Advertisement
ಸಾಲ ಮನ್ನಾ, ಬೆಳೆ ವಿಮೆ, ನಷ್ಟ ಪರಿಹಾರ ಇತ್ಯಾದಿ ಫಲಾನುಭವಿ ಆಧಾರಿತ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಕೇವಲ ಯೋಜನೆ ಗಳಿಗಾಗಷ್ಟೇ ಕಾರ್ಡ್ ಮಾಡಿಸಿಕೊಂಡಿರಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸು ತ್ತಾರೆ. ಅಥವಾ ಪಡಿತರ ಹಂಚಿಕೆಯಲ್ಲೂ ಸಮಸ್ಯೆ ಇರಬಹುದು ಎಂಬ ಮಾತುಗಳೂ ಕೇಳಿ ಬಂದಿವೆ.
ಪ್ರತಿ ತಿಂಗಳ ಪಡಿತರ ವಿತರಣೆ ನಿಗದಿತ ದಿನಾಂಕಗಳಲ್ಲಿ ಒಂದೆರಡು ದಿನ ತಡವಾದರೆ ಜನ ಸಹಿಸಿಕೊಳ್ಳುವುದಿಲ್ಲ. ಅಂಥದ್ದರಲ್ಲಿ ಕಳೆದ 3 ತಿಂಗಳಿಂದ 41 ಸಾವಿರ ಕಾರ್ಡ್‌ದಾರರು ಪಡಿತರ ಅಂಗಡಿಗಳತ್ತ ಸುಳಿದಿಲ್ಲವೇ? ಅಥವಾ ಅಷ್ಟೂ ಮಂದಿಗೆ ಪಡಿತರ ಹಂಚಿಕೆಯಾಗಿಲ್ಲವೇ? ಎಂಬುದು ಇಲಾಖೆಗೆ ಯಕ್ಷಪ್ರಶ್ನೆಯಾಗಿದೆ. ಜೂನ್‌ನಿಂದ ಪಡಿತರ ತೆಗೆದುಕೊಂಡಿಲ್ಲ
ಸದ್ಯ ರಾಜ್ಯದಲ್ಲಿ ಎಎವೈ, ಬಿಪಿಎಲ್ ಸೇರಿ 2.11 ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ. ಇದರಲ್ಲಿ 2019ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಕಾರ್ಡ್‌ದಾರರು ಪಡಿತರ ತೆಗೆದುಕೊಂಡಿಲ್ಲ. ಈ ಕಾರ್ಡ್‌ಗಳನ್ನು ನಕಲಿ ಎಂದು ತೀರ್ಮಾನಿಸಲು ಆಗುವುದಿಲ್ಲ. ಏಕೆಂದರೆ ಕಾರ್ಡ್ ಇದೆ. ಅದರಲ್ಲಿ ನಮೂದಿಸಿರುವ ವ್ಯಕ್ತಿಗಳು ಮತ್ತು ವಿಳಾಸ ಎಲ್ಲವೂ ಸರಿ ಇದೆ. ಆದರೆ ಪಡಿತರ ಮಾತ್ರ ಅವರಿಗೆ ಹಂಚಿಕೆಯಾಗಿಲ್ಲ. ಕಳೆದ 6 ತಿಂಗಳ ಹಿಂದೆ ಈ ರೀತಿ ಪಡಿತರ ತೆಗೆದುಕೊಳ್ಳದ ಕಾರ್ಡ್‌ಗಳ ಸಂಖ್ಯೆ 17 ಸಾವಿರ ಇತ್ತು. ಆದರೆ ಈಗ ಏಕಾಏಕಿ 41 ಸಾವಿರಕ್ಕೆ ಏರಿದೆ.
Related Articles
ಪ್ರತಿ ತಿಂಗಳು ಕಾರ್ಡ್‌ದಾರರು ಪಡಿತರ ಪಡೆದುಕೊಳ್ಳಬೇಕು. ಸತತ 3 ತಿಂಗಳು ಪಡಿತರ ಪಡೆದುಕೊಳ್ಳದೇ ಇದ್ದರೆ ನಿಯಮದ ಪ್ರಕಾರ ಈ ಕಾರ್ಡ್‌ಗೆ ಪಡಿತರದ ಆವಶ್ಯಕತೆ ಇಲ್ಲ ಎಂದು ಷರಾ ಬರೆದು ಕಾರ್ಡ್‌ನ್ನು ಅಮಾನತ್ತಿನಲ್ಲಿಡಲಾಗುತ್ತದೆ. ಅಂತಹ ಕಾರ್ಡ್‌ದಾರರಿಗೆ ಮತ್ತೆ ಪಡಿತರ ಬೇಕಾದರೆ ತಾಲೂಕು ಕಚೇರಿಗೆ ಭೇಟಿ ಕೊಟ್ಟು 3 ತಿಂಗಳು ಪಡಿತರ ಏಕೆ ಪಡೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿ ಮತ್ತೂಮ್ಮೆ ಬಯೋಮೆಟ್ರಿಕ್ ಕೊಟ್ಟು ಕಾರ್ಡ್‌ನ್ನು ಕ್ರಿಯಾಶೀಲ(ಆ್ಯಕ್ಟಿವ್) ವಾಗಿಸಿಕೊಳ್ಳಬೇಕು. ಇದು ಇಲಾಖೆ, ಪಡಿತರ ಅಂಗಡಿ ಹಾಗೂ ಕಾರ್ಡ್‌ದಾರರು ಎಲ್ಲರಿಗೂ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಾರೆ.
Advertisement
2 ತಿಂಗಳಲ್ಲಿ 6 ಲಕ್ಷ ಅರ್ಜಿಗಳಿಗೆ ಮುಕ್ತಿಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ ಸಲ್ಲಿಸಲಾದ ಅರ್ಜಿಗಳ ಪೈಕಿ ಸದ್ಯ 6 ಲಕ್ಷ ಅರ್ಜಿಗಳ ಬಾಕಿ ಉಳಿದಿವೆ. ಮೊದಲು ಬಂದವರಿಗೆ ಆದ್ಯತೆ ಎಂಬ ತತ್ವದಡಿ ಅರ್ಜಿಗಳ ವಿಲೇವಾರಿಗೆ ಫಸ್ಟ್ ಕಮ್ ಫಸ್ಟ್ ಸರ್ವ್ (ಎಫ್ಐಎಫ್ಒ) ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದರಡಿ ಒಂದು ಅರ್ಜಿ ಪೂರ್ಣಪ್ರಮಾಣದಲ್ಲಿ ವಿಲೇವಾರಿ ಆಗದ ಹೊರತು ಅದರ ಅನಂತರದ ಅರ್ಜಿ ವಿಲೇವಾರಿ ಅಸಾಧ್ಯ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಹೀಗಾಗಿ ಈಗ ಎಫ್ಐಎಫ್ಒ ವ್ಯವಸ್ಥೆ ತೆರವುಗೊಳಿಸಲಾಗಿದ್ದು, 2 ತಿಂಗಳಲ್ಲಿ ಎಲ್ಲ 6 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಈ ಸಂಬಂಧ ಆಹಾರ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕಳಿಸಲಾಗಿದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿ’ಗೆ ಮಾಹಿತಿ ನೀಡಿದರು.