ಕಲಬುರಗಿ: ತಮ್ಮ ಊರಿನ ಪಕ್ಕದ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಮೂರು ಕಿ.ಮೀ ದೂರದಲ್ಲಿ ಸೀಲ್ ಡೌನ್ ಮಾಡಲಾಗಿದೆ. ಸೋಂಕು ಹರಡುವ ಸಾಧ್ಯತೆಯ ಭೀತಿ ಕಡಿಮೆಯಾಗಿಲ್ಲ. ಆದರೂ ಜನರಿಗೆ ಜಾತ್ರೆ ಮಾಡಬೇಕು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಥೋತ್ಸವ ಮಾಡಬೇಕು! ಏನಾಗಿದೆ ಈ ಜನರಿಗೆ..?
ಹೌದು. ಕೋವಿಡ್-19 ಮಹಾಮಾರಿ ಸೋಂಕು ವಿಶ್ವವನ್ನೇ ನಡುಗಿಸಿದೆ. ಲಕ್ಷಾಂತರ ಜನರು ಸೋಂಕಿನ ಕಾರಣದಿಂದ ತಮ್ಮ ಪ್ರಾಣ ಚೆಲ್ಲಿದ್ದಾರೆ. ಸೋಂಕು ನಿಯಂತ್ರಿಸಲು ಸರಕಾರಗಳು ಎಲ್ಲಾ ಪ್ರಯತ್ನ ಮಾಡುತ್ತಿದ್ದರೂ ಈ ಜನರು ಯಾವುದರ ಅರಿವು ಇಲ್ಲದಂತೆ ರಥೋತ್ಸವದಲ್ಲಿ ಸೇರಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸಮೀಪದ ರಾವೂರ ಎಂಬಲ್ಲಿ ಲಾಕ್ ಡೌನ್ 144 ಕಲಂ ನಿಷೇಧಾಜ್ಷೆ ಉಲ್ಲಂಘಿಸಿ ಸಿದ್ಧಲಿಂಗೇಶ್ವರ ರಥೋತ್ಸವ ನೆರವೇರಿಸಲಾಗಿದೆ.
ಇಂದು ನಸುಕಿನಲ್ಲಿನೂರಾರು ಭಕ್ತರು ಗ್ರಾಮಸ್ಥರು ಸೇರಿ ಸಿದ್ಧಲಿಂಗೇಶ್ವರ ರಥೋತ್ಸವ ನಡೆಸಿದರು. ತಮ್ಮ ಪಕ್ಕದ ಊರಿನ ಬಾಲಕಿಗೆ ಸೋಂಕು ತಾಗಿದ್ದರೂ ಯಾವುದನ್ನೂ ಲೆಕ್ಕಿಸದೇ ಇಲ್ಲಿ ರಥೋತ್ಸವ ಮಾಡಲಾಗಿದೆ.
ಈ ಹಿಂದೆ ಲಾಕ್ ಡೌನ್ ಹಿನ್ಮಲೆಯಲ್ಲಿ ರಥೋತ್ಸವ ಮಾಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದರು. ಆದರೆ ಇಂದು ಮುಂಜಾನೆ ಒಟ್ಟು ಸೇರಿದ ಕೆಲ ಗ್ರಾಮಸ್ಥರು ರಥೋತ್ಸವ ನಡೆಸಿದ್ದಾರೆ.
ದೇವಸ್ಥಾನ ಸಮಿತಿ ವಿರುದ್ದ ದೂರು ದಾಖಲು: 144 ಸೆಕ್ಷನ್ ಉಲ್ಲಂಘಿಸಿ ಜಾತ್ರೆ ಆಚರಣೆ ಹಿನ್ನಲೆ ದೇವಸ್ಥಾನದ ಸಮಿತಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಇತರೆ 40 ಕ್ಕೂ ಹೆಚ್ಚು ಜನರ ವಿರುದ್ದ ವಾಡಿ ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದಾರೆ.