Advertisement

Drought: ಬರವನ್ನೇ ವರವಾಗಿ ಪರಿವರ್ತಿಸಿಕೊಂಡ ರತ್ನಮ್ಮ

10:58 PM Nov 17, 2023 | Team Udayavani |

ಬೆಂಗಳೂರು: “ಬರ”ದಿಂದ ಬೇಸತ್ತು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಮಹಿಳೆ ಭಿನ್ನ ಆಲೋಚನೆಯಿಂದ “ಬರ’ವನ್ನೇ “ವರ’ವಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರ ಫ‌ಲವಾಗಿ ಇಂದು ವಾರ್ಷಿಕ ಕೋಟ್ಯಂತರ ರೂ. ವಹಿವಾಟು ಮಾಡುವುದರ ಜತೆಗೆ ಊರಿನ ನಾಲ್ಕಾರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಇದು ಕೋಲಾರ ಜಿಲ್ಲೆ ಶ್ರೀನಿವಾಸಪುರದ ಗುಂಡಮನತ್ತ ಗ್ರಾಮದ ಎ.ವಿ. ರತ್ನಮ್ಮ ಅವರ ಯಶೋಗಾಥೆ. ತನ್ನ 3 ಎಕ್ರೆ ಜಮೀನಿನಲ್ಲಿ ನಾಲ್ಕು ವರ್ಷಗಳ ಹಿಂದೆ ರೇಷ್ಮೆ ಕೃಷಿ ಮಾಡುತ್ತಿದ್ದರು. ಆದರೆ ಸತತ ಎರಡು ವರ್ಷ ಮಳೆ ಕೈಕೊಟ್ಟ ಕಾರಣ ನೀರಿನ ಕೊರತೆ ಉಂಟಾಯಿತು. ಇಂಥ ಸಂದರ್ಭದಲ್ಲಿ ಧೃತಿಗೆಡದೆ ರೇಷ್ಮೆ ಗೂಡಿನ ಕೇಂದ್ರವನ್ನೇ ಸಿರಿಧಾನ್ಯ ಘಟಕವನ್ನಾಗಿ ಪರಿವರ್ತಿಸಿದರು.

Advertisement

ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಮ್ಮದೇ ಬ್ರ್ಯಾಂಡ್‌ ಮಾಡಿ ಮಾರುಕಟ್ಟೆಗೆ ಬಿಟ್ಟರು. ಇದರೊಂದಿಗೆ ಸಮಗ್ರ ಮತ್ತು ಸುಸ್ಥಿರ ಬೇಸಾಯವನ್ನೂ ಮಾಡಿದರು. ಈಗ ಅದೇ 3 ಎಕ್ರೆಯಲ್ಲಿ ವಾರ್ಷಿಕ ಕನಿಷ್ಠ 30 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿದ್ದಾರೆ.

ರತ್ನಮ್ಮ ಅವರ ಯಶೋಗಾಥೆಯನ್ನು ಗುರುತಿಸಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸುವ ಕೃಷಿ ಮೇಳದಲ್ಲಿ “ಕ್ಯಾನ್‌ ಬ್ಯಾಂಕ್‌ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಸಾಧನೆಯ ಹಾದಿಯನ್ನು ರತ್ನಮ್ಮ “ಉದಯವಾಣಿ’ ಜತೆಗೆ ಹಂಚಿಕೊಂಡರು.

ಮೊದಲು ಮೂರು ಎಕ್ರೆ ಜಮೀನಿನಲ್ಲಿ ರೇಷ್ಮೆ ಮಾಡುತ್ತಿದ್ದೆವು. ಮಳೆ ಕೈಕೊಟ್ಟಿದ್ದರಿಂದ ಹಸು ಹೋಯಿತು. ಹಿಪ್ಪುನೇರಳೆಯೂ ಹೋಯಿತು. ದಿಕ್ಕುತೋಚದಾಯಿತು. ವಲಸೆ ಹೋಗಲು ಮನಸ್ಸಿರಲಿಲ್ಲ. ಆಗ ಕೋಲಾರ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ, ಸಿರಿಧಾನ್ಯಗಳ ಮೌಲ್ಯವರ್ಧನೆ ಬಗ್ಗೆ ತರಬೇತಿ ಪಡೆದೆ. ಜಮೀನಿನಲ್ಲಿದ್ದ ರೇಷ್ಮೆ ಘಟಕವನ್ನೇ ಸಿರಿಧಾನ್ಯಗಳ ಘಟಕವನ್ನಾಗಿ ಪರಿವರ್ತಿಸಿದೆ. ಮಾಲ್ಟ್, ದೋಸೆಹಿಟ್ಟು, ಸ್ಥಳೀಯ ಸಾಂಬಾರು ಪೌಡರ್‌, ಆಮ್ಲ ಸಹಿತ ಸುಮಾರು 20 ಉತ್ಪನ್ನಗಳನ್ನು ತಯಾರಿಸಲು ಕಲಿತೆ. ಅವುಗಳನ್ನು “ವೇದಿಕ್‌ ಫ‌ುಡ್‌’ ಮತ್ತು “ವರದಾ ಫ‌ುಡ್‌’ ಬ್ರ್ಯಾಂಡ್‌ ಅಡಿ ಮಾರುಕಟ್ಟೆಗೆ ಬಿಡುತ್ತಿದ್ದೇನೆ’ ಎಂದು ಹೇಳಿದರು.

