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ.

ಹರ್ಭಜನ್‌ ದಾಖಲೆ ಮುರಿದ ಅಶ್ವಿ‌ನ್‌ :

ದ್ವಿತೀಯ ದಿನದಾಟದಲ್ಲಿ ಬೆನ್‌ ಸ್ಟೋಕ್ಸ್‌ ಅವರನ್ನು ಬೌಲ್ಡ್‌ ಮಾಡುವ ಮೂಲಕ ಆರ್‌. ಅಶ್ವಿ‌ನ್‌ ತವರಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ (268) ಭಾರತದ 2ನೇ ಸಾಧಕನೆನಿಸಿದರು. ಈ ಹಾದಿಯಲ್ಲಿ ಅವರು ಹರ್ಭಜನ್‌ ಸಿಂಗ್‌ ಅವರ 265 ವಿಕೆಟ್‌ಗಳ ದಾಖಲೆ ಮುರಿದರು (55 ಟೆಸ್ಟ್‌).

ಭಾರತದಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ದಾಖಲೆ ಅನಿಲ್‌ ಕುಂಬ್ಳೆ ಹೆಸರಲ್ಲಿದೆ. ಅವರು 63 ಟೆಸ್ಟ್‌ಗಳಲ್ಲಿ 350 ವಿಕೆಟ್‌ ಕೆಡವಿದ್ದರು. ಕುಂಬ್ಳೆ ಭಾರತದ ಸರ್ವಾಧಿಕ ವಿಕೆಟ್‌ ಸಾಧಕನೂ ಹೌದು (619). ಕಪಿಲ್‌ದೇವ್‌ ದ್ವಿತೀಯ (434), ಹರ್ಭಜನ್‌ ತೃತೀಯ (417) ಸ್ಥಾನದಲ್ಲಿದ್ದಾರೆ. ಅಶ್ವಿ‌ನ್‌ 390ರ ಗಡಿ ದಾಟಿದ್ದಾರೆ.

ತವರಲ್ಲಿ  23ನೇ 5 ವಿಕೆಟ್‌ ಸಾಧನೆ :

ಈ ಪಂದ್ಯದಲ್ಲಿ ಅಶ್ವಿ‌ನ್‌ ಸಾಧನೆ 43ಕ್ಕೆ 5 ವಿಕೆಟ್‌. ತವರಿನಲ್ಲಿ ಆಡಿದ 45 ಟೆಸ್ಟ್‌ಗಳಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ 23ನೇ ನಿದರ್ಶನ ಇದಾಗಿದೆ. ಅವರು ಜೇಮ್ಸ್‌ ಆ್ಯಂಡರ್ಸನ್‌ ದಾಖಲೆಯನ್ನು ಹಿಂದಿಕ್ಕಿದರು (22). ಅಶ್ವಿ‌ನ್‌ಗಿಂತ ಮುಂದಿರುವವರೆಂದರೆ ಮುರಳೀಧರನ್‌ (45), ಹೆರಾತ್‌ (26) ಮತ್ತು ಕುಂಬ್ಳೆ (25). ಅಶ್ವಿ‌ನ್‌ ಒಟ್ಟು 29 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದರು.

ಎಡಗೈ ಆಟಗಾರರ 200 ವಿಕೆಟ್‌ :

ಅಶ್ವಿ‌ನ್‌ ಎಡಗೈ ಕ್ರಿಕೆಟಿಗರ 200 ವಿಕೆಟ್‌ ಕಿತ್ತ ವಿಶ್ವದ ಪ್ರಪ್ರಥಮ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ಡೇವಿಡ್‌ ವಾರ್ನರ್‌ ಅವರನ್ನು ಅತೀ ಹೆಚ್ಚು 10 ಸಲ, ಅಲಸ್ಟೇರ್‌ ಕುಕ್‌ ಮತ್ತು ಸ್ಟೋಕ್ಸ್‌ ಅವರನ್ನು 9 ಸಲ ಔಟ್‌ ಮಾಡಿದ್ದರು. ಮುರಳೀಧರನ್‌ ಎಡಗೈ ಆಟಗಾರರ 191 ವಿಕೆಟ್‌ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ.

ಭಾರತದ ಸರದಿಯಲ್ಲಿ 4 ಸೊನ್ನೆ :

ಭಾರತದ ಸರದಿಯಲ್ಲಿ ನಾಲ್ವರು ಸೊನ್ನೆಗೆ ಔಟಾದರು. ಇದು ಭಾರತದ ತವರಿನ ಪಂದ್ಯಗಳಲ್ಲಿ ಕಂಡುಬಂದ “4 ಪ್ಲಸ್‌ ಸೊನ್ನೆ’ಗಳ 9ನೇ ನಿದರ್ಶನ. ಕೊನೆಯ ಸಲ ಇದು ದಾಖಲಾದದ್ದು ದಕ್ಷಿಣ ಆಫ್ರಿಕಾ ಎದುರಿನ 2008ರ ಅಹ್ಮದಾಬಾದ್‌ ಪಂದ್ಯದಲ್ಲಿ. ಅಂದು ಗಂಗೂಲಿ, ಕುಂಬ್ಳೆ, ಆರ್‌.ಪಿ. ಸಿಂಗ್‌ ಮತ್ತು ಶ್ರೀಶಾಂತ್‌ ರನ್‌ ಖಾತೆ ತೆರೆಯಲು ವಿಫ‌ಲರಾಗಿದ್ದರು.

