ಬಾಗೇಪಲ್ಲಿ: ತಾಲೂಕಿನ 101 ನ್ಯಾಯ ಬೆಲೆ ಅಂಗಡಿಗಳ ವ್ಯಾಪ್ತಿಯ 5736 ಪಡಿತರ ಕುಟುಂಬಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಹಲವು ಕಂಟಕ ಎದುರಾಗಿದ್ದು, ಇತ್ತ ಹಣವೂ ಇಲ್ಲ, ಪಡಿತರವೂ ಇಲ್ಲದೇ ಪರದಾಡುವಂತಾಗಿದೆ.
ತಾಲೂಕಿನಲ್ಲಿ ಒಟ್ಟು 47,756 ಪಡಿತರ ಚೀಟಿಗಳಿದ್ದು ಕೆಲವರು ಬ್ಯಾಂಕ್ ಖಾತೆ ತೆರೆಯಲು, ಇ-ಕೆವೈಸಿ ಲಿಂಕ್ ಮಾಡಿಸಲು ನಿತ್ಯ ಬ್ಯಾಂಕ್ ಮತ್ತು ಇಂಟರ್ನೆಟ್ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ.
ಹಣ ಪಾವತಿಗೆ ವ್ಯವಸ್ಥೆ: ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗಾಗಲೇ “ಅನ್ನ ಭಾಗ್ಯ’ ಯೋಜನೆಯಡಿ ಫಲಾ ನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದೆ. ಬಾಗೇಪಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಪಡಿತರ ಚೀಟಿ ಹೊಂದಿ ರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಡಿ ಮೂಲಕ ಹಣ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ.
ಸಿದ್ಧತೆ: ಚಿಕ್ಕಬಳ್ಳಾಪುರ ಜಿಲ್ಲಾಡಳಿತ “ಅನ್ನ ಭಾಗ್ಯ’ ಯೋಜನೆಯಡಿ 5 ಕೆ.ಜಿ.ಅಕ್ಕಿ ಜತೆಗೆ ಉಳಿದ 5 ಕೆ.ಜಿ. ಅಕ್ಕಿಗೆ ಪ್ರತಿ ಕೆ.ಜಿ.ಗೆ 34 ರೂ.ನಂತೆ ದರ ನಿಗದಿಪಡಿಸಿ ದಂತೆ ಪಡಿತರ ಚೀಟಿಯ ಪ್ರತಿ ಸದಸ್ಯನಿಗೆ ತಲಾ 170 ರೂ. ಹಣ ವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ಪಾವತಿಗೆ ಸಿದ್ಧತೆ ಮಾಡಿಕೊಂಡಿದೆ.
ಫಲಾನುಭವಿಗಳಿಗೆಸೂಚನೆ: ತಾಲೂಕಿ ನಾದ್ಯಂತ ಒಟ್ಟು 5,736 ಪಡಿತರ ಚೀಟಿ ದಾರರಿಗೆ ಬ್ಯಾಂಕ್ ಖಾತೆ ಗಳಿಲ್ಲ. ಈಗಾಗಲೇ ಬ್ಯಾಂಕ್ ಖಾತೆ ಇಲ್ಲದ ಹಾಗೂ ಆಧಾರ್ ಲಿಂಕ್ ಆಗದ ಫಲಾನು ಭವಿಗಳ ಪಟ್ಟಿ ಸಿದ್ಧಪಡಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಬ್ಯಾಂಕ್ ಖಾತೆ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಕೆಲವರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೂ ಆಧಾರ್ ಲಿಂಕ್ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ ಎಂಬುದು ಪರಿಶೀಲನೆ ವೇಳೆ ಕಂಡು ಬಂದಿದೆ. ಬ್ಯಾಂಕ್ ಖಾತೆ ಇಲ್ಲದವರು, ಖಾತೆ ಇದ್ದರೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಆಹಾರ ಇಲಾಖೆ, ನೋಂದಣಿ ಮಾಡಿಸಲು ನ್ಯಾಯ ಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೂಚಿಸುತ್ತಿದ್ದಾರೆ.
ಇ ಕೆವೈಸಿ ಕೂಡಲೇ ಸರಿಪಡಿಸಿಕೊಳ್ಳಿ: ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿ, ಗೂಳೂರು, ಚೇಳೂರು, ಪಾತಪಾಳ್ಯ, ಮಿಟ್ಟೇಮರಿ ಹೋಬಳಿ ಕೇಂದ್ರ ಹಾಗೂ ಪಟ್ಟಣದ 23 ವಾರ್ಡ್ ಸೇರಿ 101 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 47,756 ಕುಟುಂಬ ಪಡಿತರ ಕಾರ್ಡ್ ಹೊಂದಿವೆ. ಇದರಲ್ಲಿ ಆಧಾರ್ ಲಿಂಕ್ ಆಗದೇ ಇರುವ, ಸಕ್ರಿಯ ಬ್ಯಾಂಕ್ ಖಾತೆ ಇಲ್ಲದೇ ಇರುವ ಮತ್ತು ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಫಲಾನುಭವಿಗಳು ಜು.20ರೊಳಗಾಗಿ ಸರಿಪಡಿಸಿಕೊಳ್ಳಲು ಬಾಗೇಪಲ್ಲಿ ತಾಲೂಕು ಕಚೇರಿ ತಹಶಿಲ್ದಾರ್ ರಾಮಲಕ್ಷ್ಮಯ್ಯ ಮನವಿ ಮಾಡಿದ್ದಾರೆ.
ಅನ್ನಭಾಗ್ಯದಡಿ ಉಚಿತ 10 ಕೆ.ಜಿ. ಅಕ್ಕಿ ಎಂದಾಗ ನಮಗೆ ಸಂತೋಷ ಆಯ್ತು. ಆದರೇ ಇದೀಗ, 5 ಕೆ.ಜಿ. ಅಕ್ಕಿ ಕಡಿತಗೊಳಿಸಿ ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆಂದು ಘೋಷಿಸಿದ್ದಾರೆ. ಇದಕ್ಕೆ ನೂರೆಂಟು ಷರತ್ತು ವಿಧಿಸಿದ್ದು ನಿತ್ಯ ಬ್ಯಾಂಕ್, ಇಂಟರ್ನೆಟ್ ಸೆಂಟರ್‌ಗಳಿಗೆ ಅಲೆದಾಡಬೇಕಿದೆ.
●ಸುಬ್ಬಮ್ಮ, ಬಾಗೇಪಲ್ಲಿ