ಸಾಗರ ದ್ವೀಪ, ಪಶ್ಚಿಮ ಬಂಗಾಲ : ‘ದೇವರ ಹೆಸರಲ್ಲಿ ನಡೆಸಲಾಗುವ ರಥಯಾತ್ರೆಯನ್ನು ದೊಂಬಿ ಉದ್ದೇಶದಿಂದ ನಡೆಸಕೂಡದು’ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯ ಪ್ರಸ್ತಾವಿತ ರಥಯಾತ್ರೆಯ ಬಗ್ಗೆ ಖಡಕ್ ಮಾತನ್ನು ಆಡಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ರಥಯಾತ್ರೆ ನಡೆಸುವುದಕ್ಕೆ ಅನುಮತಿ ನೀಡಬೇಕೆಂದು ಕೋರಿ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು ಅರ್ಜಿಯ ತುರ್ತು ವಿಚಾರಣೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
”ಭಗವಾನ್ ಕೃಷ್ಣ, ಭಗವಾನ್ ಜಗನ್ನಾಥರ ರಥಯಾತ್ರೆಗಳಲ್ಲಿ ನಾವೂ ಭಾಗಿಯಾಗುತ್ತೇವೆ. ಆದರೆ ಈ ರಥಯಾತ್ರೆ ಜನಸಮಾನ್ಯರನ್ನು ಕೊಲ್ಲುವ ದಂಗಾ ಯಾತ್ರೆಯಾಗಿದೆ; ಇಂಥವಕ್ಕೆ ಅವಕಾಶ ನೀಡಬಾರದು” ಎಂದು ಮಮತಾ ಬ್ಯಾನರ್ಜಿ ಅವರಿಂದು ಇಲ್ಲಿ ಸಾರ್ವಜನಿಕ ವಿತರಣ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.
‘ನಾವು ಯಾರನ್ನೂ ಅವಮಾನಿಸುವುದಿಲ್ಲ; ನಾವು ಎಲ್ಲರನ್ನೂ ಎಲ್ಲ ಧರ್ಮದವರನ್ನೂ ಮತ್ತು ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ’ ಎಂದು ಮಮತಾ ಹೇಳಿದರು.
ಬಿಜೆಪಿಯು ಪಶ್ಚಿಮ ಬಂಗಾಲದಲ್ಲಿ ನಡೆಸಲು ಉದ್ದೇಶಿಸಿರುವ ರಾಜಕೀಯ ರಥಯಾತ್ರೆಯು ಮೂರು ಹಂತಗಳಲ್ಲಿ ನಡೆಯಲಿದ್ದು ಅದಕ್ಕೆ ಪ್ರಜಾಸತ್ತೆ ಉಳಿಸಿ ರಾಲಿ ಎಂದೂ ಹೆಸರಿಸಲಾಗಿದೆ.
ಈ ರಥಯಾತ್ರೆಯು ಪಶ್ಚಿಮ ಬಂಗಾಲದ ಎಲ್ಲ 42 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಪ್ರಸ್ತಾವಿತ ರಥಯಾತ್ರೆಗೆ ಹಸಿರು ನಿಶಾನೆ ತೋರಲಿದ್ದಾರೆ.