Advertisement
ವೈವಸ್ವತ ಮನ್ವಂತರದ ಆರಂಭದ ದಿನ ಸೂರ್ಯದೇವರು ಉತ್ತರಾಯಣನಾಗಿ ಸಪ್ತ ಕುದುರೆಗಳನ್ನು ಹೊಂದಿದ ಬಹಳ ಅದ್ಭುತವಾದ ರಥವ ನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣಿಸುತ್ತಾರೆ. ಈ ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ಸಮುದ್ರ ಸ್ನಾನ- ಗಂಗಾ-ಯಮುನೆಯ ಸ್ನಾನ- ದೇವಾಲಯಗಳ ಪವಿತ್ರ ಪುಷ್ಕರಣಿಯಲ್ಲಿ ಸ್ನಾನ ಮಾಡುವುದರಿಂದ “ಅತಿಶಯ’ ಪುಣ್ಯ ಪ್ರಾಪ್ತವಿದೆ. ಈ ಸ್ನಾನದ ವಿಶೇಷತೆ ಏನೆಂದರೆ ಶ್ರೀ ಸೂರ್ಯದೇವರಿಗೆ ಅತಿಪ್ರಿಯವಾದ ಎಕ್ಕೆ ಗಿಡದಿಂದ ಏಳು ಎಕ್ಕೆ ಎಲೆಗಳನ್ನು ತೆಗೆದುಕೊಂಡು ಸ್ನಾನ ಮಾಡುವಾಗ ಒಂದೊಂದೇ ಎಲೆಯನ್ನು ತಲೆಯ ಮೇಲಿಟ್ಟು ಕೊಂಡು ಏಳು ಭಾರಿ ಮುಳುಗೇಳಿ ಶ್ರೀ ಸೂರ್ಯ ದೇವರ ಸ್ತೋತ್ರ ಪಠಿಸುತ್ತಾ ಸ್ನಾನ ಮಾಡಬೇಕು. ಈ ಸ್ನಾನ ಮಾಡುವುದರಿಂದ ಮಾನವನ ಏಳೇಳು ಜನುಮದ ಪಾಪಗಳು ನಾಶವಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ದೇಹದಲ್ಲಿ ವಿಶೇಷ ಕಾಂತಿ-ಚೈತನ್ಯ ಉಂಟಾಗಲಿದೆ ಎಂಬ ನಂಬಿಕೆ ಇದೆ. ಸ್ವತಃ ಭಗವಾನ್ ಶ್ರೀ ಕೃಷ್ಣ ಪಾಂಡು ಪುತ್ರ ಧರ್ಮರಾಜನಿಗೆ ಹೇಳಿ ದಂತಹ ಪೌರಾಣಿಕ ಮಾಹಿತಿ. ಯಶೋ ವರ್ಮನೆಂಬ ಮಹಾರಾಜ ಧರ್ಮ ನ್ಯಾಯ ನೀತಿಯಿಂದ ರಾಜ್ಯಭಾರ ನಡೆಸುತ್ತಿದ್ದ. ಆತನಿಗೆ ಒಬ್ಬ ಪುತ್ರನ ಜನನವಾಗುತ್ತದೆ. ಆದರೆ ಆ ಮಗು ರೋಗಿಷ್ಟನಾಗಿ ಜನಿಸುತ್ತದೆ. ರಾಜ ಚಿಂತಿತನಾಗುತ್ತಾನೆ. ಒಮ್ಮೆ ರಾಜ ತನ್ನ ಪ್ರಜೆಗಳ ಯೋಗ ಕ್ಷೇಮ ವಿಚಾರಿಸುತ್ತಾ ವಾಯುವಿಹಾರಕ್ಕೆ ತೆರಳುತ್ತಾನೆ. ಆಗ ಆತನಿಗೆ “ಅಶರೀರವಾಣಿ’ಯೊಂದು ಹೀಗೆ ನುಡಿಯುತ್ತದೆ. ಎಲೈ ರಾಜನೇ ಚಿಂತಿಸದಿರು, ನಿನ್ನ ಪೂರ್ವಜರು ಮಾಡಿದ ತಪ್ಪಿನಿಂದ ಹೀಗೆ ಪುತ್ರನ ಜನನವಾಗಿದೆ. ನೀನು ಧರ್ಮನಿಷ್ಠ ಪ್ರಾಮಾಣಿಕನಾದ ದೊರೆ.ನೀನು ಇದೇ ಬರಲಿರುವ ರಥಸಪ್ತಮಿ ಯಂದು ನಿನ್ನ ಪುತ್ರನೊಂದಿಗೆ ಪವಿತ್ರವಾದ ಸರೋವರದಲ್ಲಿ ಸೂರ್ಯದೇವರನ್ನು ಮನಸಾರೆ ಸ್ಮರಿಸಿ ಎಕ್ಕೆ ಗಿಡದಿಂದ ಏಳು ಎಕ್ಕೆ ಎಲೆಗಳನ್ನು ಕೊಯಿದು ನಿನ್ನ ಪುತ್ರನ ತಲೆಯ ಮೇಲೆ ಇರಿಸಿ ಏಳು ಬಾರಿ ನೀನು ಕೂಡ ಅವನೊಂದಿಗೆ ಸ್ನಾನ ಮಾಡು. ಈ ರೋಗಗಳು ಪರಿಹಾರವಾಗಲಿದೆ ಎಂಬ ನುಡಿ ಕೇಳಿ ಬರುತ್ತದೆ. ಅದರಂತೆ ರಥಸಪ್ತಮಿಯಂದು ಸ್ನಾನ ಮಾಡಿದ ತತ್‌ಕ್ಷಣ ಮಗು ರೋಗ ಮುಕ್ತವಾಗಿ ವಿಶೇಷ ಕಾಂತಿ ಬಂದು ಆರೋಗ್ಯವಂತನಾಗಿ ದೇಹದಲ್ಲಿ ಹೊಳಪು ಮೂಡುತ್ತದೆ.ಅನಂತರ ಆ ಮಗು ತಂದೆಗೆ ತಕ್ಕ ಮಗನಾಗಿ ಬಾಳಿ ಬದುಕಿ ಯುವರಾಜನಾಗಿ ವಿಶೇಷ ಸಾಧನೆ ಮಾಡುತ್ತಾನೆ. ಇಂತಹ ಶಕ್ತಿ ಈ ರಥಸಪ್ತಮಿಯಲ್ಲಿದೆ ಎಂಬ ವಿಷಯವನ್ನು ಭಗವಂತ ತಿಳಿಸಿದ್ದು. ಅದರಂತೆ ಪಾಂಡವರು ವನವಾಸ ಹಾಗೂ ಅಜ್ಞಾತ ವಾಸ ಕಾಲದಲ್ಲಿ ತಮ್ಮ ಅತಿಯಾದ ಕಷ್ಟಕಾಲದಲ್ಲಿಯೂ ತಪ್ಪದೆ ಭಕ್ತಿ ಶ್ರದ್ಧೆಯಿಂದ ರಥಸಪ್ತಮಿಯ ಸ್ನಾನ ಮಾಡಿ ಸೂರ್ಯದೇವರ ವಿಶೇಷ ಆರಾಧನೆ ಮಾಡಿ ಭಗವಾನ್ ಸೂರ್ಯದೇವರಿಂದ ವಿಶಿಷ್ಟ ವಾದ “ಅಕ್ಷಯ ಪಾತ್ರೆ’ ಪಡೆದರು ಎಂದು ಮಹಾಭಾರತದಿಂದ ತಿಳಿದು ಬರುತ್ತದೆ.
– ವೈ. ಎನ್. ವೆಂಕಟೇಶಮೂರ್ತಿ ಭಟ್ಟ
ಪ್ರಧಾನ ಅರ್ಚಕರು,
ಶ್ರೀ ಮುಖ್ಯಪ್ರಾಣ ದೇವಸ್ಥಾನ ದೊಡ್ಮನೆಬೆಟ್ಟು ಕೋಟೇಶ್ವರ