Advertisement

Ratan Tata; ಉದ್ಯಮ ರಂಗದ ಭೀಷ್ಮ, ಅಮೂಲ್ಯ ರತುನ: ಜಗದಗಲ ಕೀರ್ತಿ

02:57 PM Oct 10, 2024 | ವಿಷ್ಣುದಾಸ್ ಪಾಟೀಲ್ |

ಭವ್ಯ ಭಾರತದ ಇತಿಹಾಸದಲ್ಲಿ ಉದ್ದಿಮೆ ರಂಗದ ದಿಗ್ಗಜನಾಗಿ, ಸಿರಿವಂತಿಕೆಗೆ ಹೆಸರಾಗಿ ಆದರ್ಶಗಳ ಮೂಲಕ ತನ್ನದೇ ಆದ ವೈಶಿಷ್ಟ್ಯಪೂರ್ಣ ಮಾದರಿ ಬದುಕು ಕಂಡು ಲೋಕಕ್ಕೆ ಆದರ್ಶ ಪ್ರಾಯರಾಗಿದ್ದವರು ರತನ್ ಟಾಟಾ. ಮರೆಯಾದ ಮಹಾನ್ ಚೇತನದ ಸಾಧನೆಗಳ ಪಟ್ಟಿ ಬರೆಯಲು ಹೊರಟರೆ ಸಾವಿರಾರು ಸಾಲುಗಳಲ್ಲಿಯೂ ಮುಕ್ತಾಯಗೊಳಿಸುವುದು ಅಸಾಧ್ಯ.

Advertisement

ರತನ್ ಟಾಟಾ ವ್ಯಾಪಾರ ನಾಯಕನಾಗಿ ಜಗತ್ತಿನಲ್ಲಿ ಅಸ್ಥಿತ್ವ ಸ್ಥಾಪಿಸಿದವರು.ಸಹಾನುಭೂತಿ ಮತ್ತು ಅಸಾಧಾರಣ ವ್ಯಕ್ತಿತ್ವ ಅವರನ್ನು ಆರಾಧಕ ಸ್ಥಾನದಲ್ಲಿ ಸ್ಥಾಪಿಸಿತ್ತು. ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ಒದಗಿಸಿಕೊಟ್ಟು , ಬೆಳೆಸಿದರೆ ಹೀಗೆ ಇರಬೇಕು ಅನ್ನುವ ಮಾತಿಗೆ ಛಾಪೊತ್ತಿದವರು. ಕೊಡುಗೆಯು ಅಳತೆ ಮಾಡಲಾರದ ಮಟ್ಟವನ್ನೂ ಮೀರಿದ್ದು. ನಮ್ರತೆ, ದಯೆ ಮತ್ತು  ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಸರ್ವರೂ ಬಹುಪರಾಕ್ ಹೇಳಲೇ ಬೇಕು. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪ್ರಾಣಿ ಪ್ರೇಮ ಹೀಗೆ ಹಲವು ವಿಚಾರದಲ್ಲಿ ಅವರ ಕೊಡುಗೆ ಅನನ್ಯ.

ರತನ್ ನೇವಲ್ ಟಾಟಾ 1937,ಡಿಸೆಂಬರ್ 28 ರಂದು ಜನಿಸಿದರು. ರತನ್ ಟಾಟಾ ಅವರು ಆಗಿನ ಬ್ರಿಟಿಷ್ ಆಳ್ವಿಕೆಯ ಬಾಂಬೆ, ಈಗಿನ ಮುಂಬೈ ನಲ್ಲಿ ಪಾರ್ಸಿ ಜೊರಾಸ್ಟ್ರಿಯನ್ ಕುಟುಂಬದಲ್ಲಿ ಲೋಕದ ಬೆಳಕು ಕಂಡವರು. ನೇವಲ್ ಟಾಟಾ ಅವರ ಪುತ್ರರಾಗಿದ್ದರು, ಬದುಕಿನ ವಿಶೇಷವೆಂಬಂತೆ ಟಾಟಾ ಕುಟುಂಬದ ಸೂನಿ ಟಾಟಾ (ಟಾಟಾ ಸಮೂಹದ ಸಂಸ್ಥಾಪಕ ಜಮಶೇಡ್ ಜಿ ಟಾಟಾ ಅವರ ಸೋದರ ಸೊಸೆ) ರತನ್ ಅವರನ್ನು ದತ್ತು ಪಡೆದರು.

ಟಾಟಾ ಅವರ ಅಜ್ಜ, ಹಾರ್ಮುಸ್ ಜಿ ಟಾಟಾ ಅವರು ಟಾಟಾ ಕುಟುಂಬದ ಹಿರಿಯ ಸದಸ್ಯರಾಗಿದ್ದರು.1948 ರಲ್ಲಿ, ಟಾಟಾ ಅವರು 10 ವರ್ಷದವರಾಗಿದ್ದಾಗ, ಅವರ ಪೋಷಕರು ಬೇರ್ಪಟ್ಟ ನಂತರ ಅವರನ್ನು ದತ್ತು ಪಡೆಯಲಾಗಿತ್ತು.

