Advertisement

ವೀರ ಮಹಿಳೆಯ ಅಪರೂಪದ ವೀರಗಲ್ಲು ಪತ್ತೆ

02:24 PM Mar 06, 2023 | Team Udayavani |

ದೇವನಹಳ್ಳಿ: ವಿಶ್ವನಾಥಪುರ ಗ್ರಾಮದಲ್ಲಿನ ಖಾಸಗಿ ಜಮೀನೊಂದರಲ್ಲಿ ಹುದಗಿ ಹೋಗಿದ್ದ ವೀರಗಲ್ಲುಗಳನ್ನು ಹೊರತೆಗೆದು ಸಂರಕ್ಷಿಸಲಾಗಿದೆ. ವೀರ ಮಹಿಳೆಯನ್ನು ಹೊಂದಿರುವ ವೀರಗಲ್ಲು ದೊರೆತಿರುವುದು ಅಪರೂಪವಾಗಿದೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಬಿ.ಜಿ. ಗುರುಸಿದ್ಧಯ್ಯ ಹೇಳಿದರು.

Advertisement

ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಸುಮಾರು 2 ವರ್ಷದಿಂದ ಗ್ರಾಮದಲ್ಲಿ ಶಾಸನ ಮತ್ತು ವೀರಗಲ್ಲು ಇದೆ ಎಂದು ಹುಡುಕಾಟ ಮಾಡಲಾಗುತ್ತಿತ್ತು. ಇಲ್ಲಿನ ಖಾಸಗಿ ಜಮೀನಿನ ನೀಲಗಿರಿ ತೋಪಿನಲ್ಲಿ ಒಂದೆರಡು ವೀರಗಲ್ಲುಗಳಿವೆ ಎಂದು ಮಾಹಿತಿ ತಿಳಿದು ಪತ್ತೆಗಾಗಿ ಬೆನ್ನಟ್ಟಲಾಯಿತು. ಈ ಸಂದರ್ಭದಲ್ಲಿ ಖಾಸಗಿ ಜಮೀನಿನಲ್ಲಿದ್ದ ವೀರಗಲ್ಲು ಪ್ರದೇಶದಲ್ಲಿ ನಿಧಿಗಾಗಿ ಕೆಲವರು ಯತ್ನಿಸಿ ರುವುದು ಸಹ ಕಂಡು ಬಂದಿರುತ್ತದೆ. ಕೂಡಲೇ ಎರಡೂ ವೀರಗಲ್ಲು ಕಲ್ಲುಗಳಿದ್ದ ಜಾಗವನ್ನು ಸಂರಕ್ಷಿಸುವ ಸಂದ ರ್ಭದಲ್ಲಿ ಮತ್ತೆರಡು ವೀರಗಲ್ಲುಗಳು ಮತ್ತು ಒಂದು ಶಾಸನ ಕಲ್ಲು ದೊರೆತಿದೆ. ಇದೊಂದು ಐತಿಹಾಸಿಕ ವೀರ ಗಲ್ಲು ಆಗಿರುವುದರಿಂದ ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಲಾಯಿತು. ಗ್ರಾಪಂ ಅವರ ಸಹಕಾರ ಪಡೆದು ಭೂಮಿಯಲ್ಲಿ ಹುದಗಿದ್ದ ವೀರಗಲ್ಲುಗಳನ್ನು ಜೆಸಿಬಿ ಮೂಲಕ ಹೊರತೆಗೆದು ಸಂರಕ್ಷಿಸಲಾಗಿದೆ ಎಂದರು.

ಸುಮಾರು 8-9ನೇ ಶತಮಾನಗಳ ಇತಿಹಾಸವನ್ನು ಹೊಂದಿರುತ್ತದೆ. ಈ ವೀರಗಲ್ಲುಗಳು ಅಪರೂಪದ ತುರುಗೋಳ್‌ ವೀರಗಲ್ಲಾಗಿದ್ದು, ನಾಲ್ಕು ವೀರಗಲ್ಲುಗಳ ಪೈಕಿ ಒಂದು ವಿಶೇಷವಾಗಿದೆ. ದೊರೆತಿರುವ ಒಂದು ತೃಟಿತ ಶಾಸನವನ್ನು ಮೈಸೂರಿನಲ್ಲಿನ ಶಾಸನ ತಜ್ಞರಿಗೆ ಕಳುಹಿಸಿಕೊಟ್ಟಾಗ ಅವರು ಹೇಳಿರುವ ಪ್ರಕಾರ ಈ ಹಿಂದೆ ಈ ಪ್ರದೇಶದಲ್ಲಿ ಘೋರವಾದ ಯುದ್ಧವಾಗಿದೆ ಎಂದು ಅಂದಾಜಿಸಲಾಗಿದೆ. ಈ ಕಲ್ಲಿನಲ್ಲಿ ಕೆತ್ತಲ್ಪಟ್ಟವಲ್ಲಿ ಅಶ್ವ, ಅಶ್ವದ ಮೇಲೆ ಛತ್ರಿ, ಸ್ವರ್ಗ ಆರೋಹಣ, ಮಹಿಳೆ/ಸರದಾರನ ಅದ್ಭುತ ಚಿತ್ರ ವ ನ್ನು ಕಾಣಬಹುದಾಗಿದೆ. ಯುದ್ಧ ದಲ್ಲಿ ಮಡಿದಾಗ ಇದನ್ನು ಈ ಜಾಗದಲ್ಲಿ ಇಡಲಾಗಿ ತ್ತೆಂದು ಹೇಳಲಾಗುತ್ತಿದೆ ಎಂದು ವಿವರಣೆ ನೀಡಿದರು.

