Advertisement

ರಥೋತ್ಸವ ಸಂಭ್ರಮ

02:39 PM Mar 10, 2020 | Suhan S |

ಕುರುಗೋಡು: ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ಜಾತ್ರ ಮಹಾರಥೋತ್ಸವ ವಿಜೃಂಭಣೆಯಿಂದ ಸೋಮವಾರ ಸಂಜೆ ನಡೆಯಿತು.

Advertisement

ರಥೋತ್ಸವದ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ದೊಡ್ಡಬಸವೇಶ್ವರ ದೇವರಿಗೆ ವಿಶೇಷ ಅಭಿಷೇಕ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮದಿಂದ ಧೂಳುಗಾಯಿ, ಕಳಸ ಮತ್ತು ಪೂರ್ಣಕುಂಭದ ಮೆರವಣಿಗೆ ನಡೆಯಿತು.

ನಂತರ ಹೂವು ಮತ್ತು ತರವಾರಿ ವಸ್ತ್ರಗಳಿಂದ ಅಲಂಕೃತಗೊಂಡ ದೊಡ್ಡಬಸವೇಸ್ವರ ಗೂಳಿ ಮೆರವಣಿಗೆ ಸಕಲ ವಾಧ್ಯ ಹಾಗೂ ಮುತ್ತೆçದೆಯರ ಕಳಸದೊಂದಿಗೆ ನೀಲಮ್ಮ ಮಠಕ್ಕೆ ತೆರಳಿ ವಿಶೇಷ ಪೂಜೆ ನಡೆಸಿ ಮಠದ ಸ್ವಾಮಿಯನ್ನು ಮೆರವಣಿಗೆ ಮೂಲಕರಥಕ್ಕೆ ಕರೆ ತರಲಾಯಿತು.

ಪ್ರತಿವರ್ಷ 6 ಗಂಟೆಗೆ ಎಳೆಯುವ ರಥೋತ್ಸವವು, ಈ ವರ್ಷ ಸಂಜೆ 5:40ಕ್ಕೆ 60ಅಡಿ ಎತ್ತರದ ರಥೋತ್ಸವ ದೇವಸ್ಥಾನದ ಮುಂಭಾಗದಿಂದ ರಥಬೀದಿಯಲ್ಲಿ ಎದರು ಬಸವಣ್ಣ ದೇವಸ್ಥಾನ ತಲುಪಿ ನಂತರ ಸ್ವಸ್ಥಾನಕ್ಕೆ ಹಿಂತಿರುಗಿತು. ಈ ಬಾರಿ ರಥೋತ್ಸವಕ್ಕೆ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರ ಪಾಲ್ಗೊಂಡಿದ್ದರು. ಕುರುಗೋಡು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹೊರ ಜಿಲ್ಲೆ ಹಾಗೂ ರಾಜ್ಯದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ರಥೋತ್ಸವದ ನಿಮಿತ್ತ ನಾನಾ ಯುವಕರು ನೀರಿನ ಮಜ್ಜಿಗೆ ಅರವಟ್ಟಿಗೆ ತೆರೆದು ಬಿಸಿಲಲ್ಲಿ ಬೆಂದ ಜನರಿಗೆ ತಂಪು ನೀಡಿದರು. ರಥೋತ್ಸವದಲ್ಲಿ ಪಾಲ್ಗೊಂಡ ಜನರಿಗೆ ಇಲಾಖೆ ವತಿಯಿಂದ ರೈತ ಸಮುದಾಯ ಭವನದಲ್ಲಿ ಹಾಗೂ ಖಾಸಗಿ ಮತ್ತು ವಿವಿಧ ಧಾರ್ಮಿಕ ಸಂಘಗಳು ಪಟ್ಟಣದ ಕಂಪ್ಲಿ, ಗೆಣಿಕೆಹಾಳ್‌, ಮುಷ್ಟಗಟ್ಟೆ ರಸ್ತೆ, ರಾಘವಾಂಕ ಮಠದಲ್ಲಿ ಉಚಿತ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

Advertisement

ಬಿಗಿಭದ್ರತೆ: ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ವಿಶೇಷ ಬಂದೋಬಸ್ತ್ ಒದಗಿಸಿತ್ತು. ದೇವಸ್ಥಾನದ ಪ್ರಾಂಗಣದಲ್ಲಿ ತಾತ್ಕಾಲಿಕ ಮಹಿಳಾ ಪೊಲೀಸ್‌ ಠಾಣೆ ತೆರೆಯಲಾಗಿತ್ತು. ಅಲ್ಲದೆ ದೇವಸ್ಥನದ ಒಳಗೆ ಮತ್ತು ಸುತ್ತಮುತ್ತ 16ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ನಾನಾ ಗ್ರಾಮದಿಂದ ಬರುವ ವಾಹನ ನಿಲುಗಡೆಗೆ 5ರಸ್ತೆಗಳಲ್ಲಿ ವಿಶೇಷ ನಿಲ್ದಾಣ ನಿರ್ಮಿಸಲಾಗಿತ್ತು. ಭಕ್ತರ ಪ್ರಯಾಣಕ್ಕೆ ಸಾರಿಗೆ ಇಲಾಖೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದ ಪುರಸಭೆ ವತಿಯಿಂದ 6 ಟ್ಯಾಂಕರ್‌ ಮೂಲಕ ಕುಡಿವ ನೀರನ್ನು ವಿತರಿಸಲಾಯಿತು. ಅಲ್ಲದೆ ಪ್ರತಿ ವಾರ್ಡ್‌ನಲ್ಲೂ ಬೀದಿ ದೀಪ ಅಳವಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next