Advertisement

ಟಾಟಾ ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ 8 ನೇ ತರಗತಿಯವರೆಗೆ ನಂತರ ನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ, ಶಿಮ್ಲಾದ ಬಿಷಪ್ ಕಾಟನ್ ಶಾಲೆ ಮತ್ತು ನ್ಯೂಯಾರ್ಕ್ ನಗರದ ರಿವರ್‌ಡೇಲ್ ಕಂಟ್ರಿ ಸ್ಕೂಲ್‌ನಲ್ಲಿ ತಮ್ಮ ಅಧ್ಯಯನವನ್ನು ನಡೆಸಿದರು. 1955 ರಲ್ಲಿ ಪದವಿ ಮುಗಿಸಿದ ನಂತರ ಕಾರ್ನೆಲ್ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡರು, 1959 ರಲ್ಲಿ ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಾರ್ನೆಲ್‌ನಲ್ಲಿದ್ದಾಗ, ಟಾಟಾ ಆಲ್ಫಾ ಸಿಗ್ಮಾ ಫೈ ಫ್ರೆಟರ್ನಿಟಿಯ ಸದಸ್ಯರಾದರು. 2008 ರಲ್ಲಿ, ಟಾಟಾ ಸಂಸ್ಥೆ ಕಾರ್ನೆಲ್‌ ವಿವಿಗೆ 50 ಮಿಲಿಯನ್ ಡಾಲರ್ ಉಡುಗೊರೆಯಾಗಿ ನೀಡಿದ್ದು, ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಅತಿದೊಡ್ಡ ಅಂತಾರಾಷ್ಟ್ರೀಯ ದಾನಿ ಎನಿಸಿಕೊಂಡರು.

1961 ರಲ್ಲಿ ಟಾಟಾ ಸಂಸ್ಥೆ ಪ್ರವೇಶಿಸಿದ್ದ ರತನ್, ಟಾಟಾ ಸ್ಟೀಲ್ ನಲ್ಲಿ ಕೆಲಸ ಮಾಡಿದರು. 1970 ರ ದಶಕದಲ್ಲಿ, ರತನ್ ಟಾಟಾ ಅವರಿಗೆ ಟಾಟಾ ಗುಂಪಿನ ವ್ಯವಸ್ಥಾಪಕ ಸ್ಥಾನ ನೀಡಲಾಯಿತು. ಅಂಗಸಂಸ್ಥೆ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ (NELCO) ಮೂಲಕ ಆರಂಭಿಕ ಯಶಸ್ಸನ್ನು ಸಾಧಿಸಿದರು.

1991 ರಲ್ಲಿ ಟಾಟಾ ಸನ್ಸ್‌ನ ನಿವೃತ್ತಿಯ ನಂತರ ಜೆ.ಆರ್.ಡಿ. ಟಾಟಾ ಅವರ ಗ್ರೂಪ್ ನ ಅಧ್ಯಕ್ಷರಾದರು. ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್ ಟೆಟ್ಲಿ, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಕೋರಸ್ ತನ್ನದಾಗಿಸಿಕೊಂಡಿತು, ಭಾರತಕೇಂದ್ರಿತವಾಗಿದ್ದ ಟಾಟಾವನ್ನು ಜಾಗತಿಕವಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ದೊಡ್ಡ ಕೊಡುಗೆ ರತನ್ ಟಾಟಾ ಅವರದ್ದು.ಉದ್ದಿಮೆ ನಿಂತ ನೀರಾಗಬಹುದು ಎಂಬುದನ್ನು ಅರಿತಿದ್ದ ಟಾಟಾ 30 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದು ಉದ್ದಿಮೆ ರಂಗದ ಅತೀ ದೊಡ್ಡ ಸಾಧನೆ ಎನಿಸಿತು.ಕಾಲಾನುಕ್ರಮವಾಗಿ ಸಂಸ್ಥೆ ಒಂದೊಂದೇ ಮೆಟ್ಟಿಲುಗಳನ್ನು ಏರಿ ಹೊಸತನದ ಮೂಲಕ ತನ್ನ ಪ್ರಭಾವ ಉಳಿಸಿಕೊಂಡಿತು.

21 ವರ್ಷಗಳ ಕಾಲ ಟಾಟಾ ಗ್ರೂಪ್ ಅನ್ನು ಮುನ್ನಡೆಸಿ ಸಂಸ್ಥೆಯ ಆದಾಯವು 40 ಪಟ್ಟು ಹೆಚ್ಚು ಮಾಡಿ ಲಾಭ 50 ಪಟ್ಟು ಹೆಚ್ಚಾಗುವಂತೆ ಮಾಡಿದ ಹಿರಿಮೆ ರತನ್ ಟಾಟಾ ಅವರದ್ದು. ಅಗ್ಗದ ದರಕ್ಕೆ ಸಿಗುವ ಟಾಟಾ ನ್ಯಾನೋ ಕಾರಿನ ಅಭಿವೃದ್ಧಿಯ ಪರಿಕಲ್ಪನೆಯನ್ನು ರೂಪಿಸಿ ಮುನ್ನಡೆಸಿದ್ದೂ ಬಲು ದೊಡ್ಡ ವಿಚಾರ.

