ಹೊಸದಿಲ್ಲಿ : ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಐಡಿಯಾ ವೊಡಾಫೋನ್ ಅನಂತರ ರಿಲಯನ್ಸ್ ಜಿಯೋ ಕರೆ ದರವನ್ನು ಹೆಚ್ಚಿಸುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಜಿಯೋ, ಸರಕಾರ ಅನುಮತಿ ಸೂಚಿಸಿದರೆ ಮಾತ್ರ ದರ ಹೆಚ್ಚಿಸುವುದಾಗಿ ಹೇಳಿದೆ.
ವಿವಿಧ ಟೆಲಿಕಾಂ ಕಂಪೆನಿಗಳು ಡಿಸೆಂಬರ್ 1 ರಿಂದ ಕರೆ ದರಗಳನ್ನು ಹೆಚ್ಚಿಸಲಿದ್ದು, ಹೊಸ ಸೇವಾ ಸುಂಕ ಯೋಜನೆಗಳನ್ನು ಜಾರಿ ತರುವ ಮೂಲಕ ದರ ಸಮರದಿಂದಾಗಿ ಆಗಿರುವ ನಷ್ಟವನ್ನು ಸರಿದೂಗಿಸಲು ಚಿಂತಿಸಿದೆ. ಆದರೆ ದರಗಳ ವಿವರಗಳನ್ನು ಯಾವುದೇ ಕಂಪೆನಿ ನೀಡಿಲ್ಲ.
ಈ ಸುದ್ದಿಗಳ ಬೆನ್ನಲ್ಲೇ ಜಿಯೋ ಕೂಡ ದರ ಏರಿಸಲಿದೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಯೋ ಸರಕಾರ ಬಯಸಿದರೆ ಮಾತ್ರ ದರ ಹೆಚ್ಚಿಸಲಿದ್ದೇವೆ. ಟೆಲಿಕಾಂ ಸುಂಕಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಪ್ರಕ್ರಿಯೆಯನ್ನು ಟ್ರಾಯ್ ಪ್ರಾರಂಭಿಸಲಿದೆ ಎಂಬ ವಿಶ್ವಾಸವಿದೆ. ಇತರ ಅಪರೇಟರ್‌ಗಳಂತೆ, ನಾವು ಸರಕಾರದ ನಿಯಮಾವಳಿಗೆ ಬದ್ಧವಾಗಿರುತ್ತೇವೆ. ಭಾರತೀಯ ಗ್ರಾಹಕರಿಗೆ ಮತ್ತು ಉದ್ಯಮಕ್ಕೆ ತೊಂದರೆಯಾಗದ ರೀತಿಯಲ್ಲಿ ಬೆಲೆ ಹೆಚ್ಚಳ ಮಾಡುವ ಉದ್ದೇಶವಿದೆ ಎಂದು ತಿಳಿಸಿದೆ.
ಇಂಟರ್‌ನೆಟ್ ದರದಲ್ಲಿ ಹೆಚ್ಚಳವಿಲ್ಲ
ಇನ್ನು ಇಂಟರ್‌ನೆಟ್ ಬಳಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಆಗದ ರೀತಿಯಲ್ಲಿ ನೋಡಿಕೊಳ್ಳುವುದರೊಂದಿಗೆ, ಸುಂಕ ಹೆಚ್ಚಳ ನಿಯಮದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಡಿಜಿಟಲ್ ಇಂಡಿಯಾದ ಯೋಜನೆಯ ಹೂಡಿಕೆಗೆ ಅನುಕೂಲವಾಗುವಂತೆ ಮತ್ತು ಹೂಡಿಕೆಗಳನ್ನು ಉಳಿಸಿಕೊಳ್ಳುವತ್ತ ಕೂಡ ರಿಲಯನ್ಸ್ ಹೆಚ್ಚಿನ ಮಹತ್ವ ನೀಡಲಿದೆ ಎಂದು ತಿಳಿಸಿದೆ. ಹೀಗಾಗಿ ಇಂಟರ್‌ನೆಟ್ ಡಾಟಾ ದರದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ ಎಂದು ಹೇಳಲಾಗಿದೆ.
ಭಾರತೀಯ ಟೆಲಿಕಾಂ ಕಂಪೆನಿಗಳು ಸುಂಕವನ್ನು ಹೆಚ್ಚಿಸಲು ಸರಕಾರದಿಂದ ವಿಧಿಸಬೇಕಾದ ಎಜಿಆರ್‌ಅನ್ನು ಉಲ್ಲೇಖೀಸಿದ್ದು, ಈ ಪಟ್ಟಿಯಲ್ಲಿ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಸರಕಾರಕ್ಕೆ ಹೆಚ್ಚಿನ ಹಣವನ್ನು ಪಾವತಿಸಬೇಕಿದೆ.