Advertisement

ಹೊರ ರಾಜ್ಯದ ಚೀಟಿದಾರರಿಗೂ ಅಕ್ಕಿ -ಗೋಧಿ

05:06 PM Apr 03, 2020 | Suhan S |

ಕಲಬುರಗಿ: ಕೋವಿಡ್ 19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆರಂಭಿಸಿದ್ದು, ಸಂಕಷ್ಟದ ಸಮಯದಲ್ಲಿ ಎಲ್ಲ ಫಲಾನುಭವಿಗಳು ಲಾಭ ಪಡೆಯಲು ನಿಯಮಗಳನ್ನು ಸರಳೀಕರಣ ಮಾಡಲಾಗಿದೆ.

Advertisement

ಬಯೋಮೆಟ್ರಿಕ್‌ ಆಧಾರಿತ ಪಡಿತರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಬದಲು ಆಧಾರ್‌ ಕಾರ್ಡ್‌ ಆಧಾರಿತ ಮೊಬೈಲ್‌ ಓಟಿಪಿ ಮೂಲಕ ಪಡಿತರ ವಿತರಣೆಗೆ ಕ್ರಮ ವಹಿಸಲಾಗಿದೆ. ಆಧಾರ್‌ ಕಾರ್ಡ್‌ನ ಮೊಬೈಲ್‌ ಸಂಖ್ಯೆ ನೋಂದಣಿಯಾಗದೇ ಇದ್ದರೂ ಮತ್ತೂಬ್ಬ ಸದಸ್ಯರ ಮೊಬೈಲ್‌ ಸಂಖ್ಯೆ ಬಳಸಿಕೊಡು ಓಟಿಪಿ ಪಡೆಯಬಹುದಾಗಿದೆ. ಫಲಾನುಭವಿಗಳ ಯಾವ ಸದಸ್ಯರಲ್ಲೂ ಮೊಬೈಲ್‌ ಇಲ್ಲದೇ ಹೋದ ಸಂದರ್ಭದಲ್ಲಿ ಬಯೋಮೆಟ್ರಿಕ್‌ ಆಧಾರವಾಗಿಯೇ ಪಡಿತರ ಪಡೆಯಬಹುದಾಗಿದೆ.

ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಕೇವಲ ಪಡಿತರ ಕಾರ್ಡ್‌ ಸಂಖ್ಯೆ ಬಳಸಿ ಸಹ ಫಲಾನುಭವಿಗಳು ಪಡಿತರದ ಲಾಭ ಪಡೆದುಕೊಳ್ಳಬಹುದಾಗಿದೆ. ಕಾರ್ಡ್‌ ಸಂಖ್ಯೆ ಬರೆದುಕೊಂಡು ವಿಶೇಷ ಪ್ರಕರಣ ಎಂದು ಭಾವಿಸಿ ಮಾನವೀಯ ಆಧಾರದ ಮೇಲೆ ಪಡಿತರ ವಿತರಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾರ್ಡ್‌ಗಳ ಸಂಖ್ಯೆ: ಜಿಲ್ಲೆಯಲ್ಲಿ ಒಟ್ಟಾರೆ 5,43,986 ಕಾರ್ಡ್‌ಗಳು ಇದೆ. ಬಿಪಿಎಲ್‌ ಕಾರ್ಡ್‌ಗಳು 4,83,118, ಅಂತ್ಯೋದಯ ಕಾರ್ಡ್‌ 63,455 ಹಾಗೂ ಎಪಿಎಲ್‌ ಕಾರ್ಡ್ ಗಳು 15,546 ಕಾಡ್‌ಗಳು ಇದೆ. ಅದೇ ರೀತಿ ಬಿಪಿಎಲ್‌ ಕಾರ್ಡ್‌ದಾರರಿಗಾಗಿ 1,57,661 ಕ್ವಿಂಟಲ್‌ ಅಕ್ಕಿ, ಅಂತ್ಯೋದಯ ಕಾರ್ಡ್‌ದಾರರಿಗೆ 44,418 ಕ್ವಿಂಟಲ್‌ ಅಕ್ಕಿ ಮತ್ತು ಎಪಿಎಲ್‌ ಕಾರ್ಡ್ ದಾರರಿಗೆ 22,624 ಕ್ವಿಂಟಲ್‌ ಅಕ್ಕಿ ಸಂಗ್ರಹವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಡಿ.ಎಂ.ಪಾಣಿ ಮಾಹಿತಿ ನೀಡಿದ್ದಾರೆ.

