ಮೈಸೂರು: ರಥಸಪ್ತಮಿ ಪ್ರಯುಕ್ತ ಅರಮನೆ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಶನಿವಾರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಅರಮನೆ ಆವರಣದ ಶ್ರೀಭುವನೇಶ್ವರಿ, ಶ್ರೀತ್ರಿನೇಶ್ವರ ಸ್ವಾಮಿ, ಶ್ರೀಲಕ್ಷ್ಮೀರಮಣಸ್ವಾಮಿ, ಶ್ರೀಮಹಾಲಕ್ಷ್ಮೀದೇವಿ, ಶ್ರೀಪ್ರಸನ್ನ ಕೃಷ್ಣ, ಶ್ರೀವೇದ ವರಹಾಸ್ವಾಮಿ, ಶ್ರೀಖೀಲ್ಲೆ ವೆಂಕಟರಮಣಸ್ವಾಮಿ, ಗಾಯತ್ರಿ ದೇವಿಯವರ ಉತ್ಸವಮೂರ್ತಿಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಪ್ರಪಂಚದಲ್ಲಿ ಸಕಲ ಜೀವಿಗಳ ಚಟುವಟಿಕೆಗೆ ಸೂರ್ಯದೇವನೇ ಪೂರಕ, ಸೂರ್ಯದೇವನಿಲ್ಲದೆ ಪ್ರಪಂಚದಲ್ಲಿ ಜೀವಿಗಳು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಹೀಗಾಗಿ ಮಾಘಮಾಸದ ಶುಕ್ಲಪಕ್ಷದ ಸಪ್ತಮಿಯಂದು ರಥಸಪ್ತಮಿಯನ್ನಾಗಿ ಆಚರಿಸುತ್ತಾಬರಲಾಗಿದೆ. ಸೂರ್ಯದೇವನಿಗೆ ಅಗ್ರಪೂಜೆ ಸಲ್ಲಿಸುವುದೇ ಈ ದಿನ ವಿಶೇಷ ಆಚರಣೆ ಎಂದು ಅರಮನೆ ದೇವಾಲಯಗಳ ಅರ್ಚಕರು ತಿಳಿಸಿದರು.
ರಾಜ-ಮಹಾರಾಜರು ತಮ್ಮ ಆಳ್ವಿಕೆಯ ಕಾಲದಲ್ಲಿ ರಥಸಪ್ತಮಿಯಂದು ಅರಮನೆ ಆವರಣದಲ್ಲಿರುವ ಅಷ್ಟ ದೇವಾಲಯಗಳ ಉತ್ಸವಮೂರ್ತಿಗಳನ್ನು ಅರಮನೆ ಆವರಣದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುತ್ತಿದ್ದರು.
ಆ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಅರಮನೆ ವ್ಯವಸ್ಥಾಪಕರು ತಿಳಿಸಿದರು. ಬೆಳಗ್ಗೆಯೇ ಅರಮನೆ ದೇವಾಲಯಗಳಿಗೆ ಭೇಟಿ ನೀಡಿದ ನಗರದ ಜನತೆ ಉತ್ಸವ ಮೂರ್ತಿಗಳ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು.
ಸಾಮೂಹಿಕ ಸೂರ್ಯನಮಸ್ಕಾರ: ರಥಸಪ್ತಮಿ ಹಾಗೂ ಮೈಸೂರು ಯೋಗ ಒಕ್ಕೂಟದ 19ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಆಯೋಜಿಸಲಾಗಿತ್ತು.
ಮುಂಜಾನೆ 5.30ರಿಂದಲೇ ನೂರಾರು ಸಂಖ್ಯೆಯಲ್ಲಿ ಸೇರಿದ ಯೋಗಪಟುಗಳು 108 ಸೂರ್ಯನಮಸ್ಕಾರ ಮಾಡಿದರು.ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂಸ್ವಾಮೀಜಿ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಎಂಎಸ್.ಚಂದ್ರಶೇಖರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಯೋಗ ಒಕ್ಕೂಟದ ಶ್ರೀಹರಿ, ಎಂ.ಕೆ.ಪೋತರಾಜ್ ಇದ್ದರು.