Advertisement

Ratan Tata; ಪಾರ್ಸಿ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಕ್ರಿಯೆ: ಸರ್ವ ಧರ್ಮ ಪ್ರಾರ್ಥನೆ

08:33 PM Oct 10, 2024 | Team Udayavani |

ಮುಂಬಯಿ: ಬುಧವಾರ ನಿಧನ ಹೊಂದಿದ ಉದ್ಯಮ ರಂಗದ ದಿಗ್ಗಜ ರತನ್ ಟಾಟಾ ಅವರ ಅಂತ್ಯಕ್ರಿಯೆ ಗುರುವಾರ(ಅ10) ಸಕಲ ಸರಕಾರಿ ಗೌರವದೊಂದಿಗೆ ಪಾರ್ಸಿ ಸಮುದಾಯದವರು ಅನುಸರಿಸುವ ವಿಧಿವಿಧಾನಗಳ ಪ್ರಕಾರ ನಡೆಯಿತು. ಬಳಿಕ ಅವರನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

Advertisement

ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಗುರುವಾರ ಬೆಳಗ್ಗೆ 10.30 ರಿಂದ ಸಂಜೆ 4 ರವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಇಡಲಾಗಿತ್ತು.ಗಣ್ಯಾತೀಗಣ್ಯರು ಸೇರಿ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು. ನಂತರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

ಟಾಟಾ ಅವರನ್ನು “ನೈತಿಕತೆ ಮತ್ತು ಉದ್ಯಮಶೀಲತೆಯ ವಿಶಿಷ್ಟ ಮಿಶ್ರಣ” ಎಂದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಕೈಗಾರಿಕೋದ್ಯಮಿಗೆ ಗೌರವ ಸಲ್ಲಿಸಲು ಗುರುವಾರ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಕೇಂದ್ರ ಸರಕಾರದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಇತರ ಸಚಿವರು ಮತ್ತು ಅಂಬಾನಿ ಅವರಂತಹ ಉನ್ನತ ಉದ್ಯಮಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Advertisement

ಸರ್ವ ಧರ್ಮ ಪ್ರಾರ್ಥನೆ

ಅಂತಿಮ ನಮನದ ವೇಳೆ ಪಾರ್ಸಿ ಮಾತ್ರವಲ್ಲದೆ, ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಸೇರಿ ಸರ್ವ ಧರ್ಮ ಪ್ರಾರ್ಥನೆ ನಡೆಸಲಾಯಿತು.

ಶೋಕಾಚರಣೆಯ ಸಂಕೇತವಾಗಿ ಮಹಾರಾಷ್ಟ್ರದ ಸರಕಾರಿ ಕಚೇರಿಗಳ ಮೇಲೆ ತ್ರಿವರ್ಣ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಹಾಗೆಯೇ ರಾಜ್ಯದಲ್ಲಿ ಮನರಂಜನಾ ಕಾರ್ಯಕ್ರಮಗಳೂ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next