ಚೆನ್ನೈ: ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮೊದಲ ಗಂಟೆಯಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗಳು ಆಕ್ರಮಣಕಾರಿ ಬೌಲಿಂಗ್ ಮಾಡಿದರೆ, ನಂತರ ಕೊಹ್ಲಿ ಮತ್ತು ಅಶ್ವಿನ್ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಸ್ಪಿನ್ನರ್ ಗಳಿಗೆ ಅನುಕೂಲಕರವಾದ ಪಿಚ್ ನಲ್ಲಿ ಒತ್ತಡದ ನಡುವೆಯೂ ಅದ್ಭುತ ಬ್ಯಾಟಿಂಗ್ ನಡೆಸಿದ ರವಿ ಅಶ್ವಿನ್ ಶತಕ ಬಾರಿಸಿ ಮಿಂಚಿದರು. ನಾಯಕ ವಿರಾಟ್ ಕೊಹ್ಲಿ ಜೊತೆ 96 ರನ್ ಜೊತೆಯಾಟ ನಡೆಸಿ ನಂತರ ಬಾಲಂಗೋಚಿಗಳ ಸಹಾಯದಿಂದ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನ ಐದನೇ ಶತಕ ಬಾರಿಸಿದರು.
ಇದನ್ನೂ ಓದಿ:ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಪೊಲೀಸರಿಂದ ಎಫ್ ಐಆರ್ ದಾಖಲು
54 ರನ್ ಗೆ ಒಂದು ವಿಕೆಟ್ ಕಳೆದುಕೊಂಡಲ್ಲಿಂದ ಮೂರನೇ ದಿನದ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಸತತ ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ 106 ರನ್ ಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ ಒಂದಾದ ಕೊಹ್ಲಿ- ಅಶ್ವಿನ್ ಜೋಡಿ ಏಳನೇ ವಿಕೆಟ್ ಗೆ 96 ರನ್ ಜೊತೆಯಾಟವಾಡಿದರು.
ನಾಯಕ ವಿರಾಟ್ ಕೊಹ್ಲಿ 62 ರನ್ ಗಳಿಸಿ ಮೊಯಿನ್ ಅಲಿ ಬೌಲಿಂಗ್ ಗೆ ಎಲ್ ಬಿ ಬಲೆಗೆ ಬಿದ್ದರು. ನಂತರ ಅಶ್ವಿನ್ ಕೆಳ ಕ್ರಮಾಂಕದ ಆಟಗಾರರ ಸಹಾಯದಿಂದ ವೇಗವಾಗಿ ರನ್ ಗಳಿಸಿದರು. ಸ್ವೀಪ್, ರಿವರ್ಸ್ ಸ್ವೀಪ್ ಹೊಡೆತಗಳಿಂದ ಅಶ್ವಿನ್ ಗಮನ ಸೆಳೆದರು.
ಇದನ್ನೂ ಓದಿ: ಚಿತ್ರರಂಗಕ್ಕೆ ನಟ ಅಮೀರ್ ಖಾನ್ ಕುಟುಂಬದ ಕುಡಿ…!
85.5 ಓವರ್ ನಲ್ಲಿ ಭಾರತ ತಂಡ 286 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಅಶ್ವಿನ್ 106 ರನ್ ಗಳಿಸಿ ಔಟಾದರು. ಸಿರಾಜ್ ಎರಡು ಸಿಕ್ಸರ್ ನೆರವಿನಿಂದ 16 ರನ್ ಗಳಿಸಿದರು.
ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಮತ್ತು ಮೊಯಿನ್ ಅಲಿ ತಲಾ ನಾಲ್ಕು ವಿಕೆಟ್ ಪಡೆದರು. ಭಾರತ ತಂಡದ ಇಂಗ್ಲೆಂಡ್ ಗೆ 482 ಕಠಿಣ ಗುರಿ ನೀಡಿದೆ.