2012 ಡಿಸೆಂಬರ್ 28 ರಂದು 75 ರ ಹರೆಯಕ್ಕೆ ಕಾಲಿಟ್ಟ ವೇಳೆ ರತನ್ ಟಾಟಾ ಅವರು ಟಾಟಾ ಗುಂಪಿನಲ್ಲಿ ತಮ್ಮ ಕಾರ್ಯನಿರ್ವಾಹಕ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಉತ್ತರಾಧಿಕಾರದ ನಂತರದ ನಾಯಕತ್ವದ ಬಿಕ್ಕಟ್ಟು ತೀವ್ರ ಚರ್ಚೆಗೂ ಒಳಗಾಯಿತು. ಟಾಟಾ ಅವರ ಸಂಬಂಧಿ ಮತ್ತು ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಪಲ್ಲೊಂಜಿ ಮಿಸ್ತ್ರಿ ಅವರ ಪುತ್ರ ಸೈರಸ್ ಮಿಸ್ತ್ರಿ ಉತ್ತರಾಧಿಕಾರಿಯಾಗುವ ವಿಚಾರವೂ ಕೋರ್ಟ್ ಮೆಟ್ಟಿಲನ್ನೂ ಏರಿತು. 2019 ಡಿಸೆಂಬರ್ ನಲ್ಲಿ ಕಂಡುಬಂದು ಸೈರಸ್ ಮಿಸ್ತ್ರಿ ಅವರ ವಜಾವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.

ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಿ ರತನ್ ಟಾಟಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಉತ್ತರಾಧಿಕಾರಿಗಾಗಿ ಟಾಟಾ ಅವರನ್ನೊಳಗೊಂಡ ಆಯ್ಕೆ ಸಮಿತಿ ರಚಿಸಲಾಯಿತು. 2017 ರಲ್ಲಿ ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಹೆಸರಿಸಲಾಯಿತು.

ರತನ್ ಟಾಟಾ ಅವರು ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ 1991 ರಿಂದ 2012 ರವರೆಗೆ ಮತ್ತು ನಂತರ ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರವರೆಗೆ ಮಧ್ಯಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2008 ರಲ್ಲಿ, ಅವರು ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನೂ ಅರ್ಹವಾಗಿ ಪಡೆದರು. 2000 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ಪಡೆದಿದ್ದರು. ವಿದೇಶಗಳಲ್ಲಿಯೂ ನೂರಾರು ಗೌರವಗಳಿಗೆ ಪಾತ್ರರಾಗಿದ್ದರು.

ಸಂಸ್ಥೆಗಳ ಹೊಣೆ ಯಾರದ್ದು?

ರತನ್ ಟಾಟಾ ಅವರು ವಿವಾಹವಾಗದೆ ಉಳಿದುದರಿಂದ ಅವರ ಮುಂದಿನ ಪೀಳಿಗೆ ಇಲ್ಲ. ಹೀಗಾಗಿ ಸಹಜವಾಗಿ ಟಾಟಾ ಗ್ರೂಪ್ ನ ಒಡೆತನ ಯಾರದ್ದು ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಕಂಪನಿಗಳನ್ನು ನಿಯಂತ್ರಿಸುವ ಟ್ರಸ್ಟ್‌ಗಳ ಆಡಳಿತದಲ್ಲಿ ಮಲಸಹೋದರ ನೋಯೆಲ್ ಟಾಟಾ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ನೋಯೆಲ್ ಅವರ ಮಕ್ಕಳಾದ ಲಿಯಾ (39), ಮಾಯಾ (36), ಮತ್ತು ನೆವಿಲ್ಲೆ (32), ಟಾಟಾ ಟ್ರಸ್ಟ್‌ನ ಅಂಗಸಂಸ್ಥೆಗಳು ಸೇರಿದಂತೆ ಐದು ಪ್ರಮುಖ ಟ್ರಸ್ಟ್‌ಗಳ ಟ್ರಸ್ಟಿಗಳಾಗಿ ಸೇರ್ಪಡೆಗೊಂಡಿದ್ದಾರೆ.

ರತನ್ ಟಾಟಾ ಟ್ರಸ್ಟ್ ಟಾಟಾ ಗ್ರೂಪ್‌ನ ದತ್ತಿ ಮತ್ತು ಪ್ರಮುಖ ಆರ್ಥಿಕ ಚಟುವಟಿಕೆಗಳೆರಡನ್ನೂ ನಿರ್ವಹಿಸುವ ಈ ಟ್ರಸ್ಟ್‌ಗಳಲ್ಲಿ ಟಾಟಾ ಸನ್ಸ್‌ ಸಮೂಹದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಟ್ರಸ್ಟ್‌ಗಳಲ್ಲಿ ಅವರ ಪಾತ್ರವನ್ನು ಕೇವಲ ಸಾಂಕೇತಿಕವಾಗಿದೆಯಾದರೂ ಭವಿಷ್ಯದ ಆಡಳಿತವನ್ನು ರೂಪಿಸಲು ಅವಶ್ಯಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next