“ಕೆಜಿಎಫ್…’ ಕನ್ನಡ ಚಿತ್ರರಂಗ ಮಾತ್ರವಲ್ಲ. ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿದ ಚಿತ್ರ. ಈಗ “ಕೆಜಿಎಫ್ ಚಾಪ್ಟರ್ 2′ ಸಿನಿಮಾ ಕೂಡ ಶುರುವಿಗೆ ಮುನ್ನವೇ ಹೊಸ ಹೊಸ ಸುದ್ದಿಗಳಿಗೆ ಕಾರಣವಾಗುತ್ತಿದೆ. ಈಗಾಗಲೇ “ಕೆಜಿಎಫ್ ಚಾಪ್ಟರ್ 2′ ಚಿತ್ರದ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ಜೂನ್ ಮೊದಲ ವಾರದಲ್ಲಿ ನಟ ಯಶ್ ಕೂಡ ಚಿತ್ರತಂಡಕ್ಕೆ ಎಂಟ್ರಿಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಚಿತ್ರದ ಮತ್ತೂಂದು ಹೊಸ ಸುದ್ದಿಯೆಂದರೆ, ಅದು ಬಾಲಿವುಡ್‌ನ ಹೆಸರಾಂತ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆಂಬುದು. ಹೌದು, ಆ ನಟಿ ಬೇರಾರೂ ಅಲ್ಲ, ರವೀನಾ ಟಂಡನ್. ಬಹುತೇಕ ಇವರು “ಕೆಜಿಎಫ್ ಚಾಪ್ಟರ್ 2’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಈ ಹಿಂದೆ ಕೂಡ ರವೀನಾ ಟಂಡನ್ ಬರಲಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ಅಂತಿಮವಾಗಿಯೂ, ರವೀನಾ ಟಂಡನ್ ಹೆಸರೇ ಕೇಳಿಬರುತ್ತಿದ್ದು, ಅವರನ್ನೇ ಕರೆತರುವ ಪ್ರಯತ್ನ ಚಿತ್ರತಂಡ ಮಾಡುತ್ತಿದೆ ಎನ್ನಲಾಗಿದೆ.
ಹಾಗೆ ನೋಡಿದರೆ, ರವೀನಾ ಟಂಡನ್‌ಗೆ ಇದು ಕನ್ನಡದ ಮೊದಲ ಚಿತ್ರವೇನಲ್ಲ. ಈ ಹಿಂದೆ ಉಪೇಂದ್ರ ನಿರ್ದೇಶಿಸಿ,ಅಭಿನಯಿಸಿದ್ದ “ಉಪೇಂದ್ರ’ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದರು. ಅದಾದ ಎರಡು ದಶಕದ ಬಳಿಕ ರವೀನಾ ಟಂಡನ್ “ಕೆಜಿಎಫ್ ಚಾಪ್ಟರ್ 2′ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿವೆ.
ಅಷ್ಟಕ್ಕೂ “ಕೆಜಿಎಫ್ ಚಾಪ್ಟರ್ 2′ ಚಿತ್ರದಲ್ಲಿ ರವೀನಾ ಟಂಡನ್ ಪಾತ್ರವೇನು? ಇದು ಎಲ್ಲರಲ್ಲೂ ಕಾಡುವ ಪ್ರಶ್ನೆ. “ಕೆಜಿಎಫ್’ ಮೊದಲ ಭಾಗದಲ್ಲಿ ಒಬ್ಬ ಪ್ರಭಾವಿಶಾಲಿ ಮಹಿಳೆಯೊಬ್ಬರ ದೃಶ್ಯವನ್ನು ತೋರಿಸಲಾಗಿತ್ತು. ಆದರೆ, ಅದು ಯಾರ ಪಾತ್ರ ಅನ್ನೋದು ಸ್ಪಷ್ಟವಾಗಿರಲಿಲ್ಲ. ಮೂಲಗಳ ಪ್ರಕಾರ 1980 ರ ಕಾಲಘಟ್ಟದ ಪ್ರಧಾನ ಮಂತ್ರಿ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಬಹುದೇನೋ ಎಂಬ ಪ್ರಶ್ನೆಗಳೂ ಎದ್ದಿವೆ.
ಇದಕ್ಕೆ ಪೂರಕವೆಂಬಂತೆ ರವೀನಾ ಅವರ ಪತಿ ಅನಿಲ್ ತಡಾನಿ ಅವರು “ಕೆಜಿಎಫ್’ ಚಿತ್ರದ ವಿತರಣೆ ಮಾಡಿದ್ದರು. ಆ ಸಂದರ್ಭದಲ್ಲಿ ರವೀನಾ “ಕೆಜಿಎಫ್’ ನೋಡಿ ಮೆಚ್ಚಿದ್ದರು. ಈಗ “ಕೆಜಿಎಫ್ ಚಾಪ್ಟರ್ 2′ ಚಿತ್ರದ ವಿತರಣೆಯನ್ನೂ ಅವರದೇ ಪ್ರೊಡಕ್ಷನ್ ಮೂಲಕ ಮಾಡುತ್ತಿರುವ ಹಿನ್ನೆಲೆಯಲ್ಲಿ ರವೀನಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದಕ್ಕೂ ಮೊದಲು, ಬೇರೆ ನಟಿಯೊಬ್ಬರ ಹೆಸರು ಕೇಳಿಬಂದಿತ್ತು.
ಈಗ ರವೀನಾ ಟಂಡನ್ ಅವರ ಹೆಸರು ಕೇಳಿಬರುತ್ತಿದೆ. ಅದೇನೆ ಇರಲಿ, “ಕೆಜಿಎಫ್ ಚಾಪ್ಟರ್ 2′ ಈಗ ಮತ್ತಷ್ಟು ಕುತೂಹಲ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಈ ಚಿತ್ರದಲ್ಲಿ ಬಾಲಿವುಡ್‌ನ ಕೆಲ ನಟರೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಸಂಜಯ್‌ದತ್ ಕೂಡ ನಟಿಸಲಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ. ಆದರೆ, ಆ ಎಲ್ಲಾ ಅಂತೆ-ಕಂತೆಗಳಿಗೆ ಚಿತ್ರತಂಡವೇ ಉತ್ತರ ಕೊಡಬೇಕಷ್ಟೇ.