ಲಂಡನ್: ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಸೋಲನುಭವಿಸಿರುವ ಭಾರತ ತಂಡ ನಾಲ್ಕನೇ ಪಂದ್ಯ ಗೆಲ್ಲುವ ಯೋಜನೆಯಲ್ಲಿದೆ. ದಿ ಓವಲ್ ನಲ್ಲಿ ನಡೆಯಲಿರುವ ಈ ಪಂದ್ಯ ಸೆ.02ರಿಂದ ಆರಂಭವಾಗಲಿದೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹಿರಿಯ ವೇಗಿ ಇಶಾಂತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ನೀರಸ ಪ್ರದರ್ಶನ ನೀಡಿದ್ದರು. 22 ಓವರ್ ಬೌಲಿಂಗ್ ಮಾಡಿದ್ದ ಇಶಾಂತ್ 92 ರನ್ ನೀಡಿದ್ದರೆ, ಒಂದೂ ವಿಕೆಟ್ ಪಡೆಯಲು ಸಫಲರಾಗಿರಲಿಲ್ಲ.
ಇಶಾಂತ್ ಶರ್ಮಾ ಬದಲಿಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ರವಿ ಅಶ್ವಿನ್ ಅವರು ಸರಣಿಯಲ್ಲಿ ಒಂದೂ ಪಂದ್ಯವಾಡುವ ಅವಕಾಶ ಪಡೆದಿಲ್ಲ.
ಇದನ್ನೂ ಓದಿ:ನಾಲ್ಕನೇ ಟೆಸ್ಟ್ ಗೆ ಇಂಗ್ಲೆಂಡ್ ತಂಡದಿಂದ ಬಟ್ಲರ್ ಔಟ್- ಕ್ರಿಸ್ ವೋಕ್ಸ್ ಸೇರ್ಪಡೆ
ರವೀಂದ್ರ ಜಡೇಜಾ ಅವರು ಮೂರನೇ ಪಂದ್ಯದ ಬಳಿಕ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ತೆರಳಿದ್ದರು. ಆದರೆ ಯಾವುದೇ ಗಾಯದ ಬಗ್ಗೆ ಇದುವರೆಗೆ ಮಾಹಿತಿ ಬಂದಿಲ್ಲ. ರವೀಂದ್ರ ಜಡೇಜಾ ಅವರು ಮುಂದಿನ ಪಂದ್ಯವಾಡಲು ಫಿಟ್ ಆಗಿದ್ದಾರೆ ಎನ್ನಲಾಗಿದೆ.
ಆದರೆ ಜಡೇಜಾ ಮತ್ತು ಅಶ್ವಿನ್ ಇಬ್ಬರೂ ಸ್ಪಿನ್ನರ್ ಗಳನ್ನು ಆಡಿಸುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಹೀಗಾದಲ್ಲಿ ಶಾರ್ದೂಲ್ ಠಾಕೂರ್ ಅಥವಾ ಉಮೇಶ್ ಯಾದವ್ ಆಡುವ ಅವಕಾಶ ಪಡೆಯಬಹುದು.