Advertisement

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ರವೀಂದ್ರನ್‌

08:10 PM Jun 07, 2019 | Team Udayavani |

ಬದಿಯಡ್ಕ: ಗೋವು ಮತ್ತು ಮಾನವನಿಗೆ ಅವಿನಾಭಾವ ಸಂಬಂಧವಿದೆ. ಹಿಂದಿನ ಕಾಲದಿಂದಲೇ ಬಡವರ ಪಾಲಿನ ಕಾಮದೇನುವಾದ ಗೋವುಗಳು ಜನರ ಹಸಿವನ್ನು ನೀಗಿ ನೆಮ್ಮದಿಯ ಬದುಕನ್ನು ಕರುಣಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

Advertisement

ಪಶುಸಂಗೋಪನೆ ಹಾಗೂ ಹೈನುಗಾರಿಕೆಯ ಮುಖಾಂತರ ಜೀವನದ ಹಾದಿಯಲ್ಲಿ ಸಾಧನೆ ಮಾಡಿದ ಅದೆಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ಕ್ಷೀರ ಕ್ರಾಂತಿ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಸೃಷ್ಟಿಸಿದ ಕ್ರಾಂತಿ ಹಾಲುತ್ಪಾದನೆಯಲ್ಲಿ ಗಣನೀಯವಾದ ಹೆಚ್ಚಳಕ್ಕೆ ಕಾರಣವಾಯಿತು. ಹಾಲು, ಗೋಮೂತ್ರ, ಗೊಬ್ಬರ ಸೇರಿದಂತೆ ಗೋವುಗಳಿಂದ ಉಂಟಾಗುವ ಪ್ರಯೋಜನಗಳೂ ಅಪಾರ. ಆದುದರಿಂದಲೇ ಹಿಂದೆ ಎಲ್ಲಾ ಮನೆಗಳಲ್ಲೂ ಗೋಮಾತೆಯನ್ನು ಸಾಕುತ್ತಿದ್ದರು. ಪೂಜಿಸುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಯಾಂತ್ರಿಕ ಬದಲಾವಣೆಗಳು ಮಾನವನನ್ನು ಗೋವುಗಳಿಂದ ದೂರಮಾಡಿದರೂ ಕೆಲವೆಡೆ ಇನ್ನೂ ಗೋವು ಮತ್ತು ಮಾನವನ ಸಂಬಂಧ ಹಸಿರಾಗಿಯೇ ಇದೆ. ಗೋಪ್ರೇಮಿಗಳು ಅವುಗಳನ್ನು ಸಾಕಿ ಸಲಹಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎನ್ನುವುದಕ್ಕೆ ಕೋಟಕ್ಕೋಡ್‌ ಓಲಾಟ್‌ನ ರವೀಂದ್ರನ್‌ ಪ್ರತ್ಯಕ್ಷ ನಿದರ್ಶನ.

ಗೋವುಗಳನ್ನು ಅಪಾರವಾಗಿ ಪ್ರೀತಿಸುವ ರವೀಂದ್ರನ್‌ ತನ್ನ ಬಾಲ್ಯಕಾಲದಿಂದಲೇ ಗೋಸಾಕಣೆಯನ್ನು ಹವ್ಯಾಸವನ್ನಾಗಿಸಿದ್ದಾರೆ. ಇವರ ಬಳಿ ಉತ್ತಮ ಗುಣಮಟ್ಟದ ಹಾಲು ನೀಡುವ ಎಂಟು ಗೋವುಗಳಿವೆ.

ಹಾಲು ಮಾರಾಟದಿಂದ ಮಾತ್ರ ತಿಂಗಳಿಗೆ 50,000ಆದಾಯ ಗಳಿಸುತ್ತಿದ್ದಾರೆ. ಮಾತ್ರವಲ್ಲದೆ ಸೆಗಣಿ ಮಾರಾಟವೂ ಮಾಡುತ್ತಿದ್ದು ಒಂದು ಬುಟ್ಟಿ ಸೆಗಣಿಗೆ 90 ರೂಪಾಯಿಗಳಂತೆ ಮಾರಾಟವಾಗುತ್ತಿದ್ದು ಇದರಿಂದ ತಿಂಗಳೊಂದಕ್ಕೆ ಅಂದಾಜು 9000 ರೂಪಾಯಿ ಆದಾಯ ಬರುತ್ತಿರುವುದಾಗಿ ರವೀಂದ್ರನ್‌ ಹೇಳುತ್ತಾರೆ.

ಮನೆಯ ನಿತ್ಯದ ಅಗತ್ಯಗಳಿಗೆ ಬೇಕಾಗುವ ತರಕಾರಿಗಳನ್ನು ಬೆಳಸುತ್ತಿದ್ದಾರೆ. ಇವುಗಳಿಗೆ ಅಗತ್ಯವಿರುವ ನೈಸರ್ಗಿಕ ಗೊಬ್ಬರವೂ ಗೋಸಾಕಣೆಯಿಂದ ಲಭ್ಯವಾಗುತ್ತಿದೆ.

