ಧಾರವಾಡ: ಹೃದಯ ಮಹಾಪಧಮನಿಯಲ್ಲಿ ದೋಷದಂತಹ ಗಂಭೀರ ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನದ ಹೆಣ್ಣು ಮಗುವಿಗೆ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರು ಅಪರೂಪದ ಯಶಸ್ವಿ ಹೃದಯ ಚಿಕಿತ್ಸೆ ಮಾಡಿ ಗಮನ ಸೆಳೆದಿದ್ದಾರೆ.
ನವಜಾತ ಶಿಶುವಿಗೆ ಸಂಕೀರ್ಣ ಹೃದ್ರೋಗ ಹಸ್ತಕ್ಷೇಪ ಎನಿಸಿದ ಎಡ ಶೀರ್ಷಧಮನಿ ಅಪಧಮನಿ ಕತ್ತರಿಸುವಿಕೆ (ಲೆಫ್ಟ್‌ಕರೋಟಿಡ್ ಆರ್ಟರಿ) ಮತ್ತು ಬಲೂನ್ ಮೂಲಕ ಹಿಗ್ಗಿಸುವಿಕೆ (ಬಲೂನ್ ಡೈಲೇಷನ್ ಆಫ್ ಕೋಆರ್ಕಟೇಶನ್ ಸೆಗ್‌ಮೆಂಟ್) ಮಾಡಿ ಆ ಭಾಗವನ್ನು ಒಂದುಗೂಡಿಸುವ ಪ್ರಕ್ರಿಯೆಯನ್ನು ವೈದ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಹುಬ್ಬಳ್ಳಿ ಮೂಲದ 20 ದಿನದ ಮಗು ಕೇವಲ 2.3 ಕೆ.ಜಿ. ತೂಕವಿತ್ತು. ಈ ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆಯ ಸಮಸ್ಯೆಯ ಕಾರಣದಿಂದ ಧಾರವಾಡದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ಗೆ ಕರೆ ತರಲಾಗಿತ್ತು. ಈ ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ ಮಗುವಿಗೆ ಹೃದಯದ ಮಹಾಪಧಮನಿಯಲ್ಲಿ ದೊಡ್ಡ ಪ್ರಮಾಣದ ದೋಷವಿರುವ ಕಾರಣ ರಕ್ತ ಪರಿಚಲನೆಯ ಸಮಸ್ಯೆ ಇರುವುದು ಧೃಢಪಟ್ಟಿತ್ತು.
ಈ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ| ರವಿವರ್ಮ ಪಾಟೀಲ್, ಚಿಕ್ಕ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಧಿಕ ಅಪಾಯ ಸಾಧ್ಯತೆಯುಂಟು. ಹೀಗಿರುವಾಗ ಅತಿ ಕಡಿಮೆ ತೂಕದ 2.3 ಕೆಜಿಯ 20 ದಿನದ ಮಗುವಿಗೆ ಈ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಾಗಿತ್ತು. ಮಗುವಿನ ಕತ್ತಿನ ಭಾಗದ ಅಪಧಮನಿಯು 3 ರಿಂದ 4 ಮಿಲಿ ಮೀಟರ್ ಮಾತ್ರ ವ್ಯಾಸ ಇರುವ ಕಾರಣ ಅದನ್ನು ಪ್ರವೇಶಿಸುವುದು ತೀರಾ ಕಷ್ಟಕರವಾಗಿತ್ತು. ಆದರೆ ಇದನ್ನು ಕತ್ತರಿಸಿ, ವೈದ್ಯಕೀಯ ಪ್ರಕ್ರಿಯೆ ಮುಗಿಸಿದ ಬಳಿಕ ಹೊಲಿಗೆ ಹಾಕುವುದು ತೀರಾ ಸವಾಲುದಾಯಕವಾಗಿತ್ತು. ಈ ಸಂಕೀರ್ಣತೆಯ ಪರಿಣಾಮ ಮಗುವಿಗೆ ಮೆದುಳಿನ ಸ್ರಾವದ ಸಾಧ್ಯತೆಯೂ ಇತ್ತು. ಇವೆಲ್ಲದರ ನಡುವೆಯೂ ಮಗುವಿನ ಜೀವ ರಕ್ಷಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.
ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ, ಮಾರುಕಟ್ಟೆ ವಿಭಾಗದ ಮೇಲ್ವಿಚಾರಕ ಅಜಯ್ ಹುಲಮನಿ, ದುಂಡೇಶ ತಡಕೋಡರ, ವಿನಾಯಕ್ ಗಂಜಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು. ಇದಕ್ಕೆ ಹುಟ್ಟಿದ ತಕ್ಷಣ ಶಸ್ತ್ರಚಿಕಿತ್ಸೆ ಅಥವಾ ಇತರ ವೈದ್ಯಕೀಯ ನೆರವು ಅಗತ್ಯವಿತ್ತು. ಸದ್ಯ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರೆವೇರಿಸಿದ್ದು, ಮಗು ಸಹಜ ಸ್ಥಿತಿಗೆ ಮರಳಿದೆ.
–ಡಾ|ಅರುಣ್ ಕೆ.ಬಬಲೇಶ್ವರ, ಮಕ್ಕಳ ಹೃದಯ ರೋಗ ತಜ್ಞ
ಧಾರವಾಡ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರನ್ನು ಭೇಟಿ ಮಾಡಿ ಚರ್ಚಿಸುವವರೆಗೂ ಬಹುತೇಕ ಎಲ್ಲ ಆಸೆ ಕೈಬಿಟ್ಟಿದ್ದೆವು. ಬಿಪಿಎಲ್ ಕಾರ್ಡ್ ಹಾಗೂ ಆಯುಷ್ಮಾನಭವ ಕಾರ್ಡ್‌ನಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಸಿಗುವಂತೆ ಮಾಡಿ ಮಗುವಿನ ಜೀವ ರಕ್ಷಿಸಿದ ವೈದ್ಯರಿಗೆ ನಾವೆಂದಿಗೂ ಅಭಾರಿ ಆಗಿದ್ದೇವೆ.
–ಮೊಹಮ್ಮದ್ ಫಾರೂಕ್ ಯಲಿಗಾರ, ಮಗುವಿನ ತಂದೆ, ಹುಬ್ಬಳ್ಳಿ