Advertisement

“ಕುವೆಂಪು ಸಮಗ್ರ” ಸಾಹಿತ್ಯ ಸರಣಿ ಡಿಜಿಟಲ್ ವೇದಿಕೆಗೆ ಬಂದಿರುವುದು ಮಹತ್ವದ ಬೆಳವಣಿಗೆ

08:21 PM Nov 01, 2020 | sudhir |

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರ ಸ್ಥಾನವಾದ ವಿಧಾನಸೌಧವು ಭಾನುವಾರ ಸಡಗರ ಇಮ್ಮಡಿಗೊಂಡ ಸಂದರ್ಭಕ್ಕೆ ಸಾಕ್ಷಿಯಾಯಿತು. ಮೊದಲನೆಯದಾಗಿ, ಕರ್ನಾಟಕ ರಾಜ್ಯೋತ್ಸವ ಆಚರಣೆಯ ಖುಷಿ. ಇದೇ ವೇಳೆ ಕನ್ನಡ ಸಾರಸ್ವತ ಲೋಕವನ್ನು ಉನ್ನತಿಗೇರಿಸಿದ ರಾಷ್ಟ್ರಕವಿ ‘ಕುವೆಂಪು ಸಮಗ್ರ’ ಸಾಹಿತ್ಯ ಪುಸ್ತಕಗಳ ಸರಣಿ ಮತ್ತು ಡಿಜಿಟಲ್ ಆವೃತ್ತಿ ಲೋಕಾರ್ಪಣೆಗೊಂಡಿತು.

Advertisement

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ‘ಕುವೆಂಪು ಸಮಗ್ರ’ ಸಾಹಿತ್ಯ ಪುಸ್ತಕಗಳ ಸರಣಿ ಮತ್ತು ಡಿಜಿಟಲ್ ಆವೃತ್ತಿ (EPUB ಪುಸ್ತಕ)ಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಲೋಕಾರ್ಪಣೆಗೊಳಿಸಿದರು.

“ಕುವೆಂಪು ಸಮಗ್ರ” ಸಾಹಿತ್ಯ ಸರಣಿ ಡಿಜಿಟಲ್ ವೇದಿಕೆಗೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇದರಿಂದಾಗಿ ಸಾಹಿತ್ಯದ ಓದುಗರು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಕನ್ನಡ ಸಾಹಿತ್ಯಕ್ಕೆ ಹೊಸ ನುಡಿಗಟ್ಟು ನೀಡಿದ ಕುವೆಂಪು ಅವರ ಬರವಣಿಗೆಯನ್ನು ತಮಗೆ ಬೇಕೆನ್ನಿಸಿದ ಕ್ಷಣದಲ್ಲಿ ಸವಿಯಬಹುದಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಇದನ್ನೂ ಓದಿ:ಪ್ರತಿಯೊಬ್ಬ ಕನ್ನಡಿಗರು ಕೂ ಆ್ಯಪ್ ಬಳಸುವ ಮೂಲಕ ಕನ್ನಡವನ್ನು ಬೆಳೆಸಲಿ : ಬಿಎಸ್ ವೈ

ಕನ್ನಡಿಗರು ಕನ್ನಡೇತರರ ನಡುವೆ ಹಾಗೆಯೇ ಜಗತ್ತಿನ ಬೇರಾವುದೇ ಭಾಷೆಯ ಜನರು ಕನ್ನಡಿಗರ ಜೊತೆ ದಿನನಿತ್ಯದ ಸಂವಹನ ಹಾಗೂ ವ್ಯವಹಾರಗಳನ್ನು ಅಡೆತಡೆಯಿಲ್ಲದೆ ಕನ್ನಡ ಮೂಲಕವೇ ನಡೆಸಲು ಸಾಧ್ಯವಾಗುವಂತೆ ಮಾಡುವುದು ಸೇರಿದಂತೆ ಇತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ ರಚಿಸಲಾಗುವುದು. ಸ್ಟಾರ್ಟ್‌ಅಪ್‌ ವಿಷನ್‌ ಗ್ರೂಪ್‌ ನೇತೃತ್ವದಲ್ಲಿ ಈ ತಂಡ ಕೆಲಸ ಮಾಡಲಿದೆ ಎಂದು ಡಿಸಿಎಂ ತಿಳಿಸಿದರು.

