ಕಲಬುರಗಿ: ತಾಲ್ಲೂಕಿನ ನಂದೂರ(ಕೆ) ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಂದೂರ (ಬಿ), ಧರ್ಮಾಪುರ ಮತ್ತು ಎಲ್ಲ ತಾಂಡಾಗಳಿಗೆ ಕಾಗಿಣಾ ನದಿಯಿಂದ ಪೈಪ್‌ಲೈನ್ ಮುಖಾಂತರ ಕುಡಿವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-150) ರಸ್ತಾ ರೋಖೋ ಚಳವಳಿ ನಡೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಪದಾಧಿ ಕಾರಿಗಳು, ವಿವಿಧ ಮಠಾಧೀಶರು ಹಾಗೂ ರೈತರು, ಮಹಿಳೆಯರ ನೇತೃತ್ವದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟಿಸಲಾಯಿತು. ಬೇಸಿಗೆ ಸಮೀಪಿಸುತ್ತಿದ್ದಂತೆ ಇಲ್ಲಿ ವಾಸಿಸುವ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸಮಸ್ಯೆ ಪರಿಹರಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಉಮಾಪತಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ನಂದೂರ (ಕೆ) ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸುಮಾರು 8450 ಎಕರೆ ಪ್ರದೇಶಗಳಿಗೆ ನೀರಾವರಿ ಒದಗಿಸುವ ಕುರಿತು ಕಳೆದ 10 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೊಬ್ಬರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಲಲಿತಾಬಾಯಿ ಎನ್. ಬಿರಾದಾರ ಹರಿಹಾಯ್ದರು.
ಈ ಗ್ರಾಮಗಳಿಗೆ ಕೇವಲ 12 ಕಿ.ಮೀ. ಅಂತರದಲ್ಲಿ ಇರುವ ಕಾಗಿಣಾ ನದಿಯಿಂದ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಬೇಕು ಮತ್ತು ಹೊಸ ಕೆರೆ, ಕಟ್ಟೆಗಳ ನಿರ್ಮಾಣ ಮಾಡಬೇಕು ಸದ್ಯ 24ಗಂಟೆಗಳ ಒಳಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಬೇಕು ಎಂದು ತಾಪಂ ಮಾಜಿ ಸದಸ್ಯ ಈರಣ್ಣ ಹಿರೇಗೌಡ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸ್ಟೇಷನ್ ಬಬಲಾದನ ರೇವಣಸಿದ್ದ ಶಿವಾಚಾರ್ಯಾರು, ಓಂಕಾರ ಬೇನೂರ ಮಹಾಲಿಂಗೇಶ್ವರ ಸಂಸ್ಥಾನ ಮಠದ ಸಿದ್ದ ರೇಣುಕಾ ಸ್ವಾಮೀಜಿ, ತೊನಸನಹಳ್ಳಿ ರೇವಣಸಿದ್ದ ಸ್ವಾಮೀಜಿ, ಹೊನ್ನಕಿರಣಗಿಯ ಚಂದ್ರಗುಂಡ ಸ್ವಾಮೀಜಿ, ರೈತ ಮುಖಂಡರಾದ ಬಸವರಾಜ ಇಂಗಿನ್, ಜಿಪಂ ಮಾಜಿ ಸದಸ್ಯ ಸೈಯದ್ ಅಕ್ಬರ್ ಹುಸೇನಿ, ಹುಲಕಂಟೆಪ್ಪ ಹಿರೇಗೌಡ, ಬಸವರಾಜ ಜಿ. ಪಾಟೀಲ, ನ್ಯಾಯವಾದಿ ನಾಗೇಂದ್ರ ಎಂ. ಉದನೂರ, ಮಲ್ಲಿಕಾರ್ಜುನ ಖೇಣಿ, ವಿಠ್ಠಲ್ ಮಾಕಾ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಕಾಜಪ್ಪ ಹಿರೇಗೌಡ, ಅಶೋಕ ಪಾಟೀಲ, ಶರಣಪ್ಪ ದಂಗಾಪುರ, ವಿಶ್ವರಾಧ್ಯ ಎಸ್. ನಾಟೀಕಾರ, ನಿಂಗಣ್ಣ ಪಿ. ದೊಡ್ಡಮನಿ, ಸಂಜು ಕುಮಾರ ವಳಕೇರಿ, ಶಂಕರ ಡಿ. ರಾಠೊಡ್, ಬದ್ರುನಾಯಕ್ ಸೇರಿದಂತೆ ನಂದೂರ (ಬಿ), ನಂದೂರ (ಕೆ) ಧರ್ಮಾಪುರ ಗ್ರಾಮಗಳಲ್ಲಿ ಬರುವ ಎಲ್ಲ ತಾಂಡಾಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.