Advertisement

ರವೀಂದ್ರನ್‌ ಅವರ ಪಶುಸಾಕಣೆಗೆ ಪೂರ್ಣ ಸಹಕಾರ ಮತ್ತು ಬೆಂಬಲವಾಗಿ ಕ್ಷೀರ ಅಭಿವೃದ್ಧಿ ಇಲಾಖೆಯು ಪ್ರೊತ್ಸಾಹಿಸುತ್ತಿದೆ. ದನಸಾಕಣೆ ಮತ್ತು ದನಗಳ ಮೇವಿಗಾಗಿ ಹುಲ್ಲು ಬೆಳೆಯಲು ಅಗತ್ಯವಾದ ಧನ ಸಹಾಯವನ್ನು ನೀಡುತ್ತಿದೆ. ಕಳೆದ ವರ್ಷ ಹುಲ್ಲು ಬೆಳೆಯುವುದಕ್ಕಾಗಿ ಮಾತ್ರ 10000 ರೂಪಾಯಿ ಹಾಗೆಯೇ ಹಟ್ಟಿ ನಿರ್ಮಿಸಲು 50000 ರೂ, ಕ್ಷೀರ ಅಭಿವೃದ್ಧಿ ಇಲಾಖೆ ರವೀಂದ್ರನ್‌ಗೆ ನೀಡಿದೆ. ಇದರೊಂದಿಗೆ ಮಿಲ್ಕ್ ಇನ್ಸೆಂಟಿವ್‌ ಆಗಿ ಪ್ರತಿವರ್ಷ 40000 ರೂ. ಪ್ರೊತ್ಸಾಹದನವೂ ಲಭಿಸುತ್ತಿದೆ. ಮೃಗ ಸಂರಕ್ಷಣಾ ಇಲಾಖೆಯ ಸಹಾಯವೂ ರವೀಂದ್ರನ್‌ಗೆ ಲಭಿಸುತ್ತಿದೆ.

55ರ ಹರೆಯದ ಉತ್ಸಾಹಿ ಗೋಪ್ರೇಮಿ ರವೀಂದ್ರನ್‌ ತನ್ನ ಮಕ್ಕಳಂತೆ ಬಹಳ ಪ್ರೀತಿಯಿಂದ ಗೋವುಗಳನ್ನು ಸಾಕಿ ಸಲಹುತ್ತಿದ್ದು ಬಾಲ್ಯದಿಂದಲೇ ಗೋವುಗಳೊಂದಿಗಿನ ನಂಟು ಅವರನ್ನು ಈ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಗೋವುಗಳು ನೀಡುವ ಅಮೃತ ಸಮಾನವಾದ ಹಾಲು ಅವರ ಬದುಕಿನ ಹಾದಿಗೆ ಸುಭದ್ರತೆಯನ್ನು ನೀಡಿದೆ.

ಇವರ ತಂದೆಯವರು ಕೃಷಿಕರಾಗಿದ್ದು ದನಸಾಕಣೆಯನ್ನೂ ಹವ್ಯಾಸವಾಗಿಸಿದ್ದರು. ಶಾಲಾ ದಿನಗಳಲ್ಲಿ ಬೆಳಗ್ಗೆ ಸಂಜೆ ಹಸುಗಳನ್ನು ಮೇಯಿಸುತ್ತಾ ಅವುಗಳೊಂದಿಗೆ ಆಟವಾಡುತ್ತಿದ್ದ ರವೀಂದ್ರನ್‌ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಸಂಪೂರ್ಣವಾಗಿ ಹೆ„ನುಗಾರಿಕೆಯಲ್ಲಿ ತೊಡಗಿಸಿಕೊಂಡರು. ಇಂದು ಅವರ ಕನಸುಗಳನ್ನು ನನಸಾಗಿಸಿ ಬದುಕಿನಲ್ಲಿ ಪೂರ್ಣ ಸಂತೃಪ್ತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಬದುಕಿಗೆ ಹೊಸ ಅಥ
ದನಸಾಕಣೆ ತನ್ನ ಬದುಕಿಗೆ ಹೊಸ ಅರ್ಥ ನೀಡಿದೆ. ಹಲವಾರು ಸಾಧನೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. ಮಾತ್ರವಲ್ಲದೆ ಸುಭದ್ರ ಸಂತೃಪ್ತ ಜೀವನವನ್ನು ಕಟ್ಟಿಕೊಳ್ಳಲು ಗೋಸಾಕಣೆ ನೆರವಾಗಿದೆ. ಸ್ವಂತ ಮನೆಯ ಕನಸು, ನನಸಾಗಿದೆ. ಮಕ್ಕಳ ವಿದ್ಯಾಭ್ಯಾಸವೂ ಇದರಿಂದಲೇ ದಡಸೇರಿದೆ. ಆರೋಗ್ಯವಂತ ಕುಟುಂಬ ನಮ್ಮದಾಗಲು ಗೋವುಗಳ ಅನುಗ್ರಹವೇ ಕಾರಣ.
– ರವೀಂದ್ರನ್‌ ಹೈನುಕೃಷಿಕ

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next