ಮುಂಬಯಿ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (86) (Ratan Tata) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಅ.9ರಂದು) ತಡರಾತ್ರಿ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಉದ್ಯಮಿಯಾಗಿ ಮಾತ್ರ ಗುರುತಿಸಿಕೊಳ್ಳದೆ ಸಮಾಜಮುಖಿ ಕೆಲಸಗಳಿಂದಲೂ ಟಾಟಾ ಗುರುತಿಸಿಕೊಂಡಿದ್ದರು. ಶ್ರೀಮಂತ ಉದ್ಯಮಿ ಆಗಿದ್ದರೂ ತನ್ನ ಸರಳ ವ್ಯಕ್ತಿತ್ವದಿಂದಲೇ ಗೌರವಾನ್ವಿತ ಸ್ಥಾನಮಾನವನ್ನು ಹೊಂದಿದ್ದರು.
ಟಾಟಾ ಅವರು ಮುಟ್ಟದೆ ಇರುವ ಉದ್ಯಮ ಕ್ಷೇತ್ರಗಳಿಲ್ಲ. ವಿಮಾನ ಉದ್ಯಮ, ಆಟೋಮೋಟಿವ್, ಪವರ್, ಸ್ಟೀಲ್, ಹೋಟೆಲ್‌ಗಳು, ಐಟಿ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ರತನ್ ಟಾಟಾ ಯಶಸ್ಸಿನ ಉತ್ತುಂಗಕ್ಕೇರಿದ್ದರು.
ದೊಡ್ಡ ದೊಡ್ಡ ಉದ್ಯಮದಲ್ಲಿ ಸೋಲಿಲ್ಲದ ಸರದಾರನಾಗಿ ಬೆಳೆದ ಟಾಟಾ ಅವರು ಸಿನಿಮಾರಂಗದಲ್ಲಿ ಮಾತ್ರ ಸೋಲು ಕಂಡಿದ್ದರು.
ಹೌದು ರತನ್ ಟಾಟಾ ಸಿನಿಮಾವಲಯದಲ್ಲೂ ಬಂಡವಾಳ ಸುರಿದಿದ್ದರು. ಆದರೆ ಅಲ್ಲಿ ಅವರು ಯಶಸ್ಸು ಸಾಧಿಸಿಲ್ಲ.
ಆ ಸಿನಿಮಾಕ್ಕೆ ನಿರ್ಮಾಪಕರಾಗಿದ್ದ ಟಾಟಾ..: ರತನ್ ಅವರು ಬಾಲಿವುಡ್‌ನ ಒಂದು ಸಿನಿಮಾಕ್ಕೆ ಬಂಡವಾಳ ಹಾಕಿದ್ದರು. ಆದರೆ ಆ ಸಿನಿಮಾ ಹೀನಾಯವಾಗಿ ಸೋಲು ಕಂಡ ಬಳಿಕ ಮತ್ತೆಂದೂ ಅವರು ಸಿನಿಮಾರಂಗದತ್ತ ಮುಖ ಮಾಡಿಲ್ಲ.
2004ರಲ್ಲಿ ಬಂದಿದ್ದ ಅಮಿತಾಭ್ ಬಚ್ಚನ್, ಬಿಪಾಶಾ ಬಾಸು ಹಾಗೂ ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಏತ್ಬಾರ್’ ಎನ್ನುವ ಸಿನಿಮಾವನ್ನು ರತನ್ ಅವರು ಜಿತಿನ್ ಕುಮಾರ್ ಎಂಬುವವರೊಂದಿಗೆ ಸೇರಿ ನಿರ್ಮಾಣ ಮಾಡಿದ್ದರು.
ಸಿನಿಮಾ ಗಳಿಸಿದ್ದೆಷ್ಟು?:
1996ರಲ್ಲಿ ಹಾಲಿವುಡ್‌ನಲ್ಲಿ ಬಂದ ʼಫಿಯರ್ʼ ಎನ್ನುವ ಸಿನಿಮಾದಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ವಿಕ್ರಮ್ ಭಟ್ ಅವರು ನಿರ್ದೇಶನ ಮಾಡಿದ್ದರು.
ಈ ಸಿನಿಮಾ ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿತ್ತು. ಅಂದು ಸಿನಿಮಾದ ಬಜೆಟ್ 9.50 ಕೋಟಿ ರೂಪಾಯಿ ದಾಟಿತ್ತು. ಆದರೆ ರಿಲೀಸ್ ಆದ ಬಳಿಕ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. 8 ಕೋಟಿ ರೂಪಾಯಿಯನ್ನಷ್ಟೇ ಗಳಿಸಿತು.
ಬಂಡವಾಳ ಹಾಕಿದ ಮೊದಲ ಸಿನಿಮಾವೇ ಸೋಲು ಕಂಡ ಬಳಿಕ ರತನ್ ಟಾಟಾ ಮತ್ತೆಂದೂ ಸಿನಿಮಾ ಸಂಬಂಧಿತ ಕೆಲಸದಲ್ಲಿ ಕಾಣಿಸಿಕೊಂಡಿಲ್ಲ. ಬಹುಶಃ ಅಂದು ʼಏತ್ಬಾರ್ʼ ಸಿನಿಮಾ ಹಿಟ್ ಆಗಿದ್ದರೆ ಇಂದು ರತನ್ ಅವರು ಸಿನಿಮಾರಂಗದಲ್ಲೂ ಯಶಸ್ವಿ ನಿರ್ಮಾಣ ಸಂಸ್ಥೆಯನ್ನು ಹೊಂದಿರುತ್ತಿದ್ದರೇನೋ.