Advertisement

ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ನೀಡಲು ವಿಷನ್‌ ಗ್ರೂಪ್‌ ನೇತೃತ್ವದಲ್ಲಿ ಕನ್ನಡ ತಂತ್ರಜ್ಞಾನ ಅಭಿವೃದ್ಧಿ ತಂಡ ಕೆಲಸ ಮಾಡಲಿದೆ ಎಂದರು. ಇದರ ಉದ್ದೇಶಗಳನ್ನು ವಿಷನ್‌ ಗ್ರೂಪ್‌ ಸದಸ್ಯ ಡಾ.ಸಮೀರ್ ಕಾಗಲ್ಕರ್ ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಕುವೆಂಪು ಅವರ ಮಗಳು ಹಾಗೂ ಲೇಖಕಿ ತಾರಿಣಿ ಚಿದಾನಂದಗೌಡ ಅವರ ಪತಿ ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ ಅವರು ಆನ್ ಲೈನ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಡಿಸಿಎಂ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಸೇವೆಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆ : ಡಿಸಿ ಆದೇಶ

ಕುವೆಂಪು ಸಾಹಿತ್ಯ ಸರಣಿ ಪುಸ್ತಕಗಳ ಪ್ರಕಟಣೆ ಹಾಗೂ ಡಿಜಿಟಲ್ ಆವೃತ್ತಿ (EPUB) ಕುರಿತು ವಿಶ್ರಾಂತ ಕುಲಪತಿ ಹಾಗೂ ಸಾಹಿತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿದರು. ಕುವೆಂಪು ಅವರ ಸುಮಾರು 12,000 ಪುಟಗಳು ಏಕಕಾಲಕ್ಕೆ ಪುಸ್ತಕಗಳ ರೂಪದಲ್ಲಿ ಹಾಗೂ ಡಿಜಿಟಲ್ ಆವೃತ್ತಿಯಲ್ಲಿ ಲೋಕಾರ್ಪಣೆಗೊಂಡಿರುವುದು ಚಾರಿತ್ರಿಕ ಸಂಗತಿ ಎಂದರು.

ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಸ.ಚಿ.ರಮೇಶ ಅಧ್ಯಕ್ಷ ನುಡಿಗಳನ್ನಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ಕರಿಸಿದ್ದಪ್ಪ, ಕುವೆಂಪು ಸಾಹಿತ್ಯ ಸರಣಿ ಸಂಪಾದಕ ಡಾ.ಕೆ,ಸಿ.ಶಿವಾರೆಡ್ಡಿ, ಹಂಪಿ ಕನ್ನಡ ವಿ.ವಿ. ಪ್ರಸಾರಾಂಗ ನಿರ್ದೇಶಕ ಡಾ.ಎಚ್.ಡಿ.ಪ್ರಶಾಂತ್, ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಎ.ಜಿ.ರಾಮಕೃಷ್ಣನ್, ಹಂಪಿ ಕನ್ನಡ ವಿ.ವಿ. ಕುಲಸಚಿವ ಡಾ.ಎ.ಸುಬಣ್ಣ ರೈ ‘ಕುವೆಂಪು ಸಮಗ್ರ’ವನ್ನು ಡಿಜಿಟಲ್ ಆವೃತ್ತಿಗೆ ತರುವ ಕೆಲಸ ಮಾಡಿರುವ “ಭಾಷಿಣಿ ಡಿಜಿಟೈಸೇಷನ್” ಸಂಸ್ಥೆಯ ಡಾ.ಶಿವಕುಮಾರ್ ಮತ್ತು ಭಾರ್ಗವಿ ದಂಪತಿ ಪಾಲ್ಗೊಂಡಿದ್ದರು.

