ದಿ ಓವಲ್: ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸದ್ಯ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಸರ್ರೆ ತಂಡದ ಪರವಾಗಿ ಆಡುತ್ತಿರುವ ರವಿ ಅಶ್ವಿನ್ ಕೌಂಟಿ ಕ್ರಿಕೆಟ್ ನಲ್ಲಿ ಇತಿಹಾಸ ಬರೆದಿದ್ದಾರೆ.
ಸರ್ರೆ ಪರ ಸಾಮರ್ ಸೆಟ್ ವಿರುದ್ಧ ಆಡುತ್ತಿರುವ ಅಶ್ವಿನ್, ಇನ್ನಿಂಗ್ಸ್ ನ ಮೊದಲ ಓವರ್ ನಲ್ಲೇ ಬಾಲ್ ಹಾಕಿದರು. ಕೌಂಟಿ ಚಾಂಪಿಯನ್ ಶಿಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪಿನ್ನರ್ ಓರ್ವ ಮೊದಲ ಓವರ್ ಎಸೆದ ನಿದರ್ಶನ ಇದಾಗಿದೆ.
ಸಾಮರ್ ಸೆಟ್ ಆರಂಭಿಕರಾದ ಡೆವೋನ್ ಕಾನ್ವೆ ಮತ್ತು ಸ್ಟೀವನ್ ಡೇವಿಸ್ ಗೆ ರವಿ ಅಶ್ವಿನ್ ಮೊದಲ ಓವರ್ ಎಸೆದರು. ಈ ಓವರ್ ನಲ್ಲಿ ಅಶ್ವಿನ್ ಕೇವಲ ಎರಡು ರನ್ ಬಿಟ್ಟುಕೊಟ್ಟರು. ಟೀ ವಿರಾಮದ ವರೆಗೆ ಅಶ್ವಿನ್ 58 ರನ್ ಗೆ ಒಂದು ವಿಕೆಟ್ ಪಡೆದಿದ್ದಾರೆ.
ಮುಂದಿನ ತಿಂಗಳು ಭಾರತ ತಂಡ ಇಂಗ್ಲೆಂಡ್ ವಿರುದ್ದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ರವಿ ಅಶ್ವಿನ್ ಈ ಪಂದ್ಯದ ಬಳಿಕ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಗಾಯಗೊಂಡಿದ್ದ ಕೈಲ್ ಜಾಮಿಸನ್ ಬದಲಿಗೆ ಅಶ್ವಿನ್ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು.
ಅಶ್ವಿನ್ ಈ ಹಿಂದೆ ಕೌಂಟಿ ಚಾಂಪಿಯನ್ ಶಿಪ್‌ನಲ್ಲಿ ನಾಟಿಂಗ್ಹ್ಯಾಮ್‌ಶೈರ್ ಮತ್ತು ವೂಸ್ಟರ್‌ಶೈರ್ ಪರ ಆಡಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ಸರ್ರೆಯ ಎರಡನೇ ವಿದೇಶಿ ಆಟಗಾರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಶಿಮ್ ಆಮ್ಲಾ ಅವರೂ ಸರ್ರೆ ಪರ ಆಡುತ್ತಿದ್ದಾರೆ