ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮುಂಬೈ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಪಂದ್ಯದ ಮೂರನೇ ದಿನವಾದ ಇಂದು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅನಿಲ್ ಕುಂಬ್ಳೆಯವರ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.
ಎರಡನೇ ಇನ್ನಿಂಗ್ಸ್ ನಲ್ಲಿ ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ರವಿ ಅಶ್ವಿನ್ ಅವರು 2021ರಲ್ಲಿ 50 ಟೆಸ್ಟ್ ವಿಕೆಟ್ ಕಿತ್ತ ಸಾಧನೆ ಮಾಡಿದರು. ಅದಲ್ಲದೆ 2021ರಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಕೂಡಾ ಎನಿಸಿದರು. ಈ ವರ್ಷ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದವರ ಪಟ್ಟಿಯಲ್ಲಿ ಪಾಕಿಸ್ಥಾನದ ಶಹೀನ್ ಅಫ್ರಿದಿ ಎರಡನೇ ಸ್ಥಾನದಲ್ಲಿದ್ದಾರೆ. (44 ವಿಕೆಟ್)
ಅದಲ್ಲದೆ ಅತೀ ಹೆಚ್ಚು ಬಾರಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 50 ಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ ಭಾರತೀಯರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಮೊದಲ ಸ್ಥಾನಕ್ಕೇರಿದರು. ಅಶ್ವಿನ್ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. (2015, 2016, 2017, 2021)
ಇದನ್ನೂ ಓದಿ:ಮತ್ತೆ ಮಿಂಚಿದ ಮಯಾಂಕ್: ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ
ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ ಅವರು 1999, 2004, 2006ರಲ್ಲಿ ಈ ದಾಖಲೆ ಮಾಡಿದ್ದರೆ, ಹರ್ಭಜನ್ ಸಿಂಗ್ ಅವರು 2001, 2002, 2008ರಲ್ಲಿ ಈ ಸಾಧನೆ ಮಾಡಿದ್ದರು.