ಒಟ್ಟು ರೂ 10,000 ಮುಖಬೆಲೆಯ ಈ ಪುಸ್ತಕಗಳ ಸರಣಿ ಸೇರಿದಂತೆ ಹಂಪಿ ಪ್ರಸಾರಾಂಗ ಪ್ರಕಟಿಸಿರುವ ಎಲ್ಲಾ ಪ್ರಕಟಣೆಗಳನ್ನು ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಲ್ಲಿ ಶೇ 50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ, ಇ-ಪುಸ್ತಕಗಳನ್ನು ಗೂಗಲ್ ಪ್ಲೇ ಬುಕ್ಸ್ ಗೆ ಅಪ್ ಲೋಡ್ ಮಾಡಲಾಗಿದ್ದು 10 ದಿನಗಳ ನಂತರ ಓದುಗರಿಗೆ ಸಿಗುತ್ತವೆ. ಇ-ಪುಸ್ತಕದಲ್ಲಿ ಶೇ 20ರಷ್ಟು ಪಠ್ಯವನ್ನು ಉಚಿತವಾಗಿ ಓದಬಹುದು, ಟ್ಯಾಬ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಆಂಡ್ರಾಯ್ಡ್ ಮೊಬೈಲ್ ಗಳ ಮೂಲಕ ಇದನ್ನು ಓದಬಹುದು.

ಇ-ಪುಸ್ತಕಗಳ ದರ ಕಡಿಮೆ ಇದ್ದು, ಬೆಲೆ ಪಟ್ಟಿ ಈ ಕೆಳಕಂಡಂತಿದೆ:
1) ಕುವೆಂಪು ಸಮಗ್ರ ಕಾವ್ಯ 1 (ಕವಿತೆ, ಸಾನೆಟ್ ಗಳು)- ರೂ 349 (2) ಕುವೆಂಪು ಸಮಗ್ರ ಕಾವ್ಯ 2 (ಕವಿತೆ, ಮಕ್ಕಳ ಕವಿತೆಗಳು)- ರೂ 349 (3) ಕುವೆಂಪು ಸಮಗ್ರ ಕಾವ್ಯ 3 (ಶ್ರೀ ರಾಮಾಯಣ ದರ್ಶನಂ, ಚಿತ್ರಾಂಗದಾ)- ರೂ 299 (4) ಕುವೆಂಪು ಸಮಗ್ರ ನಾಟಕ- ರೂ 299 (5) ಕುವೆಂಪು ಸಮಗ್ರ ಗದ್ಯ 1 (ವಿಮರ್ಶೆ, ದಾರ್ಶನಿಕ ಕಾವ್ಯ ಮೀಮಾಂಸೆ)- ರೂ 349 (6) ಕುವೆಂಪು ಸಮಗ್ರ ಗದ್ಯ 2 (ವೈಚಾರಿಕ ಸಾಹಿತ್ಯ, ಸಂದರ್ಶನ) ರೂ 349 (7) ಕುವೆಂಪು ಸಮಗ್ರ ಗದ್ಯ 3 (ನೆನಪಿನ ದೋಣಿಯಲ್ಲಿ- ಆತ್ಮಕಥೆ) ರೂ 349 (8) ಕುವೆಂಪು ಸಮಗ್ರ ಗದ್ಯ 4 (ಮಲೆಗಳಲ್ಲಿ ಮದುಮಗಳು- ಕಾದಂಬರಿ)- ರೂ 299 (9) ಕುವೆಂಪು ಸಮಗ್ರ ಗದ್ಯ 5 (ಕಾನೂರು ಹೆಗ್ಗಡತಿ-ಕಾದಂಬರಿ)- ರೂ 299 (10) ಕುವೆಂಪು ಸಮಗ್ರ ಗದ್ಯ 6 (ಸಣ್ಣ ಕತೆಗಳು, ಮಲೆನಾಡಿನ ಚಿತ್ರಗಳು, ಜನಪ್ರಿಯ ವಾಲ್ಮೀಕಿ ರಾಮಾಯಣ- ರೂ 299 (11) ಕುವೆಂಪು ಸಮಗ್ರ ಗದ್ಯ 7 (ಶ್ರಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಗುರುವಿನೊಡನೆ ದೇವರೆಡೆಗೆ) – ರೂ 299 (12) ಕುವೆಂಪು ಸಮಗ್ರ ಗದ್ಯ 8 (ಪತ್ರ, ನೆನಪು, ಮುನ್ನುಡಿ) ರೂ. 299

Advertisement

Udayavani is now on Telegram. Click here to join our channel and stay updated with the latest news.

Next