ಗಂಗಾವತಿ: ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಮೂರು ತಿಂಗಳಿಂದ ಪಡಿತರ ಕಾರ್ಡುದಾರರಿಗೆ ಮೊಬೈಲ್ ಒಟಿಪಿ ಮೂಲಕ ಆಹಾರಧಾನ್ಯ ವಿತರಣೆಗೆ ಆಹಾರ ಇಲಾಖೆ ಕ್ರಮ ಕೈಗೊಂಡಿತ್ತು. ಆದರೀಗ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ ನೆಪವೊಡ್ಡಿ ಬಯೋಮೆಟ್ರಿಕ್ ಪಡೆದು ಜೂನ್ ತಿಂಗಳ ಪಡಿತರ ವಿತರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋವಿಡ್-19 ರೋಗ ಉಲ್ಬಣಗೊಳ್ಳುತ್ತಿರುವ ಮಧ್ಯೆ ಆಹಾರ ಇಲಾಖೆ ಅಧಿಕಾರಿಗಳ ಈ ಕ್ರಮದಿಂದ ಜನರು ಭಯಗೊಳ್ಳುವಂತಾಗಿದೆ. ಒಟಿಪಿ ಮೂಲಕ ಆಹಾರ ಧಾನ್ಯ ವಿತರಿಸಬೇಕು. ವಲಸೆ ಹೋಗಿದ್ದವರು ಮರಳಿ ಬಂದಿರುವ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಂಡು ಮೊಬೈಲ್ ನಂಬರ್‌ಗೆ ಒಟಿಪಿ ಬರುವಂತೆ ಮಾಡಿ ಪಡಿತರ ವಿತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ಬಯೋಮೆಟ್ರಿಕ್ ಒತ್ತುವ ಸಂದರ್ಭದಲ್ಲಿ ಪ್ರತಿಯೊಬ್ಬರು ಸ್ಯಾನಿಟೈಜರ್ ಹಚ್ಚಿಕೊಳ್ಳುತ್ತಿಲ್ಲ. ಕೊರೊನಾ ಸೋಂಕು ತಗುಲಿದ ವ್ಯಕ್ತಿಯೇನಾದರೂ ಬಯೋಮೆಟ್ರಿಕ್ ಕೊಟ್ಟರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಸರಕಾರ ಮೊದಲಿನಂತೆ ಒಟಿಪಿ ಮೂಲಕ ಪಡಿತರ ವಿತರಿಸಬೇಕು. ಬಯೋಮೆಟ್ರಿಕ್ ಮೂಲಕ ಪಡಿತರ ವಿತರಿಸುವಂತೆ ಆದೇಶ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೊವೀಡ್-19 ತೀವ್ರ ಹರಡುತ್ತಿರುವ ಈ ಸಂದರ್ಭದಲ್ಲಿ ಒಟಿಪಿ ಮೂಲಕ ಪಡಿತರ ವಿತರಿಸುವ ಪದ್ಧತಿ ಕೈ ಬಿಟ್ಟು ಬಯೋಮೆಟ್ರಿಕ್ ಮೂಲಕ ಪಡಿತರವಿತರಿಸಲು ಆದೇಶಿಸಿರುವುದು ಸರಿಯಲ್ಲ. ಹೀಗಾಗಿ ಪರಸ್ಪರ ಮುಟ್ಟುವಂತಾಗಿ ಕೋವಿಡ್ ಹರಡುವ ಸಾಧ್ಯತೆಯಿದೆ. ಒಟಿಪಿ ಮೂಲಕ ಪಡಿತರ ವಿತರಿಸಬೇಕು. ಸರ್ವರ್ ತಾಂತ್ರಿಕ ನೆಪವೊಡ್ಡಿ ಬಯೋಮೆಟ್ರಿಕ್ ಪುನಃ ಜಾರಿ ಮಾಡಿದರೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿದೆ. –
ಬಿಪಿಎಲ್ ಕಾರ್ಡ್‌ದಾರರು.
ಸರ್ವರ್ ತಾಂತ್ರಿಕ ತೊಂದರೆಯಿಂದ ಪಡಿತರ ವಿತರಣೆ ವಿಳಂಬವಾಗುವ ಕುರಿತು ಮಾಹಿತಿ ಇದೆ. ಬಯೋಮೆಟ್ರಿಕ್ ಪದ್ಧತಿ ಮೂಲಕ ಪಡಿತರ ವಿತರಣೆ ಆದೇಶ ಮಾಡಿಲ್ಲ. ಸರ್ವರ್ ತೊಂದರೆ ಸರಿಪಡಿಸಿ ಒಟಿಪಿ ಪದ್ಧತಿಯಂತೆ ಪಡಿತರ ವಿತರಿಸಬೇಕು. ಕೋವಿಡ್-19 ಹರಡದಂತೆ ಸಾಮಾಜಿಕ ಅಂತರ ಕಾಪಾಡಿ ಒಟಿಪಿ ಪಡೆದು ಪಡಿತರ ವಿತರಿಸಲು ಕೂಡಲೇ ಆದೇಶ ಹೊರಡಿಸಲಾಗಿದೆ.-
ನಾರಾಯಣ ರೆಡ್ಡಿ, ಉಪ ನಿರ್ದೇಶಕರು, ಜಿಲ್ಲಾ ಆಹಾರ ಇಲಾಖೆ