Advertisement

ಕಾರಿಗೆ ಇಲಿ ಕಾಟ: ಸುಲಭ ಪರಿಹಾರಗಳು

01:10 PM Dec 14, 2018 | |

ಇಲಿ ಕಾಟ ಮನೆಗಳಿಗಷ್ಟೇ ಅಲ್ಲ, ಕಾರುಗಳಿಗೂ ಇವೆ. ಒಂದು ಬಾರಿ ಕಾರಿನ ಎಂಜಿನ್‌ ಇರುವ ಭಾಗಕ್ಕೆ ಇಲಿ ಹೊಕ್ಕಿ, ವಯರ್‌, ಪೈಪ್‌, ಬೆಲ್ಟ್ ಇತ್ಯಾದಿಗಳನ್ನು ಕಡಿದು ಹಾಕಿದರೆ ಗ್ರಹಚಾರ ಕೆಟ್ಟಿತೆಂದೇ ಅರ್ಥ. ಇದರ ರಿಪೇರಿಗೆ ಹಲವು ಸಾವಿರ ರೂ.ಗಳನ್ನು ತೆರಬೇಕಾಗಬಹುದು. ಕಾರುಗಳಿಗೆ ಇಲಿಗಳು ಬರುವುದು ತುಂಬ ಸುಲಭ. ಮುಂಭಾಗ ಚಕ್ರದ ಆಕ್ಸೆಲ್‌ ಮೂಲಕ ಅವುಗಳು ಸುಲಭವಾಗಿ ಎಂಜಿನ್‌ ಇರುವ ಭಾಗವನ್ನು ಪ್ರವೇಶಿಸುತ್ತವೆ. ತುಸು ಬೆಚ್ಚನೆ ಇರುವ ಪ್ರದೇಶಗಳನ್ನು ಅವುಗಳು ಆಯ್ಕೆ ಮಾಡಿಕೊಳ್ಳುವುದರಿಂದ ಮತ್ತು ಪೈಪ್‌, ರಬ್ಬರ್‌ ವಸ್ತುಗಳು ಕಡಿಯಲು ಸಿಗುವುದರಿಂದ, ಅವುಗಳ ವಾಸನೆಯಿಂದಾಗಿ ಕಾರುಗಳತ್ತ ಇಲಿಗಳು ಬಹುಬೇಗನೆ ಆಕರ್ಷಿತವಾಗುತ್ತವೆ. ಕಾರುಗಳಿಗೆ ಇಲಿ ಹೊಕ್ಕರೆ ಎಸಿ ವೆಂಟ್‌, ಬೆಲ್ಟ್ ಗಳನ್ನೂ ಕಡಿದು ಹಾಕುತ್ತವೆ. ಇದರಿಂದ ಕಾರು ಚಾಲನೆಯೇ ಕಷ್ಟಕರವಾಗಬಹುದು.

Advertisement

ಇಲಿ ಕಾಟಕ್ಕೆ ಪರಿಹಾರಗಳು: ಶೆಡ್‌ ಭಾಗ ಶುಚಿಯಾಗಿಡಿ
ನೀವು ಕಾರನ್ನು ಶೆಡ್‌ನ‌ಲ್ಲಿಡುತ್ತೀರಿ ಎಂದಾದರೆ ಕಾರು ನಿಲ್ಲುವ ಜಾಗ ಶುಚಿಯಾಗಿಡಿ. ಎರಡು ವಾರಕ್ಕೊಮ್ಮೆಯಾದರೂ ಈ ಭಾಗವನ್ನು ನೀರು ಹಾಕಿ ತೊಳೆದರೆ, ಇಲಿಗಳು ಬರುವುದು ಕಡಿಮೆಯಾಗುತ್ತದೆ. ಶುಚಿಯಾಗಿಲ್ಲದ ಜಾಗವನ್ನೇ ಅವುಗಳು ಹೆಚ್ಚು ಆಯ್ದುಕೊಳ್ಳುತ್ತವೆ. ಹಾಗೆಯೇ ಶೆಡ್‌ ಬದಲು ಮನೆ ಪಕ್ಕ ಚರಂಡಿ ಇತ್ಯಾದಿಗಳ ಬದಿ ಕಾರು ನಿಲ್ಲಿಸುತ್ತಿದ್ದರೂ ತುಸು ಜಾಗ್ರತೆ ವಹಿಸಿ.

ಫಿನಾಯಿಲ್‌ ಸ್ಪ್ರೇ 
ತೀವ್ರ ಘಾಟು ಹೊಂದಿದ ಫಿನಾಯಿಲ್‌ ತಂದು, ಸ್ಪ್ರೇಯರಿಗೆ ಹಾಕಿ ಎಂಜಿನ್‌ ಒಳಭಾಗದಲ್ಲಿ ಸ್ಪ್ರೇ  ಮಾಡಿ. ವಯರ್‌ಗಳಿಗೆ ಹಾನಿಯಾಗದ ರೀತಿ ಸ್ಪ್ರೇ ಮಾಡಿ. ಎಂಜಿನ್‌ ಬಿಸಿಯಾಗುವ ಜಾಗಕ್ಕೆ ಸ್ಪ್ರೇ ಮಾಡದಿರಿ. ಫಿನಾಯಿಲ್‌ ಘಾಟಿನಿಂದಾಗಿ ಇಲಿಗಳು ದೂರ ಉಳಿಯುತ್ತವೆ.

