ಕುರಿಯಾಜೆ ತಿರುಮಲೇಶ್ವರ ಭಟ್ ತಲಾ ಮೂರು ಎಕರೆಯಲ್ಲಿ ಅಡಿಕೆ ಮತ್ತು ರಬ್ಬರ… ತೋಟ ಬೆಳೆಸಿದವರು ಎಂದರೆ ಅವರ ಕೃಷಿ ಮತ್ತು ಸಸ್ಯಪ್ರೀತಿಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ.
Advertisement
ಏಕೆಂದರೆ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಅವರ ಮನೆಯ ಗೇಟು ತೆರೆದು ಒಳಕ್ಕೆ ಕಾಲಿಡುವಾಗಲೇ ಸ್ವರ್ಗದ ತೋಟ ಪ್ರವೇಶಿಸಿದ ಅನುಭವವಾಗುತ್ತದೆ. ಅಲ್ಲಿವೆ ಬಗೆಬಗೆಯ ಅಲಂಕಾರಿಕ ಗಿಡಗಳು. ಅವುಗಳನ್ನು ಪ್ರೋನಿಂಗ್ ಮಾಡಿ ರೂಪಿಸಿದ ಮನಮೋಹಕ ವಿನ್ಯಾಸಗಳು, ಅಪರೂಪದ ಕಳ್ಳಿಗಿಡಗಳು ಹಾಗೂ ಸುಂದರ ಮೂರ್ತಿಗಳು.
ರೋ, ಅವರು ಅದರ ಲೆಕ್ಕವಿಟ್ಟಿಲ್ಲ. ಜೋಪಾನವಾಗಿ ಗಿಡಗಳನ್ನು ತಂದು ಮುತುವರ್ಜಿಯಿಂದ ಬೆಳೆಸುವುದೇ ಅವರಿಗೆ ಖುಷಿ. ಹಾಗಾಗಿಯೇ, ಲಂಡನ್ ಪೈನ್, ತೂಜಾ, ಗೋಲ್ಡನ್ ಸೈಪ್ರಸ್ ಮುಂತಾದ, ಹೆಚ್ಚಿನವರಿಗೆ ಗೊತ್ತೇ ಇಲ್ಲದ ಅಲಂಕಾರಿಕ ಗಿಡಗಳು ಅವರ ತೋಟದಲ್ಲಿ ಕಂಗೊಳಿಸುತ್ತಿವೆ.
Related Articles
Advertisement
ತಿರುಮಲೇಶ್ವರ ಭಟ್ಟರಿಗೆ ಕಳ್ಳಿಗಳೆಂದರೆ ಅಪಾರ ಪ್ರೀತಿ ಹಾಗೂ ಆಸಕ್ತಿ. ಅವರ ಸಂಗ್ರಹದಲ್ಲಿರುವ ಕಳ್ಳಿ ಪ್ರಭೇದಗಳ ಸಂಖ್ಯೆ 350ಕ್ಕಿಂತ ಜಾಸ್ತಿ. ಸುಂದರ ಕುಂಡಗಳಲ್ಲಿ ಬೆಳೆಸಿ, ಅಚ್ಚುಕಟ್ಟಾಗಿ ಸಾಲುಸಾಲಾಗಿ ಜೋಡಿಸಿಟ್ಟಿರುವ ಕಳ್ಳಿಗಳ ನೋಟ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಅಬ್ಟಾ, ಎಲ್ಲಿಂದ ತಂದರೋ, ಹೇಗೆ ಬೆಳೆಸಿದರೋ! ಏಕೆಂದರೆ, ಕಳ್ಳಿಗಿಡಗಳ ಕೃಷಿ ಸುಲಭವಲ್ಲ. ಹಾಕಿದ ನೀರು ಹೆಚ್ಚಾದರೆ ಕಳ್ಳಿಗಿಡಗಳು ಸತ್ತೇ ಹೋಗುತ್ತವೆ. ಆದರೆ, ಮಳೆನೀರು ಸುರಿಯದಂತೆ ಜೋಪಾನವಾಗಿ ಬೆಳೆಸಿದರೆ, ಕಳ್ಳಿಗಿಡಗಳು ಹತ್ತಾರು ವರ್ಷ ಉಳಿದು, ತಮ್ಮ ವಿಲಕ್ಷಣ ವಿನ್ಯಾಸಗಳಿಂದಾಗಿ ಗಮನ ಸೆಳೆಯುತ್ತವೆ. ಅವುಗಳಲ್ಲಿ ಹೂಗಳು ಅರಳಿದಾಗ ಅವನ್ನು ಬೆಳೆಸಲು ಪಟ್ಟ ಶ್ರಮವೆಲ್ಲ ಸಾರ್ಥಕವಾಯಿತು ಅನಿಸುತ್ತದೆ ಎನ್ನುತ್ತಾರೆ ತಿರುಮಲೇಶ್ವರ ಭಟ್.