ಮುಂಬಯಿ: ಅತಿರೇಕದ ಸ್ವಾರ್ಥಗಳಿಂದ ಮನುಷ್ಯ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಇದ್ದುದರಲ್ಲಿಯೇ ಸಂತೃಪ್ತಗೊಳ್ಳುವ ಜೀವನ ನಮ್ಮ ದಾಗಬೇಕು. ರಾಜಕೀಯ ಕೆಸರೆರಚಾಟ, ಅಧಿಕಾರದ ಲಾಲಸೆ ಇತ್ಯಾದಿ ಸಮಾಜದ ಸ್ವಾಸ್ಥ್ಯಕೆಡಿಸುವ ವಿಷಯಗಳ ಬಗ್ಗೆ ಜಾಗೃತರಾಗಬೇಕೆಂದು ಶತಮಾನಗಳ ಹಿಂದೆಯೇ ಯಕ್ಷಗಾನ ಬಯಲಾಟಗಳು ನಮ್ಮನ್ನು ಎಚ್ಚರಿಸಿದ್ದವು. ನಾನು ನನ್ನದು, ಎಲ್ಲವೂ ನನ್ನಿಂದಲೇ ಎಂಬ ದುರಹಂಕಾರವನ್ನು ಶಮನಗೊಳಿಸುವುದೇ ಪೌರಾಣಿಕ ಕಥೆಗಳ ಉದ್ದೇಶವಾಗಿದೆ ಎಂದು ರಾಜಕೀಯ ನೇತಾರ, ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್ ಬಿ. ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಮಾ. 11ರಂದು ದಹಿಸರ್ ಪೂರ್ವದ ರಾವಲ್ಪಾಡದ ಶನೀಶ್ವರ ಚಾಮುಂಡೇಶ್ವರಿ ಮಂದಿರದ 17ನೇ ವಾರ್ಷಿಕೋತ್ಸವದ ಭಾಗವಾಗಿ ಆಯೋಜಿಸಲಾದ ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮಾನಗಳು ಅರ್ಹ ವ್ಯಕ್ತಿಗಳಿಗೆ ನೀಡಿ ಗೌರವಿಸಿದಾಗ ಅದರ ಮೌಲ್ಯ ಘನತೆ ಹೆಚ್ಚುತ್ತದೆ. ಸಾಮಾನ್ಯ ಹುದ್ದೆಯಲ್ಲಿದ್ದು ನಿರಂತರ 17 ವರ್ಷಗಳ ಕಾಲ ಈ ಮಂದಿರಕ್ಕೆ ಯೋಗದಾನ ನೀಡಿದ ಜನಾರ್ದನ ವಿ. ಪೂಜಾರಿ ಅವರನ್ನು ಸಮ್ಮಾನಿಸಿರುವುದು ಅರ್ಥಪೂರ್ಣವಾಗಿದೆ ಎಂದರು. ಮಂದಿರದ ಅಧ್ಯಕ್ಷ ಕೃಷ್ಣ ಎಂ. ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಂದಿರಕ್ಕೆ ನಿರಂತರ ಸಹಕರಿಸುತ್ತಿರುವ ಸಮಾಜ ಸೇವಕ ಜನಾರ್ದನ ವಿ. ಪೂಜಾರಿ ದಂಪತಿಯನ್ನು ವೇದಿಕೆಯ ಗಣ್ಯರು ಫಲಪುಷ್ಪ, ಶಾಲು, ನೆನಪಿನ ಕಾಣಿಕೆಯೊಂದಿಗೆ ಸಮಾಜ ರತ್ನ ಬಿರುದು ನೀಡಿ ಗೌರವಿಸಿದರು.ಕರ್ನಾಟಕ ಸಂಘದ ಅಧ್ಯಕ್ಷ ಎಂ. ಜಿ. ಶೆಟ್ಟಿ, ಕಲಾ ಪೋಷಕರಾದ ಸುರೇಶ್ ಕಾಂಚನ್, ಸಂತೋಷ್ ಪುತ್ರನ್, ಗೋಪಾಲ್ ಪುತ್ರನ್, ಆರ್. ಕೆ. ಮೂಲ್ಕಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಂದಾ ಶೆಟ್ಟಿ, ಡಾ| ಸತೀಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ಮಂದಿರದ ಪ್ರದಾನ ಅರ್ಚಕ ಚೆನ್ನಪ್ಪ ವಿ. ಪೂಜಾರಿ, ಕಾರ್ಯದರ್ಶಿ ಸುರೇಶ್ ಮೊಗವೀರ, ಪ್ರಸಾದ್ ಪೂಜಾರಿ, ಪುಷ್ಪಾ ಬಂಗೇರ ಅವರು ಗಣ್ಯರನ್ನು ಗೌರವಿಸಿದರು. ಹಿರಿಯ ರಂಗ ನಟ ಗುಣಪಾಲ ಉಡುಪಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಸದ್ಗುರು ನಿತ್ಯಾನಂದ ಕೃಪಾಪೋಷಿತ ಯಕ್ಷಗಾನ ಮಂಡಳಿ ದಹಿಸರ್ ಇದರ ಕಲಾವಿದರಿಂದ ಶ್ರೀ ಭಗವತೀ ಕ್ಷೇತ್ರ ಮಹಾತೆ¾ ಬಯಲಾಟ ಪ್ರದರ್ಶನಗೊಂಡಿತು. ತುಳು ಕನ್ನಡಿಗರು ಸ್ಥಳೀಯ ರಾಜಕೀಯ ನೇತಾರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡರು.