Advertisement

ಭಕ್ತಕೋಟಿಯಿಲ್ಲದೆ ಚಾಲನೆಗೊಂಡ ಪುರಿ ರಥಯಾತ್ರೆ

10:19 AM Jun 24, 2020 | mahesh |

ಪುರಿ: ಭಕ್ತಕೋಟಿಯಿಂದ ತುಂಬಿ ತುಳುಕುತ್ತಿದ್ದ ವಿಶ್ವಪ್ರಸಿದ್ಧ ಪುರಿ ಜಗನ್ನಾಥನ ರಥಯಾತ್ರೆ ಇದೇ ಮೊದಲ ಬಾರಿಗೆ ಭಕ್ತರ ಅನುಪಸ್ಥಿತಿ ಕಂಡಿದೆ. ಸುಪ್ರೀಂನ ನಿರ್ದೇಶನದಂತೆ ಪುರೋಹಿತರು ಹಾಗೂ ಪರಿಚಾರಕರ ಉಪಸ್ಥಿತಿಯಲ್ಲಿ ಮಂಗಳವಾರ ಬೆಳಗ್ಗೆ ರಥಯಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಂಪೂರ್ಣ ಸ್ಯಾನಿಟೈಸರ್‌ಗೊಂಡ ದೇಗುಲದ ಆವರಣದಲ್ಲಿ ಮೂರು ರಥಗಳು ಬಣ್ಣ ಬಣ್ಣದ ಪುಷ್ಪಗಳಿಂದ ಅಲಂಕೃತಗೊಂಡಿದ್ದವು. ಪುರಿಯ ರಾಜ ಗಜಪತಿ ಮಹಾರಾಜ್‌ ದಿವ್ಯಸಿಂಗ್‌ ದೇವ್‌ ರಥಗಳನ್ನು ಸಂಪ್ರದಾಯದಂತೆ ಚಿನ್ನದ ಹಿಡಿಕೆಯ ಪೊರಕೆಯಿಂದ ಸ್ವತ್ಛಗೊಳಿಸಿದರು. ಸಾಂಪ್ರದಾಯಿಕ ವಾದ್ಯಗಳು, ವೇದಘೋಷಗಳು, ಒಡಿಶಾ ನೃತ್ಯಗಳ ನಡುವೆ ಜಗನ್ನಾಥ, ಬಲರಾಮ, ಸುಭದ್ರೆಯ ವಿಗ್ರಹಗಳನ್ನು “ಪಹಂಡಿ’ ಶಾಸ್ತ್ರದ ಮೂಲಕ ರಥದಲ್ಲಿ ಕೂರಿಸಲಾಯಿತು.

Advertisement

500 ಮಂದಿ ಮಾತ್ರ: ರಥೋತ್ಸವಕ್ಕೆ ಜನಸ್ತೋಮ ತಡೆಯಲು ಸುಪ್ರೀಂನ ಆದೇಶದಂತೆ ಪುರಿಯಲ್ಲಿ 41 ಗಂಟೆಗಳ ಕರ್ಫ್ಯೂ ಜಾರಿ ಮಾಡಲಾಗಿತ್ತು. ಒಂದು ರಥ ಎಳೆಯಲು ಸಾಮಾಜಿಕ ಅಂತರದಲ್ಲಿ 500 ಮಂದಿಗೆ ಅವಕಾಶ ಕಲ್ಪಿಸಲಾಗಿತ್ತು.

ಕೋವಿಡ್ ಟೆಸ್ಟ್‌: ರಥಯಾತ್ರೆಯ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವ 700 ಪುರೋಹಿತ ಸಿಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. “ಕೋರ್ಟ್‌ನ ಆದೇಶದಂತೆ ಅರ್ಚಕ ಸಿಬಂದಿ ಆರೋಗ್ಯ ಪರೀಕ್ಷೆಗೊಳಪಟ್ಟಿದ್ದರು. ಒಬ್ಬ ಅರ್ಚಕರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

ಶುಭ ಕೋರಿದ ಪ್ರಧಾನಿ
“ಭಗವಾನ್‌ ಜಗನ್ನಾಥರ ರಥಯಾತ್ರೆ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಭಕ್ತಿ ಯಿಂದ ತುಂಬಿದ ಈ ರಥಯಾತ್ರೆ ಪ್ರಯಾಣವು ಭಾರತೀಯರ ಜೀವನ ದಲ್ಲಿ ಸಂತೋಷ, ನೆಮ್ಮದಿ, ಒಳಿತು ಮತ್ತು ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜೈ ಜಗ ನ್ನಾಥ್‌!’ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.

ಕೋವಿಡ್ ವಿರುದ್ಧದ ಈ ಹೋರಾಟದಲ್ಲಿ ಜಗನ್ನಾಥ ನಮ್ಮೆಲ್ಲರಿಗೂ ಧೈರ್ಯ ಮತ್ತು ಸ್ಥೈರ್ಯ ನೀಡಿ ಆಶೀರ್ವದಿಸಲಿ. ಉತ್ತಮ ಆರೋಗ್ಯ, ಸಂತೋಷ ಕರುಣಿಸಲಿ.
ರಾಮನಾಥ್‌ ಕೋವಿಂದ್‌, ರಾಷ್ಟ್ರಪತಿ

Advertisement

ರಥಯಾತ್ರೆಯ ಕೌತುಕ
ಪ್ರತಿವರ್ಷ 3 ದೈತ್ಯ ಬೇವಿನ ಜಾತಿಯ ಮರಗಳಿಂದ ಬೃಹತ್‌ ರಥಗಳನ್ನು ತಯಾರಿಸಲಾಗುತ್ತದೆ.
ಜಗನ್ನಾಥನ ರಥವನ್ನು ಗರುಡ ಧ್ವಜ (44 ಅಡಿ), ಬಲರಾಮನ ರಥಕ್ಕೆ ತಾಳಧ್ವಜ (43 ಅಡಿ), ಸುಭದ್ರೆಯ ರಥವನ್ನು ಪದ್ಮಧ್ವಜ (42 ಅಡಿ) ಎಂದೂ ಕರೆಯುತ್ತಾರೆ.
ಶ್ರೀಕೃಷ್ಣನ ರಥದಲ್ಲಿ ಸಾರಥಿ ದಾರುಕ, ಜಯ- ವಿಜಯರ ಕಾವಲಿನ ಕೆತ್ತನೆಗಳಿವೆ.
ರಥಕ್ಕೆ ಬರೋಬ್ಬರಿ 16 ಚಕ್ರ.
ದೇವಾಲಯದಿಂದ ವಿಗ್ರಹಗಳನ್ನು ಹೊರತಂದು ರಥದಲ್ಲಿ ಕೂರಿಸುವ ಸಂಪ್ರದಾಯಕ್ಕೆ “ಪಹಂಡಿ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next