Advertisement

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

11:52 PM Nov 18, 2024 | Team Udayavani |

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ವಿವಾದ ಆಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರಕಾರವು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತನೆ ಆಗುತ್ತಿರುವ ಬಿಪಿಎಲ್‌ ಕಾರ್ಡ್‌ಗಳ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಚಿಂತನೆ ನಡೆಸಿದೆ. ಬಡವರಿಗೆ ಬಿಪಿಎಲ್‌ ತಪ್ಪದಂತೆ ನೋಡಿಕೊಳ್ಳಿ ಎಂದು ಆಹಾರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ.

Advertisement

ಅನ್ನಭಾಗ್ಯ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಲಾಗದೆ ಸರಕಾರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದೆ ಎಂದು ವಿಪಕ್ಷಗಳು ಆರೋಪಗಳ ಸುರಿಮಳೆಗೈಯುತ್ತಿದ್ದು, ಇದರಿಂದ ಹೊರಬರಲು ಸರಕಾರ ತಂತ್ರ ಹೂಡಿದೆ.

ಸೋಮವಾರ ತಮ್ಮ ಸರಕಾರಿ ನಿವಾಸ “ಕಾವೇರಿ’ಯಲ್ಲಿ ಹಿರಿಯ ಸಚಿವರ ಸಭೆ ಕರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದಾರೆ. ಈ ವಿಚಾರವು ವಿವಾದದ ಸ್ವರೂಪ ಪಡೆದುಕೊಂಡಿರುವುದೇಕೆ ಎಂದು ಸಚಿವ ಮುನಿಯಪ್ಪ ಅವರ ಬಳಿ ಮಾಹಿತಿ ಪಡೆದ ಸಿಎಂ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಪಕ್ಷಗಳು ಇದನ್ನು ದೊಡ್ಡ ಅಸ್ತ್ರವಾಗಿ ಬಳಕೆ ಮಾಡಬಹುದು. ಅದಕ್ಕೆ ಮುನ್ನ ಬಗೆಹರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಸಿಎಂಗೆ ವಿವರಣೆ ನೀಡಿದ ಸಚಿವ ಮುನಿಯಪ್ಪ, ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತ ಕಾಯ್ದೆಯಡಿ 43.38 ಲಕ್ಷ ಫ‌ಲಾನುಭವಿಗಳನ್ನು ಒಳಗೊಂಡ 10.72 ಲಕ್ಷದಷ್ಟು ಅಂತ್ಯೋದಯ ಅನ್ನ ಕಾರ್ಡ್‌ಗಳಿದ್ದು, 3.58 ಕೋಟಿ ಫ‌ಲಾನುಭವಿಗಳನ್ನು ಒಳಗೊಂಡ 1.02 ಕೋಟಿ ಆದ್ಯತ ಕುಟುಂಬ (ಬಿಪಿಎಲ್‌) ಕಾರ್ಡ್‌ಗಳಿವೆ. ಇದಲ್ಲದೆ 32.52 ಲಕ್ಷ ಫ‌ಲಾನುಭವಿಗಳನ್ನು ಒಳಗೊಂಡ 12 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರಾಜ್ಯ ಸರಕಾರದಿಂದ ಮಂಜೂರು ಮಾಡಲಾಗಿದೆ ಎಂದರು.

