Advertisement

ಪಡಿತರ ಕೂಪನ್‌ ವಿತರಕರಿಗೆ ಹಣ ಬಿಡುಗಡೆ: ರಾಮೇಶ್ವರಪ್ಪ

11:52 AM Jan 07, 2017 | Team Udayavani |

ನಂಜನಗೂಡು: ಆಹಾರ ಇಲಾಖೆ ಪಡಿತರ ಕೂಪನ್‌ ನೀಡಿದವರಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಶನಿವಾರ ಫ್ರಾಂಚೈಸಿಯವರ ಬ್ಯಾಂಕ್‌ ಖಾತೆಗೆ ಜಮ ಆಗುತ್ತದೆ ಎಂದು ಜಿಲ್ಲಾ ಆಹಾರ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ತಿಳಿಸಿದರು.

Advertisement

“ಉದಯವಾಣಿ’ ಪತ್ರಿಕೆಯಲ್ಲಿ ಆಹಾರ ಇಲಾಖೆ ಪಡಿತರ ಕೂಪನ್‌ ವಿತರಿಕರಿಗೆ 6 ತಿಂಗಳುಗಳಿಂದ ಹಣ ನೀಡದ್ದಕ್ಕೆ ಪಡಿತರ ಚೀಟಿ ವಿತರಣೆ ನಿಲ್ಲಿಸಿ ಮುಷ್ಕರ ಪ್ರಾರಂಭಿಸಿದ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ನಂಜನಗೂಡಿಗೆ ಆಗಮಿಸಿ ಫ್ರಾಂಚೈಸಿಗಳನ್ನು ಭೇಟಿ ಮಾಡಿದರು.

ಬಳಿಕ ಮಾತನಾಡಿ, ಲೆಕ್ಕ ತಾಳೆ ಆಗದ್ದರಿಂದ ಹಣ ನೀಡುವುದು ತಡವಾಯಿತು. ಜೂನ್‌, ಜುಲೈ, ಅಗಸ್ಟ್‌ ತಿಂಗಳ ಬಾಕಿ 22 ಲಕ್ಷ ರೂ.ಗಳನ್ನು ಡಿಸೆಂಬರ್‌ 22ರಂದೇ ಬಿಡುಗಡೆ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಫ್ರಾಂಚೈಸಿಯವರ ಖಾತೆಗೆ ಜಮಾ ಆಗಿರಲಿಲ್ಲ ಎಂದರು.

20ರಿಂದ ಬಿಪಿಎಲ್‌ ಕಾರ್ಡ್‌ ವಿತರಣೆ: ಅನ್ನ ಭಾಗ್ಯ ಯೋಜನೆಯಲ್ಲಿ ಕಡುಬಡವರಿಗೆ ನೀಡಲಾಗುವ ಬಿಪಿಎಲ್‌ ಕಾರ್ಡುಗಳನ್ನು ವಿತರಿಸಲು ಪ್ರಾರಂಭಿಸಲಾಗುವುದು. ಸೂಕ್ತ ದಾಖಲಾತಿಗಳೊಡನೆ ಅರ್ಜಿ ಸಲ್ಲಿಸಿದ 20 ದಿನಗಳಲ್ಲಿ ಕಾರ್ಡ್‌ ಫ‌ಲಾನುಭವಿಗಳ ಮನೆ ಬಾಗಿಲಿಗೆ ಬರಲಿದೆ.

ಬಿಪಿಎಲ್‌ ಕಾರ್ಡ್‌ ಪಡೆಯಲು ಸರ್ಕಾರ 4 ನಿಬಂಧನೆಗಳನ್ನು ವಿಧಿಸಿದೆ. 1500 ಚದರ ಅಡಿ ಮನೆ, ಸರ್ಕಾರಿ ನೌಕರಿ, ಆದಾಯ ತೆರಿಗೆದಾರರು, 7.5 ಎಕರೆ ಒಣ ಭೂಮಿ ಅಥವಾ 3.5 ಎಕರೆ ನೀರಾವರಿ ಜಮೀನನ್ನು ಹೊಂದದೇ ಇರುವವರು ಮಾತ್ರ ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಾಗುತ್ತಾರೆ ಎಂದ ಅವರು, ರೇಷನ್‌ ಕಾರ್ಡಿಗೆ ಆಧಾರ್‌ ಸಂಖ್ಯೆ ಜೋಡಣೆ ಆಗುವುದರಿಂದ ಮತ್ತಷ್ಟು ಅನರ್ಹ ಕಾರ್ಡುಗಳು ರದ್ದಾಗಬಹುದು ಎಂದರು.

Advertisement

ತಾಲೂಕಿಗೆ ಬಿಡುಗಡೆಯಾದ 39 ಸಾವಿರ ಲೀಟರ್‌ ಸೀಮೆಎಣ್ಣೆ ವಾಪಸಾದ ಬಗ್ಗೆ ಉತ್ತರಿಸಿ, ಎಲ್ಲರೂ ಗ್ಯಾಸ್‌ ಬಳಸಬೇಕೆಂಬುದೇ ಸರ್ಕಾರದ ಆಶಯ. ಅದಕ್ಕಾಗಿ 3 ತಿಂಗಳ ಕಾಲ ಇಲ್ಲಿಗೆ ಸೀಮೆಎಣ್ಣೆ ಬಿಡುಗಡೆ ಮಾಡಿರಲಿಲ್ಲ. ಡಿಸೆಂಬರ್‌ 2016ರ ತಿಂಗಳ ಬಾಪು¤ ಮಾತ್ರ ಬಂದಿತ್ತು. ಆದರೆ ಯಾವ ಕಾರಣಕ್ಕೆ ವಿತರಕರು ಎಣ್ಣೆಯನ್ನು ಪಡೆದಿಲ್ಲವೆಂಬುದಕ್ಕೆ ವರದಿ ತರಿಸಿಕೊಂಡ ನಂತರ ಸರ್ಕಾರದೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಆಹಾರ ಪಡಿತರ ಕೂಪನ್‌ ವಿತರಿಸುವ 393 ಬಯೋ ಫ್ರಾಂಚೈಸಿಗಳಿದ್ದು, ನಕಲಿ ಕೂಪನ್‌ ವಿತರಿಸಿದ್ದ 24 ಶಾಖೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅವರು ಕಳಿಸಿದ ಲೆಕ್ಕ ಹಾಗೂ ಇಲಾಖೆಯ ಲೆಕ್ಕಗಳಿಗೆ ತಾಳೆ ಆಗದ ಕಾರಣ ಹಣ ಬಿಡುಗಡೆಗೆ ತಡವಾಯಿತು. ಸರ್ಕಾರದ ಹಣ ಎಲ್ಲಿಯೂ ಹೋಗಲ್ಲ, ಇಂದಲ್ಲ ನಾಳೆ ಬರುತ್ತದೆ. ಅದಕ್ಕಾಗಿ ಮುಷ್ಕರದ ಅವಶ್ಯಕತೆ ಇರಲಿಲ್ಲ. ಈಗ ಹಣ ಬಿಡುಗಡೆ ಆಗಿದೆ.
-ಕಾ.ರಾಮೇಶ್ವರಪ್ಪ, ಜಿಲ್ಲಾ ಆಹಾರ ಉಪ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next