Advertisement

ಮಾರ್ಚ್‌ 22 ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅಪರೂಪದ ಅತಿಥಿಗಳು

11:20 AM Jul 28, 2017 | |

ಅನಂತ್‌ನಾಗ್‌ ಅವರು ಸಿನಿಮಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯೇ. ಅದರಲ್ಲೂ ಬೇರೆ ಊರುಗಳಲ್ಲಿ ಸಮಾರಂಭ ನಡೆದರಂತೂ ಅವರು ಹಾಜರಾಗುವುದು ಬಹಳ ಅಪರೂಪ. ಹೀಗಿರುವಾಗಲೇ ಅನಂತ್‌ನಾಗ್‌ ಅವರು ಮಂಗಳೂರಿಗೆ ಹೋಗಿ ಕೋಡ್ಲು ರಾಮಕೃಷ್ಣ ನಿರ್ದೇಶನದ  “ಮಾರ್ಚ್‌ 22′ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಬಂದಿದ್ದಾರೆ. ಅವರಷ್ಟೇ ಅಲ್ಲ, ಈ ಕಾರ್ಯಕ್ರಮದಲ್ಲಿ ರವಿ ಕಾಳೆ, ಆಶಿಶ್‌ ವಿದ್ಯಾರ್ಥಿ ಮುಂತಾದ ಅಪರೂಪದ ಅತಿಥಿಗಳು ಕಾಣಿಸಿಕೊಂಡಿದ್ದು ವಿಶೇಷ.

Advertisement

ಅನಿವಾಸಿ ಭಾರತೀಯ ಹರೀಶ್‌ ಶೇರಿಗಾರ್‌ ನಿರ್ಮಿಸಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ “ಮಾರ್ಚ್‌ 22′ ಚಿತ್ರದ ಹಾಡುಗಳು ಕಳೆದ ವಾರ ಮಂಗಳೂರಿನಲ್ಲಿ ಬಿಡುಗಡೆಯಾಯಿತು. ಬರೀ ಹಾಡುಗಳ ಬಿಡುಗಡೆಯಷ್ಟೇ ಅಲ್ಲ, ಟ್ರೇಲರ್‌ ಮತ್ತು ವೀಡಿಯೋ ಹಾಡುಗಳನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಅನಂತ್‌ನಾಗ್‌ ಅವರು ಹಾಡುಗಳನ್ನು ಬಿಡುಗಡೆ ಮಾಡಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಟ್ರೇಲರ್‌ ಬಿಡುಗಡೆ ಮಾಡಿದರು. ಆಶಿಶ್‌ ವಿದ್ಯಾರ್ಥಿ ವೀಡಿಯೋ ಹಾಡುಗಳನ್ನು ಹೊರತಂದರು. ಈ ಕಾರ್ಯಕ್ರಮದಲ್ಲಿ ಅನಂತ್‌ನಾಗ್‌ ಅವರ ಪತ್ನಿ ಗಾಯತ್ರಿ, ಜೈಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಶರತ್‌ ಲೋಹಿತಾಶ್ವ, ವಿತರಕ ಜಾಕ್‌ ಮಂಜು, ಕರಿಸುಬ್ಬು, ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹರೀಶ್‌ ಶೇರಿಗಾರ್‌ ನಿರ್ಮಿಸುತ್ತಿರುವ ಮೊದಲ ಚಿತ್ರ ಇದು. ಈ ಹಿಂದೆ ಅವರ ಮನೆಯಲ್ಲಿ “ಮಿಸ್ಟರ್‌ ಡೂಪಿಕ್ಲೇಟ್‌’ ಎಂಬ ಚಿತ್ರದ ಚಿತ್ರೀಕರಣವಾಗಿತ್ತಂತೆ. ಆ ಸಂದರ್ಭದಲ್ಲಿ ಕೋಡ್ಲು ಅವರ ಪರಿಚಯವಾಯಿತಂತೆ. ಆ ನಂತರ ಸಿಕ್ಕಾಗೆಲ್ಲಾ ಕೋಡ್ಲು ಕಥೆಗಳನ್ನು ಹೇಳುತ್ತಿದ್ದರಂತೆ. ಆ ಪೈಕಿ ಇಷ್ಟವಾಗಿದ್ದೇ “ಮಾರ್ಚ್‌ 22′. “ನನಗೆ ಸುಮ್ಮನೆ ಸಿನಿಮಾ ಮಾಡುವುದಕ್ಕೆ ಇಷ್ಟ ಇಲ್ಲ. ಒಂದು ಸಿನಿಮಾ ಮಾಡಿದರೆ ಅದರಲ್ಲೊಂದು ಒಳ್ಳೆಯ ಸಾಮಾಜಿಕ ಸಂದೇಶ ಇರಬೇಕು. ಇಲ್ಲಿ ಒಂದು ಕಮರ್ಷಿಯಲ್‌ ಕಥೆಯ ಜೊತೆಗೆ ಮನಮುಟ್ಟುವ ಹಲವು ವಿಷಯಗಳಿವೆ. ಈ ಚಿತ್ರ ಹಲವರ ಕಣ್ಣು ತೆರೆಸುತ್ತದೆ ಎಂಬ ನಂಬಿಕೆ ನನ್ನದು. ಅದರಲ್ಲೂ ಹಿಂದೂ-ಮುಸ್ಲಿಮ್‌ಗಳ ನಡುವೆ ಗಲಾಟೆ ನಡೆಯುವ ಸಂದರ್ಭದಲ್ಲಿ, ನೀರಿನ ಅವಶ್ಯಕತೆ ಹೆಚ್ಚಿರುವ ಸಂದರ್ಭದಲ್ಲಿ ಈ ಚಿತ್ರ ಖಂಡಿತಾ ಜನರ ಗಮನ ಸೆಳೆಯುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರ ನೋಡಿದ್ದೀನಿ. ಚೆನ್ನಾಗಿ ಬಂದಿದೆ ಎಂಬ ಖುಷಿ ಇದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಚಿತ್ರದಲ್ಲಿ ಎಲ್ಲಾ ಸೀಸನ್‌ ಕಲಾವಿದರೇ ಇದ್ದಾರೆ. ಇಂತಿಂಥಾ ಪಾತ್ರಗಳಿಗೆ ಇಂತಿಂಥಾ ಕಲಾವಿದರೇ ಬೇಕು ಎಂದು ಆಆಯ್ಕೆ ಮಾಡಿದ್ದೇವೆ’ ಎನ್ನುತ್ತಾರೆ ಹರೀಶ್‌ ಶೇರಿಗಾರ್‌. ಇನ್ನು ಚಿತ್ರ ಬಿಡುಗಡೆಗೆ ಸಿದ್ಧವಿದೆಯಂತೆ. ಈಗಾಗಲೇ ಪೋಸ್ಟ್‌-ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಮುಗಿದಿದ್ದು, ಸದ್ಯದಲ್ಲೇ ಸೆನ್ಸಾರ್‌ ಆಗಲಿದೆಯಂತೆ. ಈ ವಾರಾಂತ್ಯ ಚಿತ್ರ ಸೆನ್ಸಾರ್‌ 
ಆಗಲಿದ್ದು, ಬಹುಶಃ ಆಗಸ್ಟ್‌ ಎರಡನೆಯ ಅಥವಾ ಮೂರನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next