ವಿಶ್ವನಾಥಪುರ ಗ್ರಾಪಂ ಕಾರ್ಯದರ್ಶಿ ಪದ್ಮಮ್ಮ ಕೆ.ವಿ.ಸ್ವಾಮಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಈ ತರಹದ ಬೃಹತ್‌ ಕಲ್ಲುಗಳ ವೀರಗಲ್ಲುಗಳಿವೆ ಎಂದು ಸಾಹಿತಿ ಬಿಟ್ಟಸಂದ್ರ ಗುರುಸಿದ್ಧಯ್ಯ ಅವರು ಗ್ರಾಪಂಗೆ ಮಾಹಿತಿ ನೀಡಿದಾಗ ಕೂಡಲೇ ಗ್ರಾಪಂಯಿಂದ ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಎರಡು ವೀರಗಲ್ಲು ಮಾತ್ರ ಇರುವುದು ತಿಳಿಯಿತು. ಆ ವೀರಗಲ್ಲುಗಳನ್ನು ತೆಗೆಯುವಾಗ ಮತ್ತೆರಡು ವೀರಗಲ್ಲುಗಳು ದೊರೆತಿರುತ್ತದೆ. ಇದು ವಿಶ್ವನಾಥಪುರದ ಇತಿಹಾಸವನ್ನು ತಿಳಿಸುವಂತಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆ ವೀರಗಲ್ಲುಗಳು, ಶಾಸನಗಳು ದೊರೆತಲ್ಲಿ ಕೂಡಲೇ ಗ್ರಾಮಸ್ಥರು ಮಾಹಿತಿ ನೀಡಿದರೆ, ಇಂಥ ಹಲವಾರು ಐತಿಹಾಸಿಕ ಘಟನಾವಳಿಯನ್ನು ಮೆಲುಕು ಹಾಕುವಂತೆ ಆಗುತ್ತದೆ ಎಂದರು.

ವಿಶ್ವನಾಥಪುರ ಗ್ರಾಮದ ಮುಖಂಡ ನಾರಾಯಣಸ್ವಾಮಿ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.

Advertisement

ವಿಶ್ವನಾಥಪುರ ಗ್ರಾಮದ ಇತಿಹಾಸ : ಪ್ರಸ್ತುತ ಹೆಸರಿಸಿರುವ ವಿಶ್ವನಾಥಪುರ ಗ್ರಾಮಕ್ಕೆ ಶತಮಾನಗಳ ಹಿಂದೆ ಗ್ರಾಮದ ಹಿರಿಯರು ಕಾಶಿಯಲ್ಲಿ ಕಾಶಿಗೆ ಹೋಗಿ, ಕಾಶಿಯಿಂದ ವಿಶ್ವನಾಥನ ಲಿಂಗವನ್ನು ಇಲ್ಲಿಗೆ ತಂದು, ಆ ಲಿಂಗವನ್ನು ರಾಷ್ಟ್ರೀಯ ಹೆದ್ದಾರಿ 7ರ ಪಕ್ಕವಿರುವ ಪ್ರಾಚೀನ ಶಿಲಾ ಕಟ್ಟಡದಲ್ಲಿ ಕಟ್ಟಡ ನಿರ್ಮಿಸಿ ಶಿವ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಈ ಗ್ರಾಮಕ್ಕೆ ಕಾಶಿವಿಶ್ವನಾಥಪುರವೆಂದು ಕರೆಯಲಾಗುತ್ತಿತ್ತು. ಕಾಲಕಳೆದಂತೆ, ವಿಶ್ವನಾಥಪುರ ಎಂಬ ಹೆಸರಿನಿಂದ ಕರೆಯಲಾಗಿದೆ ಎಂದು ಗ್ರಾಮ ಇತಿಹಾಸದಲ್ಲಿ ಪೂರ್ವಜರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next