Advertisement

ಬಂಕಾಪುರ ನವಿಲುಧಾಮದಲ್ಲಿ ರಾಷ್ಟ್ರಪಕ್ಷಿಗೂ ತಟ್ಟಿದೆ ಬರದ ಬಿಸಿ

03:45 AM Mar 05, 2017 | |

ಹಾವೇರಿ: ಈ ವರ್ಷದ ಬರಗಾಲದಿಂದ ಜನ, ಜಾನುವಾರುಗಳಷ್ಟೇ ಅಲ್ಲ. ರಾಷ್ಟ್ರೀಯ ಪಕ್ಷಿ ನವಿಲುಗಳೂ ಸಹ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಮೂಕಪಕ್ಷಿಗಳ ನೀರಿನ ದಾಹದ ಕೂಗು ಅಕ್ಷರಶಃ ಅರಣ್ಯರೋದನವಾಗಿದೆ. ದೇಶದ ಎರಡನೇ ದೊಡ್ಡ ನವಿಲುಧಾಮವೆಂಬ ಖ್ಯಾತಿ ಹೊಂದಿರುವ ಜಿಲ್ಲೆಯ ಬಂಕಾಪುರದ ನವಿಲುಧಾಮದಲ್ಲಿ ಸಾವಿರಾರು ಸಂಖ್ಯೆಯ ನವಿಲುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿವೆ.

Advertisement

ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೆ ಬರ ಬಿದ್ದಿರುವುದರಿಂದ ಜಲಮೂಲಗಳೆಲ್ಲ ಒಣಗಿ ಜನ, ಜಾನುವಾರುಗಳಂತೆ ಈ ಧಾಮದ ನವಿಲುಗಳೂ ಕುಡಿವ ನೀರಿಲ್ಲದೆ ಕಂಗಾಲಾಗಿವೆ. ವಿಶಾಲವಾದ 139 ಎಕರೆ ಪ್ರದೇಶದಲ್ಲಿರುವ ಈ ಧಾಮದಲ್ಲಿ ನವಿಲುಗಳಿಗೆ ಕುಡಿಯಲು ನೀರು ಒದಗಿಸುವ ಸರಿಯಾದ ವ್ಯವಸ್ಥೆಯೇ ಇಲ್ಲ. ಇನ್ನು ಬೇಸಿಗೆಯ ದಿನಗಳಲ್ಲಿ ನವಿಲುಗಳು ತಮ್ಮ ನೀರಿನ ದಾಹ ತೀರಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ.

ಈ ಮೊದಲು ನವಿಲುಧಾಮದಲ್ಲಿ ದೊಡ್ಡ ಹೊಂಡವಿತ್ತು. ಸಾಕಷ್ಟು ಮಳೆಯಾಗಿ ಸದಾ ನೀರು ತುಂಬಿರುತ್ತಿತ್ತು. ಈ ಹೊಂಡದ ನೀರು ನವಿಲು, ಇತರ ಪ್ರಾಣಿ, ಪಕ್ಷಿಗಳಿಗೆ ಜೀವಜಲವಾಗಿತ್ತು. ಮಳೆಯಾಗದೆ ಈ ಹೊಂಡವೂ ಬತ್ತಿ, ನೀರಿಗಾಗಿ ಬಾಯೆ¤ರೆದು ಕುಳಿತಿದೆ. ಮೂರು ವರ್ಷಗಳ ಹಿಂದೆಯೇ ಈ ಹೊಂಡ ಒಣಗಿದ್ದರಿಂದ ಆ ವರ್ಷ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಧಿಕಾರಿಗಳು ಈ ಧಾಮದಲ್ಲಿ ಮೂರು ಕಿರುಹೊಂಡಗಳನ್ನು ನಿರ್ಮಿಸಿ ಕೊಳವೆಬಾವಿಯಿಂದ ನೀರು ಬಿಡುವ ವ್ಯವಸ್ಥೆ ಮಾಡಿದ್ದರು. ಆದರೆ, ಎರಡು ವರ್ಷಗಳಿಂದ ಮತ್ತೆ ಈ ಕಿರುಹೊಂಡಗಳು ಒಣಗಿದ್ದು ಇದಕ್ಕೆ ನೀರು ಹಾಕುವುದನ್ನೇ ಇಲಾಖೆ ಮರೆತುಬಿಟ್ಟಿದೆ.