 

ಒಂದೂ ಎಕ್ಸ್‌ಟ್ರಾ ರನ್‌ ನೀಡದ ಇಂಗ್ಲೆಂಡ್‌ :

 

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ ವೇಳೆ ಶಿಸ್ತಿನ ಬೌಲಿಂಗ್‌ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಿಸಿದೆ. ಅದು ಭಾರತಕ್ಕೆ 329 ರನ್‌ ನೀಡಿದರೂ ಇದರಲ್ಲಿ ಒಂದೇ ಒಂದು ಎಕ್ಸ್‌ಟ್ರಾ ರನ್‌ ಇರಲಿಲ್ಲ! ಟೆಸ್ಟ್‌ ಇತಿಹಾಸದಲ್ಲಿ ಯಾವುದೇ ಎಕ್ಸ್‌ಟ್ರಾ ರನ್‌ ನೀಡದೆ ಎದುರಾಳಿಗೆ ಅತ್ಯಧಿಕ ರನ್‌ ಕೊಟ್ಟ ದಾಖಲೆ ಜೋ ರೂಟ್‌ ಬಳಗದ್ದಾಗಿದೆ. ಹಿಂದಿನ ದಾಖಲೆ ಭಾರತದ ಹೆಸರಲ್ಲಿತ್ತು. ಇದಕ್ಕೆ ಸಾಕ್ಷಿಯಾದದ್ದು ಪಾಕಿಸ್ಥಾನ ವಿರುದ್ಧದ 1954-55ರ ಲಾಹೋರ್‌ ಟೆಸ್ಟ್‌. ಅಂದು ಮೊದಲ ಸರದಿಯಲ್ಲಿ ಪಾಕಿಸ್ಥಾನ 328 ರನ್‌ ಗಳಿಸಿತ್ತು. ಭಾರತ 187.5 ಓವರ್‌ಗಳಲ್ಲಿ ಒಂದೂ “ಇತರ ರನ್‌’ ಬಿಟ್ಟುಕೊಟ್ಟಿರಲಿಲ್ಲ. ಭಾರತದ ಅಂದಿನ ಬೌಲರ್‌ಗಳೆಂದರೆ ಪಾಲಿ ಉಮ್ರಿಗರ್‌, ಜಿ. ರಾಮಚಂದ್‌, ಗುಲಾಂ ಅಹ್ಮದ್‌, ಸುಭಾಷ್‌ ಗುಪೆ¤ ಮತ್ತು ವಿನೂ ಮಂಕಡ್‌.

ಫೀಲ್ಡಿಂಗ್‌ ನಡೆಸದ ಪೂಜಾರ :

ಮೊದಲ ದಿನ ಬ್ಯಾಟಿಂಗ್‌ ಮಾಡುವಾಗ ಕೈಗೆ ಚೆಂಡಿನೇಟು ತಿಂದ ಚೇತೇಶ್ವರ್‌ ಪೂಜಾರ ರವಿವಾರ ಅಂಗಳಕ್ಕಿಳಿಯಲಿಲ್ಲ. ಇವರ ಬದಲು ಮಾಯಾಂಕ್‌ ಅಗರ್ವಾಲ್‌ ಕ್ಷೇತ್ರರಕ್ಷಣೆ ಮಾಡಿದರು.

“ಬ್ಯಾಟಿಂಗ್‌ ನಡೆಸುವಾಗ ಪೂಜಾರ ಅವರ ಬಲಗೈಗೆ ಏಟು ಬಿದ್ದಿದೆ. ಬಳಿಕ ನೋವು ಕಂಡುಬಂದಿದೆ. ಹೀಗಾಗಿ ಅವರು ಇಂದು ಫೀಲ್ಡಿಂಗಿಗೆ ಆಗಮಿಸಲಿಲ್ಲ’ ಎಂದು ಬಿಸಿಸಿಐ ತಿಳಿಸಿದೆ. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪೂಜಾರ ಒನ್‌ಡೌನ್‌ನಲ್ಲೇ ಬ್ಯಾಟ್‌ ಹಿಡಿದು ಬಂದರು. ಆಸ್ಟ್ರೇಲಿಯದಲ್ಲಿ ನಡೆದ ಅಂತಿಮ ಟೆಸ್ಟ್‌ ಪಂದ್ಯದ ವೇಳೆಯೂ ಪೂಜಾರ ಸಾಕಷ್ಟು ಏಟು ತಿಂದಿದ್ದರು. ಆದರೂ ಬ್ಯಾಟಿಂಗ್‌ ಮುಂದುವರಿಸಿ ತಂಡದ ಐತಿಹಾಸಿಕ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next