ಡಾ.ರಾಜ್ ಕುಮಾರ್ ಅವರ “ಬೇಡರ ಕಣ್ಣಪ್ಪ’ ಕಂಡ ಅಭೂತಪೂರ್ವ ಯಶಸ್ಸು ಮೇಯಪ್ಪ ಚೆಟ್ಟಿಯಾರ್ ಅವರನ್ನು ಅದೇ ಚಿತ್ರದ ತೆಲುಗು ಅವತರಣಿಕೆಯನ್ನು ತಯಾರಿಸಲು ಪ್ರೇರೇಪಿಸಿತು.
ಪ್ರಥಮ ಚಿತ್ರದಲ್ಲೇ ಅಮೋಘ ನಟನಾ ಕಲೆಯನ್ನು ರಾಜ್‌ಕುಮಾರ್ ಅವರಲ್ಲಿ ಕಂಡ ಮೇಯಪ್ಪನ್ ಚೆಟ್ಟಿಯಾರ್ ಅವರಿಗೆ ಕಣ್ಣಪ್ಪನ ಪಾತ್ರವನ್ನು ರಾಜ್‌ಕುಮಾರ್ ಅವರೇ ಮಾಡಬೇಕೆಂದು ಹಠತೊಟ್ಟು ಜಯಶೀಲರಾದರು. ಚಿತ್ರ “ಕಾಳಹಸ್ತಿ ಮಹಾತ್ಮಂ’. ರಾಜ್ ಕುಮಾರ್ ಅವರು ಏಕೋ ಆ ಪಾತ್ರ ವಹಿಸಲು ಅಷ್ಟಾಗಿ ಇಷ್ಟಪಡಲಿಲ್ಲ.
ಕಾರಣ ತೆಲುಗು ಭಾಷೆ. ವಿಧಿ ಇಲ್ಲದೇ ಮೇಯಪ್ಪನ್ ಅವರು ಗುಮ್ಮಡಿ ವೆಂಕಟೇಶ್ವರ ರಾವ್, ಅಂದರೆ ಅಂದಿನ ಪ್ರಖ್ಯಾತ ತೆಲುಗು ನಟರನ್ನು ಸಂಪರ್ಕಿಸಿದರು. ಗುಮ್ಮಡಿ ಅವರು ರಾಜ್‌ಕುಮಾರ್ ಅವರನ್ನು ಭೇಟಿಮಾಡಿ, “ನಿಮ್ಮಷ್ಟು ಚೆನ್ನಾಗಿ ಆ ಪಾತ್ರವನ್ನು ನಿರ್ವಹಿಸಲಾರೆ. ಕಣ್ಣಪ್ಪನ ಪಾತ್ರವನ್ನು ಮಾಡಲು ನೀವೊಬ್ಬರೆ ಸಮರ್ಥರು’ ಎಂದು ಹೇಳಿದಾಗ ರಾಜ್ ಅವರಲ್ಲಿ ಒಂದು ರೀತಿಯ ಉತ್ಸಾಹ ತುಂಬಿ ಆ ಪಾತ್ರ ಮಾಡಲು ಸಮ್ಮತಿಸಿದರು.
ಇದನ್ನೂ ಓದಿ:ಅಜೇಯ ವಿಜಯ: ಕೃಷ್ಣ ಟಾಕೀಸ್ ಬಗ್ಗೆ ಕೃಷ್ಣನ್ ಟಾಕ್!
ಆದರೆ ತೆಲುಗಿನಲ್ಲಿ ಸಂಭಾಷಣೆ ಹೇಳುವಾಗ ಆದ ಹಿಂಸೆ ಅಷ್ಟಿಷ್ಟಲ್ಲ. ಅಂದಿನ ಕಾಲದಲ್ಲಿ ಡಬ್ಬಿಂಗ್ ಇರಲಿಲ್ಲ. “ಪ್ಲೇಬ್ಯಾಕ್’ ತಂತ್ರಜ್ಞಾನ ಮಾತ್ರವಿತ್ತು. ಆದುದರಿಂದ ಸೆಟ್‌ನಲ್ಲಿ ಮಾತನಾಡಿದ್ದೇ ತೆರೆಮೇಲೂ ಮೂಡಿಬರುತ್ತಿತ್ತು. ಆ ಕಾರಣಕ್ಕಾಗಿಯೇ ಏನೋ ರಾಜ್ ಅವರಿಗೆ ಮುಜುಗರವಾಗಿದ್ದು. ಅಂತೂ ಇಂತೂ ಚಿತ್ರವನ್ನು ಸಮರ್ಥವಾಗಿ ಮುಗಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾದರು ರಾಜ್.
ಅದರೊಂದಿಗೇ ಮತ್ತೂಂದು ನಿರ್ಧಾರವನ್ನೂ ಮಾಡಿಬಿಟ್ಟರು. “ಇನ್ನೆಂದೂ ಪರಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ’ ಎಂಬುದೇ ಆನಿರ್ಧಾರ. ಅದನ್ನು ಜೀವಿತಾವಧಿವರೆ ಗೂ ಪಾಲಿಸಿಕೊಂಡು ಬಂದಿದ್ದೇ ಅವರ ಮಹತ್ವ.