ಕೇಂದ್ರದ ಮಾನದಂಡ ಅನುಸರಿಸಿಯೇ ಕ್ರಮ
ಕೇರಳ, ಆಂಧ್ರಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಒಟ್ಟು ಜನಸಂಖ್ಯೆಯ ಶೇ. 50ಕ್ಕಿಂತ ಕಡಿಮೆ ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. ಆದರೆ ನಮ್ಮಲ್ಲಿ ಶೇ. 50ಕ್ಕಿಂತ ಹೆಚ್ಚಿದ್ದಾರೆ. ಹೀಗಾಗಿ ಕೇಂದ್ರ ಸರಕಾರದ ಮಾನದಂಡಗಳ ಅನ್ವಯ ಬಡತನ ರೇಖೆಯಿಂದ ಮೇಲೆ ಬಂದವರನ್ನು ಬಿಪಿಎಲ್‌ ಕಾರ್ಡ್‌ನಿಂದ ಎಪಿಎಲ್‌ ಕಾರ್ಡ್‌ಗೆ ಪರಿವರ್ತಿಸಲಾಗಿದೆ. ಪಾನ್‌ ಕಾರ್ಡ್‌, ಆದಾಯ ತೆರಿಗೆ ಪಾವತಿ ಇತ್ಯಾದಿಗಳನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ.

Advertisement

ಸೆಪ್ಟಂಬರ್‌ ತಿಂಗಳಿನಲ್ಲಿ 25,13,798ರಷ್ಟಿದ್ದ ಎಪಿಎಲ್‌ ಕಾರ್ಡ್‌ಗಳ ಸಂಖ್ಯೆಯು ನವೆಂಬರ್‌ ವೇಳೆಗೆ 25,62,566ರಷ್ಟಾಗಿದೆ. ಅಂದರೆ ಎರಡು ತಿಂಗಳಲ್ಲಿ 48,768 ಎಪಿಎಲ್‌ ಕಾರ್ಡ್‌ಗಳು ಹೆಚ್ಚಾಗಿದ್ದು, ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಎಪಿಎಲ್‌ ಕಾರ್ಡ್‌ದಾರರನ್ನಾಗಿ ಪರಿವರ್ತಿಸಿದ್ದರಿಂದ ಈ ಹೆಚ್ಚಳವಾಗಿದೆ ಎಂದು ವಿವರಣೆ ನೀಡಿದ್ದಾರೆ.

ಎಚ್ಚರಿಕೆ; ಮತ್ತೊಂದು ಅವಕಾಶ ಕೊಡಿ
ಎಲ್ಲವನ್ನೂ ಕೇಳಿಸಿಕೊಂಡ ಸಿಎಂ, ಕೇಂದ್ರ ಸರಕಾರದ ಮಾನದಂಡ ಅನುಸರಿಸಿ ಕಾರ್ಡ್‌ಗಳ ಪರಿಷ್ಕರಣೆ ಮಾಡಿ. ಆದರೆ ಪ್ರಸ್ತುತ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಆಗಿರುವವರಲ್ಲಿ ಅರ್ಹ ಫ‌ಲಾನುಭವಿಗಳಿಗೆ ಇನ್ನೊಂದು ಅವಕಾಶ ಕೊಡಿ. ಬಡವರಿಗೆ ಬಿಪಿಎಲ್‌ ತಪ್ಪದಂತೆ ನೋಡಿಕೊಳ್ಳಿ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ಕೊಡಿ. ಇಲ್ಲದಿದ್ದರೆ ವಿಪಕ್ಷಗಳು ಇದನ್ನು ಮತ್ತೊಂದು ವಿವಾದ ಮಾಡುವ ಸಾಧ್ಯತೆ ಇದೆ.

ಅನ್ನಭಾಗ್ಯ ಯೋಜನೆಯಡಿ ನೇರ ನಗದು ಪಾವತಿ ಮಾಡಿದರೂ ಆರೋಪ ಹೊತ್ತಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಇದಕ್ಕೂ ಸ್ಪಷ್ಟನೆ ನೀಡಿರುವ ಸಚಿವ ಮುನಿಯಪ್ಪ, ಅನ್ನಭಾಗ್ಯ ಯೋಜನೆಗೆ ಬಜೆಟ್‌ನಲ್ಲಿ ನೀವೇ 8 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೀರಿ. ಮಾಸಿಕ 600 ಕೋಟಿ ರೂ. ಪಾವತಿಯಾಗುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next