ಮಾಸಿಕ 50 ಸಾವಿರ ಸಂಬಳ ಪಾವತಿ
ಇಂದು ನಮ್ಮ ಉತ್ಪನ್ನಗಳು ಆಂಧ್ರಪ್ರದೇಶ, ತಮಿಳುನಾಡು, ದಿಲ್ಲಿ ಸಹಿತ ಹಲವು ರಾಜ್ಯಗಳಿಗೆ ಹೋಗುತ್ತದೆ. ಅಮೆರಿಕ, ಮಲೇಷಿಯಾ, ಜಪಾನ್‌, ದುಬಾೖಗೂ ಕುಟುಂಬಗಳ ಮೂಲಕ ತಲುಪುತ್ತಿವೆ. ರೈತ ಮಹಿಳೆ ಆಗಿದ್ದವಳು ಈಗ ಮಹಿಳಾ ಉದ್ಯಮಿಯಾಗಿದ್ದೇನೆ. ನನ್ನ ಕಿರು ಉದ್ಯಮದಲ್ಲಿ 5-6 ಮಹಿಳೆಯರಿಗೆ ಕೆಲಸವನ್ನೂ ನೀಡಿದ್ದೇನೆ. ಅವರೆಲ್ಲರಿಗೂ ಮಾಸಿಕ ಒಟ್ಟಾರೆ 50 ಸಾವಿರ ರೂ. ಸಂಬಳ ನೀಡುತ್ತಿದ್ದೇನೆ. ಜತೆಗೆ ಹತ್ತಾರು ರೈತರಿಂದ ಸಿರಿಧಾನ್ಯಗಳನ್ನೂ ಖರೀದಿಸುತ್ತೇನೆ. ವಾರ್ಷಿಕ ಒಂದು ಕೋಟಿ ರೂ.ಗಳಷ್ಟು ವಹಿವಾಟು ಆಗುತ್ತಿದ್ದು, ಅದರಲ್ಲಿ ಕನಿಷ್ಠ ಶೇ. 30ರಷ್ಟು ಅಂದರೆ 30 ಲಕ್ಷ ರೂ. ಆದಾಯ ಬರುತ್ತಿದೆ’ ಎಂದು ವಿವರಿಸಿದರು.

Advertisement

ಅಂದಹಾಗೆ, ಶಿಕ್ಷಕಿಯಾಗಬೇಕು ಎಂಬ ಆಸೆಯಿಂದ ರತ್ನಮ್ಮ ದಶಕಗಳ ಹಿಂದೆಯೇ ಟಿಸಿಎಚ್‌ ವ್ಯಾಸಂಗ ಪೂರೈಸಿದ್ದರು. ಆದರೆ ಶಿಕ್ಷಕ ಹುದ್ದೆ ಸಿಗಲಿಲ್ಲ. ಈಗ ಬೆಂಗಳೂರಿನ ಹೈಟೆಕ್‌ ಶಾಲಾ-ಕಾಲೇಜುಗಳು, ಸ್ವ-ಸಹಾಯ ಸಂಘಗಳಿಗೆ ಸಿರಿಧಾನ್ಯಗಳ ಮಹತ್ವದ ಬಗ್ಗೆ ಪಾಠವನ್ನೂ ಮಾಡುತ್ತಿದ್ದಾರೆ. ಪತಿ ಕೂಡ ಟಿಸಿಎಚ್‌ ಪೂರೈಸಿ, ರತ್ನಮ್ಮ ಜತೆಗೆ ಕೈಜೋಡಿಸಿದ್ದಾರೆ. ಮಗಳು ಎಂಟೆಕ್‌ ಮುಗಿಸಿ ಪಿಎಚ್‌ಡಿ ಮಾಡುತ್ತಿದ್ದಾಳೆ. ಅವಳು ಕೂಡ ಶೀಘ್ರದಲ್ಲೇ ಕೃಷಿಯಲ್ಲಿ ತೊಡಗಿಕೊಳ್ಳಲಿದ್ದಾಳೆ ಎಂದು ರತ್ನಮ್ಮ ಹೇಳಿದರು.

