ಬೆಂಗಳೂರು: ವಿದೇಶಿ ಗಣ್ಯರು ಆಗಮಿಸಿದ ಸಂದರ್ಭದಲ್ಲಿಯೇ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಲಿ ಸತ್ತು ವಾಸನೆಯಿಂದಾಗಿ ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗುವಂತಾಯಿತು.
ಈ ಹಿನ್ನೆಲೆಯಲ್ಲಿ ವಿದೇಶಿ ಗಣ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಬೇಕಾಗಿದ್ದ ಸಭೆಗಳನ್ನು ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಗೆ ಸ್ಥಳಾಂತರಿಸಿದರು.
ಸೋಮವಾರ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ರೂಮ್ ನಂಬರ್ 313ರಲ್ಲಿ ಇರಾನ್‌ನ ಭಾರತೀಯ ರಾಯಭಾರಿ ಭೇಟಿ ಸೇರಿದಂತೆ ಕೆಲವು ನಿಯೋಗಗಳು ಮುಖ್ಯಮಂತ್ರಿ ಯಡಿಯೂರಪ್ಪಭೇಟಿ ಮಾಡಬೇಕಾಗಿತ್ತು. ಆದರೆ ಸಭೆ ನಿಗದಿಯಾಗಿದ್ದ 313ರ ಸಮಿತಿ ಕೊಠಡಿಯೊಳಗೆ ಇಲಿಯೊಂದು ಸತ್ತಿದ್ದರಿಂದ ಕೊಠಡಿ ಪೂರ್ತಿ ದುರ್ವಾಸನೆ ಉಂಟಾಗಿತ್ತು.
ಆದರೂ, ನಿಗದಿಯಂತೆ ವಿದೇಶಿ ನಿಯೋಗ ಮುಖ್ಯಮಂತ್ರಿ ಆಗಮನಕ್ಕಾಗಿ ಅದೇ ಕೊಠಡಿಯಲ್ಲಿ ಕಾಯುತ್ತ ಕುಳಿತುಕೊಂಡಿದ್ದರು. ಮುಖ್ಯಮಂತ್ರಿ ಸಭೆಗೆ ಆಗಮಿಸಿದಾಗ ಇಲಿ ಸತ್ತ ವಾಸನೆ ಬಂದಿದ್ದರಿಂದ ಮುಖ್ಯಮಂತ್ರಿ ಸಮಿತಿ ಕೊಠಡಿಯಲ್ಲಿ ನಿಗದಿಯಾಗಿದ್ದ ಎಲ್ಲ ಸಭೆಗಳನ್ನು ತಮ್ಮ ಕೊಠಡಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಕ್ಷಣ ಸಮಿತಿಯಲ್ಲಿ ನಡೆಯಬೇಕಿದ್ದ ಸಭೆಗಳನ್ನು ಮೂನರೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಗೆ ಸ್ಥಳಾಂತರಸಲಾಯಿತು. ಇದೇ ಸಂದರ್ಭದಲ್ಲಿ ಸಮಿತಿ ಕೊಠಡಿಯಲ್ಲಿನ ದುರ್ವಾಸನೆಯನ್ನು ಹೋಗಲಾಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.