ಹೊಸದಿಲ್ಲಿ : ಹನ್ನೆರಡನೇ ತರಗತಿಯ ವಿದ್ಯಾರ್ಥಿಯಾಗಿರುವ ಅಪ್ರಾಪ್ತ ವಯಸ್ಸಿನ ಹುಡುಗನು ಐ-20 ಕಾರನ್ನು ಅತ್ಯಂತ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮವಾಗಿ ಕನಿಷ್ಠ ಇಬ್ಬರು ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ಇಂದು ದಿಲ್ಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ಸಂಭವಿಸಿದೆ.
ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ರಸ್ತೆ ಬದಿಯ ಫೂಟ್ ಪಾತ್‌ನಲ್ಲಿ ಮಲಗಿಕೊಂಡಿದ್ದವರ ಮೇಲೆಯೇ ಬಾಲಕನು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ. ಕಾರನ್ನು ಆತ ವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಕಾರಣ ಆತನಿಗೆ ವಾಹನದ ಮೇಲೆ ನಿಯಂತ್ರಣ ತಪ್ಪಿ ಹೋದದ್ದೇ ಎರಡು ಅಮಾಯಕ ಜೀವಗಳ ಬಲಿಗೆ ಕಾರಣವಾಯಿತು.
ಅಪ್ತಾಪ್ತ ವಯಸ್ಸಿನ ಬಾಲಕನು ಪಾರ್ಟಿಯೊಂದರಿಂದ ಮರಳುತ್ತಿದ್ದ ಹಾಗೂ ಆತನ ಬಳಿ ಡ್ರೈವಿಂಗ್ ಲೈಸನ್ಸ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಬಂಧಿಸಿರುವ ಪೊಲೀಸರು ಆತನು ವಾಹನ ಚಲಾವಣೆಗೆ ಮುನ್ನ ಮದ್ಯ ಸೇವನೆ ಮಾಡಿದ್ದನೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ್ದಾರೆ.
ವಾಹನದ ಮಾಲಕನ ವಿರುದ್ಧ ಐಪಿಸಿ ಸೆಕ್ಷನ್ 304ರ ಪ್ರಕಾರ (ಕೊಲೆಯಲ್ಲದ ನರ ಹತ್ಯೆ) ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.