ಜಿಲ್ಲಾದ್ಯಂತ 983 ನ್ಯಾಯ ಬೆಲೆ ಅಂಗಡಿಗಳಲ್ಲಿ ಇದೆ. ಎಲ್ಲ ಕಾರ್ಡ್‌ದಾರರಿಗೆ ಏಪ್ರಿಲ್‌ ಹಾಗೂ ಮೇ ಎರಡು ತಿಂಗಳ ಪಡಿತರ ವಿತರಿಸಲಾಗುತ್ತದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿಯೊಬ್ಬ ಸದಸ್ಯನಿಗೆ ಎರಡೂ ತಿಂಗಳು ಸೇರಿ ತಲಾ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ 4 ಕೆ.ಜಿ ಗೋ ಧಿ ವಿತರಣೆಯಾಗಲಿದೆ. ಪ್ರತಿ ಅಂತ್ಯೋದಯ ಕಾರ್ಡ್‌ದಾರರಿಗೆ ಒಟ್ಟು 70 ಕೆ.ಜಿ ಅಕ್ಕಿ ಹಂಚಿಕೆ ಆಗಲಿದೆ. ಎಪಿಎಲ್‌ ಕಾರ್ಡ್‌ದಾರರಿಗೂ ಅಕ್ಕಿ ವಿತರಣೆ ಮಾಡಲಾಗುತ್ತದೆ. ಎಪಿಎಲ್‌ ಕಾರ್ಡ್‌ದಾರರ ಒಬ್ಬ ಸದಸ್ಯರಿದ್ದರೆ 5 ಕೆಜಿ ಅಕ್ಕಿ ನೀಡಲಾಗುತ್ತದೆ. ಒಬ್ಬರಿಗಿಂತ ಜಾಸ್ತಿ ಇದ್ದರೆ ಒಂದು ಕಾರ್ಡ್‌ಗೆ 10 ಕೆ.ಜಿ ಹಂಚಿಕೆ ಮಾಡಲಾಗುತ್ತದೆ. ಎಪಿಎಲ್‌ ಕಾರ್ಡ್‌ದಾರರ ಪ್ರತಿ ಕೆ.ಜಿ ಅಕ್ಕಿಗೆ 15 ರೂ. ನಿಗದಿ ಮಾಡಲಾಗಿದೆ. ಇವರು ಮುಂಚಿತವಾಗಿ ಪಡಿತರಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ನ್ಯಾಯ ಬೆಲೆ ಅಂಗಡಿಯಲ್ಲಿ ಜನ ಗುಂಪು ಸೇರದಂತೆ ನಿಯಂತ್ರಿಸಲು ಬೆಳಗ್ಗೆ 50 ಕಾರ್ಡ್‌ದಾರರಿಗೆ ಹಾಗೂ ಸಂಜೆ 50 ಕಾರ್ಡ್ ದಾರರಿಗೆ ಮಾತ್ರ ಪಡಿತರ ವಿತರಿಸಲಾಗುತ್ತದೆ ಎಂದು ವಿವರಿಸಿದರು. ಬಯೋಮೆಟ್ರಿಕ್‌ ಯಂತ್ರ ಬಳಸುವಾಗ ಸಾರ್ವಜನಿಕರು ಸಹ ಕೈಯನ್ನು ಶುದ್ಧವಾಗಿ ತೊಳೆದುಕೊಂಡು ಹಾಗೂ ಯಂತ್ರದ ಸುತ್ತಮುತ್ತ ಶುಚಿತ್ವ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಒನ್‌ ಕಾರ್ಡ್‌, ಒನ್‌ ರೇಷನ್‌’ :  ಕೇಂದ್ರ ಸರ್ಕಾರದ “ಒನ್‌ ಕಾರ್ಡ್‌, ಒನ್‌ ರೇಷನ್‌’ ಪರಿಕಲ್ಪನೆ ಅಡಿ ಹೊರ ರಾಜ್ಯದ ಪಡಿತರ ಚೀಟಿದಾರರು ಕೂಡ ಪಡಿತರ ಪಡೆಯಬಹುದಾಗಿದೆ. ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಕೇರಳ ರಾಜ್ಯದಲ್ಲೂ “ಒನ್‌ ಕಾರ್ಡ್‌, ಒನ್‌ ರೇಷನ್‌’ ಅನುಷ್ಠಾನ ಮಾಡಿಕೊಂಡಿದ್ದು, ಆ ರಾಜ್ಯದ ಫಲಾನುಭವಿಗಳ ಸುಲಭವಾಗಿ ಪಡಿತರ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಅಕ್ಕಿ ಮಾತ್ರ ಲಭ್ಯ :  ಪ್ರತಿ ಕಾರ್ಡ್‌ದಾರರಿಗೆ ಅಕ್ಕಿ ಮತ್ತು ಗೋಧಿ ವಿತರಿಸಲಾಗುತ್ತದೆ. ಏ.1ರಿಂದಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆರಂಭಿಸಲಾಗಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಮಾತ್ರ ಪೂರೈಕೆ ಆಗಿದೆ. ಗೋದಾಮುಗಳಿಂದ ಗೋಧಿ ಇನ್ನೂ ಸರಬರಾಜು ಆಗಿಲ್ಲ. ಆದ್ದರಿಂದ ಅಕ್ಕಿ ಬಯಸುವವರಿಗೆ ಮಾತ್ರವೇ ಪಡಿತರ ವಿತರಿಸಲಾಗುತ್ತದೆ.

ಕೋವಿಡ್ 19  ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಏಪ್ರಿಲ್‌ ಮತ್ತು ಮೇ ಎರಡು ತಿಂಗಳ ಅಕ್ಕಿ ಮತ್ತು ಗೋಧಿ ಪಡಿತರವನ್ನು ಒಟ್ಟಿಗೆ ವಿತರಿಸಲು ಇಲಾಖೆ ಆರಂಭಿಸಿದೆ. ಅಲ್ಲದೇ, ಇಲಾಖೆಯಿಂದ ಕಲಬುರಗಿ ನಗರದಲ್ಲಿ ಸುಮಾರು 800 ಜನ ನಿಗರ್ತಿಕರು, ಅನಾಥರು, ಅಲೆಮಾರಿಗಳಿಗೆ ಆಹಾರ ಧಾನ್ಯ ವಿತರಿಸಲಾಗುತ್ತದೆ.  –ಡಿ.ಎಂ.ಪಾಣಿ, ಪ್ರಭಾರಿ ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

 

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next