ಬೆಂಗಳೂರು: ದರ ಏರಿಕೆ ವಿರುದ್ಧ ಸಮರ ಸಾರಿರುವ ರಾಜ್ಯ ಬಿಜೆಪಿ, ಜೂ.29ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಸುವಿನ ಹಾಲು ಕರೆದು ಡಿಸಿಗೆ ಕೊಡುವ ಮೂಲಕ ವಿನೂತನ ಪ್ರತಿಭಟನೆಗೆ ಕರೆ ಕೊಟ್ಟಿದೆ.
ರೈತ ಮೋರ್ಚಾದಿಂದ ಈ ವಿಭಿನ್ನ ಪ್ರತಿಭಟನೆಗೆ ನಿರ್ಧರಿಸಿದ್ದು, 50 ಎಂ.ಎಲ್. ಹಾಲು ಹೆಚ್ಚಿಗೆ ಮಾಡಿ 2 ರೂಪಾಯಿ ಹೆಚ್ಚಿಸಿದ್ದೇವೆ ಎನ್ನುವ ಸರ್ಕಾರದ ವಾದಕ್ಕೆ ತಿರುಗೇಟು ನೀಡಲು ತಯಾರಿ ಮಾಡಿಕೊಂಡಿದೆ.
ಗುರುವಾರ ಪಕ್ಷದ ಕಚೇರಿಯಲ್ಲಿ ಈ ಕುರಿತು ವಿವರಣೆ ನೀಡಿದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಕರ್ನಾಟಕ ರಾಜ್ಯದಲ್ಲಿ ಬೆಲೆ ಹೆಚ್ಚಳದ ಪರ್ವ, ಅಭಿಯಾನವನ್ನು ಸರ್ಕಾರವೇ ನಡೆಸುತ್ತಿದೆ. ಈ ಸರ್ಕಾರ ಕಣ್ಣಿದ್ದೂ ಕುರುಡಾಗಿದೆ. ಕಿವಿ ಇದ್ದೂ ಕಿವುಡಾಗಿದೆ. ತಲೆ ಇದ್ದರೂ ಬುದ್ಧಿ ಭ್ರಮಣೆ ಆಗಿದೆ ಎಂದು ಆಕ್ಷೇಪಿಸಿದರು.
ವಿಧಾನಪರಿಷತ್ ಸದಸ್ಯ ಹನುಮಂತ್ ನಿರಾಣಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್, ಭಾರತಿ ಮಲ್ಲಿಕಾರ್ಜುನ್, ಬ್ಯಾಡರಂಗೇ ಗೌಡ ಇದ್ದರು.
ದೇಶಕ್ಕೆ ಅರ್ಥಶಾಸ್ತ್ರದ ಪಾಠ ಹೇಳುವ ಸಿಎಂಗೆ 50 ಎಂ.ಎಲ್. ಹಾಲನ್ನು ಜಾಸ್ತಿ ಕೊಡಿ ಎಂದು ಯಾರು ಅರ್ಜಿ ಕೊಟ್ಟಿದ್ದರು? ಮಳೆಗಾಲ ಬಂದಾಗ ಮೇವು ಹೆಚ್ಚಿ, ಹಾಲಿನ ಉತ್ಪಾದನೆ ಹೆಚ್ಚುವುದು ಸಹಜ. ಅದರ ವಿಲೇವಾರಿಗೆ ಪರ್ಯಾಯ ಮಾರ್ಗ ಅನುಸರಿಸಬೇಕಿತ್ತೇ ಹೊರತು, ಜನರ ಮೇಲೆ ಹಾಕುವುದಲ್ಲ. ಜನರಿಗೆ ಸಹಾಯ ಮಾಡುವ ಬುದ್ಧಿ ಇವರಿಗಿಲ್ಲ. ದುಡ್ಡು ಹೊಡೆಯುವ ಬುದ್ಧಿ ಇದೆ.
-ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