ಗೋ ತೊಟ್ಟಿ ನೀರು:
ನವಿಲುಧಾಮ ವ್ಯಾಪ್ತಿಯಲ್ಲಿಯೇ ಖೀಲಾರಿ ಗೋಸಂವರ್ಧನಾ ಕೇಂದ್ರವೂ ಇದ್ದು, ಇವರು ಪಶುಸಂಗೋಪನೆಗಾಗಿ ಎಂಟು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಇವರು ಗೋವುಗಳಿಗಾಗಿ ಅಲ್ಲಲ್ಲಿ ಇಟ್ಟಿರುವ ಗೋವಿನ ನೀರಿನ ತೊಟ್ಟಿಗಳೇ ಸದ್ಯಕ್ಕೆ ಇಲ್ಲಿಯ ನವಿಲುಗಳಿಗೆ ಬೆಳಗ್ಗೆ ಹಾಗೂ ಸಂಜೆ ಕುಡಿಯಲು ನೀರೊದಗಿಸುತ್ತಿವೆ. ಮೇವಿನ ಬೆಳೆಗೆ ನೀರು ಹಾಯಿಸಿದಾಗ ಸಿಗುವ ನೀರನ್ನೇ ಇವು ಕುಡಿಯಬೇಕಿದ್ದು, ಬೇಕೆಂದಾಗ ನೀರು ಸಿಗುವ ವ್ಯವಸ್ಥೆ ಇಲ್ಲಿಲ್ಲ. ಇನ್ನು ಖೀಲಾರಿ ಗೋ ಸಂಗೋಪನಾ ಕೇಂದ್ರದಿಂದ ನಿರ್ಮಿತ ಈ ತೊಟ್ಟಿಗಳು, ಜನಸಂಚಾರದ ಮಾರ್ಗ, ಸ್ಥಳಗಳಲ್ಲಿ ಇರುವುದರಿಂದ ಬಹುತೇಕ ನವಿಲುಗಳು ಪ್ರಾಣ ಭಯದಲ್ಲೇ ನೀರಿನ ತೊಟ್ಟಿ ಬಳಿ ನೀರು ಕುಡಿಯಬೇಕಾದ ಅನಿವಾರ್ಯತೆ ಇದೆ.

ಇನ್ನು ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಅವರು ತೊಟ್ಟಿಗೆ ಹಾಕುವ ನೀರು ಗೋವುಗಳಿಗೆ, ಮೇವು ಬೆಳೆಗೆ ಹಾಕುವ ನೀರು ಮೇವಿಗೆ ಮಾತ್ರ ಸಾಕಾಗುವಂತಿದ್ದು, ಇದರಲ್ಲಿಯೇ ನವಿಲುಗಳಿಗೆ  ಹನಿ ನೀರು ಹುಡುಕಿ ಕುಡಿಯಬೇಕಾದ ಪರಿಸ್ಥಿತಿಯಿದೆ.

Advertisement

ಕೆಲ ನವಿಲುಗಳಂತೂ ನೀರು ಹುಡುಕಿಕೊಂಡು ಧಾಮ ಬಿಟ್ಟು ಹೊರಗೆ ಹೆಜ್ಜೆ ಇಡುತ್ತವೆ. ಹೀಗೆ ಹೋದ ಪಕ್ಷಿಗಳೆಲ್ಲವೂ ಮರಳಿ ಧಾಮಕ್ಕೆ ಬಂದೇ ಬಿಡುತ್ತವೆಂಬ ಭರವಸೆ ಯಾರಿಗೂ ಇಲ್ಲ. ಹೊರಗಡೆ ಬೇಟೆಗಾರರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲೂ ಆಗದೆ ಜೀವ ಬಿಡುವ ಧಾರುಣ ಸ್ಥಿತಿ ಇದೆ.

ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನ ನವಿಲು ತಜ್ಞ ಹರೀಶ ಭಟ್‌ ನೇತೃತ್ವದಲ್ಲಿ 2009ರಲ್ಲಿ ಬಂಕಾಪುರ ಧಾಮದಲ್ಲಿ ಗಣತಿ ನಡೆಸಿದಾಗ ಇಲ್ಲಿ 400 ನವಿಲು ಪತ್ತೆಯಾಗಿದ್ದವು. ಎರಡನೇ ಗಣತಿ ಇನ್ನೂ ನಡೆದಿಲ್ಲ. ಆದರೆ, ಅಂದಾಜು ಇಲ್ಲಿ 2-3 ಸಾವಿರ ನವಿಲುಗಳಿದ್ದು, ಇವು ಈಗ ನೀರಿನ ಸಮಸ್ಯೆಗೆ ಗುರಿಯಾಗಿವೆ. ರಾಷ್ಟ್ರೀಯ ಪಕ್ಷಿಯ ನೀರಿನ ದಾಹ ತಣಿಸಬೇಕಾದ ಅರಣ್ಯ ಇಲಾಖೆ ಕನಿಕರ ಇಲ್ಲದೇ ಕೈಕಟ್ಟಿ ಕುಳಿತಿರುವುದು ಪಕ್ಷಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನವಿಲು ಧಾಮದಲ್ಲಿರುವ ಗೋಸಂವರ್ಧನಾ ಕೇಂದ್ರದವರು ಗೋವುಗಳಿಗೆ, ಮೇವುಗಳಿಗೆ ಹಾಕುವ ನೀರು ಹಾಗೂ ಧಾಮದ ಪಕ್ಕದ ತೋಟಗಳಿಗೆ ರೈತರು ಬಿಡುವ ನೀರೇ ನವಿಲುಗಳಿಗೆ ಸಾಕಾಗುತ್ತದೆ. ಅದಕ್ಕಾಗಿ ಅಲ್ಲಿ ನವಿಲುಗಳಿಗಾಗಿಯೇ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಈ ವರ್ಷ ಬೋರ್‌ಗಳಲ್ಲಿಯೂ ನೀರು ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆಯಾಗಲಿದೆ. ಇನ್ನು ಮುಂದೆ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.
– ಎ.ಬಿ. ಕಲ್ಲೂರ, ಡಿಎಫ್‌ಒ, ವನ್ಯಜೀವಿ ವಿಭಾಗ, ರಾಣಿಬೆನ್ನೂರು

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next