ಕನ್ನಡದ ಪ್ರಥಮ ರಾಜಧಾನಿ ಶಿರಸಿಯ ಬನವಾಸಿಯಲ್ಲಿ ನಡೆದ “ಕದಂಬೋತ್ಸವ’ದಲ್ಲಿ ಬ್ರಹ್ಮಾವರದ “ಯಕ್ಷಸಿರಿ ವನಿತಾ ಬಳಗ’ ಇವರು “ರತ್ನಾವತಿ ಕಲ್ಯಾಣ’ ಎನ್ನುವ ಯಕ್ಷಗಾನ ಪ್ರದರ್ಶಿಸಿದರು. ಅಂಗ ದೇಶದ ಅರಸನಾದ ದೃಢವರ್ಮನು ತನ್ನ ಮಗಳು ರತ್ನಾವತಿಯ ವಿವಾಹವನ್ನು ಕೌಶಂಬಿಯ ರಾಜ ವತ್ಸಾಖ್ಯನೊಂದಿಗೆ ನೆರವೇರಿಸಲು ನಿಶ್ಚಯಿಸಿರುತ್ತಾನೆ. ಅದರೆ ಕಳಿಂಗ ದೇಶದ ಭದ್ರಸೇನನು ರತ್ನಾವತಿಯ ಚೆಲುವಿಗೆ ಮನಸೋತು ತನ್ನಿಚ್ಚೆಯನ್ನು ದೃಢವರ್ಮನಲ್ಲಿ ತಿಳಿಸಿದಾಗ ಆತ ತಿರಸ್ಕರಿಸುತ್ತಾನೆ. ಕುಪಿತನಾದ ಭದ್ರಸೇನನು ದೃಢವರ್ಮನನ್ನು ಬಂಧಿಸಿ ಮಗಳನ್ನು ಅಪಹರಿಸಿ ಕೊಂಡೊಯ್ಯುವಾಗ ಎದುರಾದ ವಿದ್ಯುಲ್ಲೋಚನನೆಂಬ ರಾಕ್ಷಸನಿಂದ ಹತನಾಗುತ್ತಾನೆ. ಈಕೆಯನ್ನು ತಾನು ಮದುವೆಯಾಗಬೇಕೆಂದು ಕಾಡಿನ ಅರಮನೆಯಲ್ಲಿ ಬಂಧಿಸಿಡುತ್ತಾನೆ. ಬೇಟೆಗಾಗಿ ಬಂದ ವತ್ಸಾಖ್ಯನು ಆಕಸ್ಮಿಕವಾಗಿ ರತ್ನಾವತಿಯನ್ನು ಅಲ್ಲಿ ಕಂಡು ಅವಳಿಂದ ವಿಚಾರವನ್ನು ತಿಳಿದು ತಾನೇ ವತ್ಸಾಖ್ಯನೆಂಬ ವಿಷಯ ತಿಳಿಸಿ ರಾಕ್ಷಸನನ್ನು ಸಂಹರಿಸುತ್ತಾನೆ. ಮುಂದೆ ದೃಢವರ್ಮನನ್ನು ಬಂಧ ಮುಕ್ತಗೊಳಿಸಿ ರತ್ನಾವತಿಯನ್ನು ವಿವಾಹವಾಗುತ್ತಾನೆ ಎಂಬಲ್ಲಿಗೆ ಪ್ರಸಂಗವು ಮುಕ್ತಾಯವಾಗುತ್ತದೆ. ದೃಢವರ್ಮನಾಗಿ ಗಾಯತ್ರೀ ಶಾಸ್ತ್ರಿಯವರು ರಾಜ ಗಾಂಭೀರ್ಯದೊಂದಿಗೆ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರೆ, ಭಾಗೀರಥಿ ಎಂ. ರಾವ್ ಭದ್ರಸೇನನಾಗಿ ರತ್ನಾವತಿಯ ಚೆಲುವಿಗೆ ಮನಸೋಲುವ ಪರಿಯನ್ನು ಹಾಗೂ ದೃಢವರ್ಮನು ತನ್ನ ಮನದಿಚ್ಚೆಯನ್ನು ತಿರಸ್ಕರಿಸಿದಾಗ ಕುಪಿತನಾಗುವ ಸನ್ನಿವೇಶವನ್ನು ನೃತ್ಯಾಭಿನಯ ಮತ್ತು ಮಾತಿನ ಗಾಂಭೀರ್ಯದ ಮೂಲಕ ವ್ಯಕ್ತಪಡಿಸಿ ಪ್ರೇಕ್ಷಕರ ಮನ ಸೂರೆಗೊಂಡರು. ವಿದ್ಯುಲ್ಲೋಚನನಾಗಿ ನಾಗರತ್ನ ಹೇಳೆìಯವರು ರಾಕ್ಷಸ ಗಾಂಭೀರ್ಯವನ್ನು ಅನಾವರಣಗೊಳಿಸಿದ ಪರಿ, ರತ್ನಾವತಿಯಾಗಿ ಕು| ಸಹನಾರ ಭಾವಾಭಿವ್ಯಕ್ತಿ, ವತ್ಸಾಖ್ಯನಾಗಿ ಕು| ಅಶ್ವಿನಿಯವರ ಲವಲವಿಕೆಯ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಭಾಗವತರಾಗಿ ಉದಯ ಕುಮಾರ್ ಹೊಸಾಳ, ಮದ್ದಳೆಯಲ್ಲಿ ದೇವದಾಸ ಕೂಡ್ಲಿ, ಚೆಂಡೆಯಲ್ಲಿ ಜನಾರ್ದನ ಆಚಾರ್ ಹಿಮ್ಮೇಳದಲ್ಲಿ ಸಹಕರಿಸಿದರು. ವೇಷ ಭೂಷಣ ಬಾಲಕೃಷ್ಣ ನಾಯಕ್ ಬ್ರಹ್ಮಾವರ ಇವರದ್ದಾಗಿತ್ತು.
ಕೆ. ದಿನಮಣಿ ಶಾಸ್ತ್ರಿ