ತಂಬಾಕು ಮತ್ತು ನ್ಯಾಫ್ತಲಿನ್‌ ಬಳಕೆ
ತಂಬಾಕು ಮತ್ತು ನ್ಯಾಫ್ತಲಿನ್‌ಗಳಿಂದ ಇಲಿಗಳು ಹೆಚ್ಚಾಗಿ ದೂರ. ಇವುಗಳಿಂದ ಸೂಸುವ ವಾಸನೆಗಳಿಂದ ಇಲಿಗಳು ದೂರವಾಗುತ್ತವೆ. ಈ ವಿಚಾರದಲ್ಲಿ ಎರಡು ಆಯ್ಕೆಗಳಿವೆ. ಒಂದನೆಯದು ತಂಬಾಕನ್ನು ಎಂಜಿನ್‌ ಬದಿಯಲ್ಲಿ ಬಿಸಿಯಾಗದ ಜಾಗದಲ್ಲಿ ಸಣ್ಣ ಹಗ್ಗದಲ್ಲಿ ಕಟ್ಟುವುದು. ಸುಮಾರು ಎರಡು ಮೂರು ತಿಂಗಳಿಗೆ ಇದರ ವಾಸನೆ ಇರುತ್ತದೆ. ಎರಡನೆಯದು ತಂಬಾಕು ಪುಡಿಯನ್ನು ಎರಚುವುದು. ಇದನ್ನೂ ಎಂಜಿನ್‌ ಬದಿಗಳಲ್ಲಿ, ಸಂದುಗಳಲ್ಲಿ ಎರಚಿ ಅಥವಾ ನ್ಯಾಫ್ತಲಿನ್‌ ಗುಳಿಗೆಗಳನ್ನು ಬಟ್ಟೆಯಲ್ಲಿ ಕಟ್ಟಿ ಇಡಬಹುದು. ಬದಿಯಲ್ಲೂ ಇಡಬಹುದು.

ಎಂಜಿನ್‌ಗೆ ಮೆಷ್‌ ಅಳವಡಿಕೆ
ಕೆಲವು ಕಾರುಗಳಿಗೆ ಎಂಜಿನ್‌ ಕೆಳಭಾಗದಲ್ಲಿ ಮೆಷ್‌ ಅಳವಡಿಸುವಂತೆ ಇರುತ್ತದೆ. ಅಂತಹ ಪಕ್ಷದಲ್ಲಿ ಮೆಷ್‌ ಅನ್ನು ಸೂಕ್ತವಾಗಿ ಕತ್ತರಿಸಿ, ಬೋಲ್ಟ್ ಹಾಕಿ ಅಳವಡಿಸಬಹುದು. ಇದಕ್ಕೆ ತುಸು ಪರಿಣತಿ ಅಗತ್ಯವಿದ್ದು, ವಾಹನ ಮೆಕ್ಯಾನಿಕ್‌, ವಾಹನ ಸರ್ವೀಸ್‌ನವರು ಈ ಕೆಲಸ ಮಾಡಿಕೊಡಬಲ್ಲರು. 

Advertisement

ಕಹಿ ಬೇವಿನ ಎಣ್ಣೆಸ್ಪ್ರೇ 
ಇಲಿಗಳು ಬಾರದಂತೆ ತಡೆಗಟ್ಟಲು ಇದು ಒಂದು ಅತ್ಯುತ್ತಮ ವಿಧಾನ. ಹೆಚ್ಚು ಪರಿಣಾಮಕಾರಿ. ಕಹಿ ಬೇವಿನ ಎಣ್ಣೆ ವಿಪರೀತ ವಾಸನೆ ಹೊಂದಿದ್ದು ಇದನ್ನು ಹಳೆಯ ಹಲ್ಲುಜ್ಜುವ ಬ್ರಷ್‌ನಲ್ಲಿ ಅದ್ದಿ ಎಂಜಿನ್‌ನ ವಿವಿಧ ಭಾಗಗಳಲ್ಲಿ ಉಜ್ಜಿರಿ. ಪೈಪ್‌, ವಯರ್‌ಗಳಿಗೂ ಇದನ್ನು ಹಚ್ಚಬಹುದು. ಇದನ್ನು ಹಚ್ಚುವುದರಿಂದ ಏನೂ ಸಮಸ್ಯೆಯಿಲ್ಲ. ಆದರೆ ಎಸಿಗೆ ಗಾಳಿ ಹೋಗುವ ಭಾಗದಲ್ಲಿ ಹಚ್ಚಿದರೆ ವಾಸನೆಯಿಂದಾಗಿ ಒಳಗೆ ಕೂರಲು ಸಮಸ್ಯೆಯಾದೀತು. ಇಲಿ ಸಮಸ್ಯೆ ದೂರಗೊಳಿಸಲು ಇದು ಸುಲಭದ ಉಪಾಯವೂ ಆಗಿದೆ.

 ಈಶ

Advertisement

Udayavani is now on Telegram. Click here to join our channel and stay updated with the latest news.

Next