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕುರಿಯಾಜೆಯಲ್ಲಿರುವ ತಿರುಮಲೇಶ್ವರ ಭಟ್ಟರ ಜಮೀನಿನ ಮುಖ್ಯ ಬೆಳೆ ಅಡಿಕೆ ಮತ್ತು ರಬ್ಬರ್. ಜೊತೆಗೆ ಕರಿಮೆಣಸು, ಕೊಕ್ಕೋ, ಬಾಳೆ ಹಾಗೂ ಜಾಯಿಕಾಯಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ತಮ್ಮ ಜಮೀನಿನ ಒಂದು ಎಕರೆಯಲ್ಲಿ ವಿಧವಿಧದ ಹಣ್ಣುಗಳ ತೋಟ ಬೆಳೆಸಿರುವುದು ಇವರ ಸಾಧನೆ. ಆ ಮೂಲಕ ಹಲವು ವಿದೇಶಿ ಹಣ್ಣುಗಳ ಗಿಡಗಳು ಕರಾವಳಿಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಉದಾಹರಣೆ, ಮಿರಾಕಲ್ಹಣ್ಣು, ಡ್ರಾಗನ್ ಹಣ್ಣು, ಮ್ಯಾಂಗೋಸ್ಟೀನ್, ರಾಂಬುಟಾನ್. ಥಾಯಿಲ್ಯಾಂಡ್ ಮತ್ತು ಮಲೇಷ್ಯಾ ಮೂಲದ ಹಣ್ಣಿನ ಗಿಡಗಳೂ ಸೇರಿ 28 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ಹಣ್ಣಿನ ತೋಟದಲ್ಲಿವೆ. ಹನ್ನೆರಡು ವಿಧದ ಹಲಸಿನ ತಳಿ ಮತ್ತು ಹತ್ತಾರು ಮಾವಿನ ತಳಿಗಳನ್ನು ಬೆಳೆಸುವ ಮೂಲಕ ತಳಿ ರಕ್ಷಣೆಗೂ ಗಮನ ನೀಡಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ, ತಿರುಮಲೇಶ್ವರ ಭಟ್ ಅಪ್ಪಟ ಸಾವಯವ ಕೃಷಿಕರು. ಉತ್ತಮ ಫಸಲು ಪಡೆಯಲು ರಾಸಾಯನಿಕ ಗೊಬ್ಬರ ಅಥವಾ ರಾಸಾಯನಿಕ ಪೀಡೆನಾಶಕಗಳು ಅಗತ್ಯವಿಲ್ಲ ಎಂಬುದು ಅವರ ನಂಬಿಕೆ. ಹೈನುಗಾರಿಕೆಯಿಂದ ಪಡೆಯುತ್ತಿರುವ ಸಾವಯವ ಗೊಬ್ಬರದ ಮೂಲಕ ಇವರ ತೋಟದ ಬೆಳೆಗಳಿಗೆ ಪೋಷಕಾಂಶ ಪೂರೈಕೆ ಮಾಡುತ್ತಾರೆ. ಎಮ್ಮೆ ಮತ್ತು ಗಿರ್ ತಳಿಯ ಹಸುಗಳನ್ನು ಸಾಕುತ್ತಿದ್ದು ಹೈನುಗಾರಿಕೆ ರೀತಿಯಿಂದಲೂ ಲಾಭದಾಯಕ ಎನ್ನುತ್ತಾರೆ. ಇವರ ಇನ್ನೆರಡು ಆಸಕ್ತಿಗಳು: ಬೋನ್ಸಾಯ್ ಗಿಡಗಳನ್ನು ಬೆಳೆಸುವುದು ಮತ್ತು ವಿಶಿಷ್ಟ ಕಲ್ಲುಗಳನ್ನು ಸಂಗ್ರಹಿಸುವುದು. ಹೀಗೆ ಹಲವು ಆಸಕ್ತಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಯಶ ಕಂಡವರು ತಿರುಮಲೇಶ್ವರ ಭಟ್. ಇವರು 2007- 2008ನೇ ಸಾಲಿನ ಕರ್ನಾಟಕ ಸರಕಾರದ ಕೃಷಿ ಪಂಡಿತ ಪ್ರಶಸ್ತಿಯ ಗೌರವ ಗಳಿಸಿದ್ದರಲ್ಲಿ ಅಚ್ಚರಿಯಿಲ್ಲ. ಕೃಷಿಯ ಜೊತೆಗೆ ತಮ್ಮ ಆಸಕ್ತಿಗಳನ್ನು ಹೇಗೆ ಅಳವಡಿಸಿಕೊಂಡು ಸಾಧನೆ ಮಾಡಬಹುದು ಎಂಬುದಕ್ಕೆ ಮಾದರಿ ಕುರಿಯಾಜೆ ತಿರುಮಲೇಶ್ವರ ಭಟ್. ಕೃಷಿಯಲ್ಲಿ ಏನಿದೆ? ಆ ಕ್ಷೇತ್ರ ಬೋರ್ ಹೊಡೆಯುತ್ತದೆ ಎನ್ನುವವರಿಗೆ ಕೃಷಿಯಲ್ಲಿ ಖುಷಿ ಕಂಡುಕೊಳ್ಳುವ ಮನಸ್ಸಿದ್ದರೆ ಕೃಷಿಯಲ್ಲಿ ಎಲ್ಲವೂ ಇದೆ ಎಂಬುದು ಈ ಸಸ್ಯಪ್ರೇಮಿಯ ಉತ್ತರ. ಅದಕ್ಕೆ ಪುರಾವೆ ಅವರ ಮನೆಯಂಗಳದ ಅಪರೂಪದ ಉದ್ಯಾನ ಮತ್ತು ಹಸುರಿನಿಂದ ನಳನಳಿಸುವ ತೋಟ. -ಅಡ್ಡೂರು ಕೃಷ್ಣ ರಾವ್