ಪ್ರಶಸ್ತಿ ಪುರಸ್ಕೃತರು
ಕೃಷಿ ಮೇಳದಲ್ಲಿ ದೇವನಹಳ್ಳಿಯ ಬೀಡಿಗಾನಹಳ್ಳಿ ನಿವಾಸಿ ಬಿ.ಆರ್‌. ಮಂಜುನಾಥ್‌ ಅವರಿಗೆ “ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ’, ರಾಮನಗರದ ಬಿಳಗುಂಬದ ಬಿ.ಸಿ. ವಾಸು ಅವರಿಗೆ “ಕ್ಯಾನ್‌ ಬ್ಯಾಂಕ್‌ ರಾಜ್ಯಮಟ್ಟದ ಅತ್ಯುತ್ತಮ ರೈತ’ ಮತ್ತು ಚನ್ನರಾಯಪಟ್ಟಣದ ಬಿ.ಜಿ. ಮಂಜೇಗೌಡ ಅವರಿಗೆ “ಡಾ| ಆರ್‌. ದ್ವಾರಕೀನಾಥ್‌ ಅತ್ಯುತ್ತಮ ರೈತ’ ಹಾಗೂ ಭಾರತೀಯ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ| ಎಂ.ವಿ. ಧನಂಜಯ ಅವರಿಗೆ ಸಂಶೋಧನ ಕ್ಷೇತ್ರದಲ್ಲಿ “ಡಾ| ಎಂ.ಎಚ್‌. ಮರೀಗೌಡ ರಾಷ್ಟ್ರೀಯ ದತ್ತಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ರೈತ ರಾಜೇಂದ್ರಗೆ ಜಾಲತಾಣವೇ ಸ್ಫೂರ್ತಿ
ವಿದೇಶಿ ತಳಿಯ ಹೂವು-ಹಣ್ಣುಗಳನ್ನು ಬೆಳೆಯುವುದು ನನ್ನ ಹವ್ಯಾಸ. ಸುಮಾರು 1,500 ಪ್ರಕಾರದ ಹೂವು-ಹಣ್ಣುಗಳನ್ನು ಬೆಳೆದಿದ್ದು, ಔಷಧೀಯ ಹಣ್ಣುಗಳನ್ನು ರೋಗಿಗಳಿಗೆ ಉಚಿತವಾಗಿ ನೀಡುತ್ತಿದ್ದೇನೆ. ಇದಕ್ಕೆ ಸಾಮಾಜಿಕ ಜಾಲತಾಣ ಸ್ಫೂರ್ತಿ ಎಂದು ಎಚ್‌.ಟಿ. ರಾಜೇಂದ್ರ ತಿಳಿಸುತ್ತಾರೆ. “ಡಾ| ಎಂ.ಎಚ್‌. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ’ ಪ್ರಶಸ್ತಿಗೆ ಭಾಜನರಾದ ಶಿವಮೊಗ್ಗದ ಜಿಲ್ಲೆ ಸಾಗರ ತಾಲೂಕಿನ ಹೊಸಹಳ್ಳಿಯ ರಾಜೇಂದ್ರ ತಮ್ಮ 13 ಎಕ್ರೆ ಜಮೀನಿನಲ್ಲಿ 40ಕ್ಕೂ ಅಧಿಕ ಜಾತಿಯ ವಾಣಿಜ್ಯ ಬೆಳೆಗಳು, 1,500 ಪ್ರಕಾರದ ದೇಶೀಯ-ವಿದೇಶಿ ಹೂವು, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಔಷಧೀಯ ಹಣ್ಣುಹಂಪಲುಗಳೂ ಇವೆ. ಇವುಗಳನ್ನು ಪ್ರವೃತ್ತಿಯಾಗಿ ಬೆಳೆಯುತ್ತಿದೆ ಎನ್ನುತ್ತಿದ್ದಾರೆ.

 ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next