ಬಾಗಲಕೋಟೆ : ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟು, ಇನ್ಮುಂದೆ ಒಟ್ಟಿಗೆ ಬಾಳಲು ಆಗಲ್ಲ ಎಂದು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಎರಡು ಜೋಡಿ, ವಕೀಲರು ಮತ್ತು ನ್ಯಾಯಾಧೀಶರ ಮನವೋಲಿಕೆಯಿಂದ ಪುನಃ ಒಂದಾಗಿ ಜೀವನ ನಡೆಸಲು ಮುಂದಾಗಿರುವ ಪ್ರಸಂಗ ಶನಿವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು.
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕೃಷ್ಣಾ ಮತ್ತು ಜ್ಯೋತಿ ದಂಪತಿ ಹಾಗೂ ಕಮಲ್ ಮತ್ತು ಕೃಪಾ ಎಂಬ ಎರಡು ಜೋಡಿಗಳು, ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆದರೆ, ವಕೀಲರಾದ ಸಂತೋಷ ಜೋಶಿ, ಎಸ್.ಎನ್. ಯಾದವಾಡ, ಕೆ.ಎಚ್. ಲಮಾಣಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನೀಲ ಕಟ್ಟಿ ಅವರ ಸಲಹೆ ತಿಳುವಳಿಕೆ ಹಿನ್ನೆಲೆಯಲ್ಲಿ ಈ ಎರಡೂ ಕುಟುಂಬ, ಪುನಃ ಒಂದಾಗಿ ಜೀವನ ನಡೆಸಲು ಒಪ್ಪಿದ್ದಾರೆ. ಹೀಗಾಗಿ ಇವರ ವಿಚ್ಛೇದನ ಕೋರಿದ ಅರ್ಜಿಯನ್ನು ಲೋಕ ಅದಾಲತ್‌ನಲ್ಲಿ ಪರಸ್ಪರ ಪುನಃ ಒಂದಾಗಿಸುವಂತೆ ಇತ್ಯರ್ಥಪಡಿಸಲಾಯಿತು.
ಕುಟುಂಬದಲ್ಲಿ ಪತಿ ಪತ್ನಿಯರ ನಡುವೆ ವಿರಸ ಉಂಟಾಗಿ ಬೇರೊಬ್ಬರ ಕಿವಿ ಮಾತಿಗೆ ತಲೆದೂಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವ ದಂಪತಿಗಳು ಪರಸ್ಪರ ವಿಶ್ವಾಸದಿಂದ ವಿಚಾರಿಸಿ ಸಂಸಾರ ನಡೆಸಿದಾಗ ಇಂತಹ ಘಟನೆಗಳು ಜರುಗುವುದಿಲ್ಲ. ಆದರೆ ಸಂಸಾರಗಳಲ್ಲಿ ಪತಿ ಪತ್ನಿಯರ ನಡುವೆ ಮೂರನೇ ವ್ಯಕ್ತಿಯ ಮಾತಿನಿಂದಾಗಿ ವಿರಸ ಉಂಟಾಗಿ ವಿಚ್ಛೇದನ ಹಂತಕ್ಕೆ ತಲುಪುತ್ತವೆ. ಸಂಸಾರ ಎಂದರೆ ಕೇವಲ ಪತಿ ಪತ್ನಿಯರಲ್ಲದೇ ತಂದೆ ತಾಯಿ, ಸಂಬಂಧಿಕರು ಇವರಿಬ್ಬರ ವ್ಯಾಜ್ಯದಿಂದಾಗಿ ನಲುಗಿ ಹೋಗಿರುತ್ತಾರೆ. ಇವರಿಬ್ಬರನ್ನು ಕುಡಿಸುವುದರ ಜೊತೆಗೆ ಒಡೆದ ಕುಟುಂಬಗಳನ್ನು ಒಂದಾಗಿಸುವ ಕಾರ್ಯ ನಿರಂತರವಾಗಿ ನಡೆಸುತ್ತಾ ಬಂದಿದ್ದು, ಈ ಅದಾಲತ್‌ನಿಂದ ನ್ಯಾಯಾಲಯದ ಸಮಯ ವ್ಯಯವಾಗದೇ ಹಾಗೂ ಬಾಕಿ ಪ್ರಕರಣಗಳು ಇತ್ಯರ್ಥಗೊಳಿಸಲಾಗುತ್ತಿದೆ. ನೊಂದ ಕುಟುಂಬಗಳು ಸಂತಸದಿಂದ ಒಂದಾಗುವ ಅವಕಾಶ ದೊರಕಿಸಿಕೊಟ್ಟಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನೀಲ ಕಟ್ಟಿ ತಿಳಿಸಿದ್ದಾರೆ.
ಪತಿ ಪತ್ನಿಯರು ಸ್ವಂತ ವಿವೇಚನೆ ಇಲ್ಲದೇ ಬೇರೊಬ್ಬರ ಮಾತಿಗೆ ಮರುಳಾಗಿ ತಮ್ಮ ಸಂಸಾರ ಹಾಳು ಮಾಡಿಕೊಳ್ಳುತ್ತಿರುವುದರಿಂದ ಪರಸ್ಪರ ವಿರಸ ಉಂಟಾಗಿ ವಿಚ್ಛೇದನ ಹಂತಕ್ಕೆ ತಲುಪುತ್ತಿವೆ. ಇದರಲ್ಲಿ ವಿದ್ಯಾವಂತರಾಗಲಿ, ಅವಿದ್ಯಾವಂತರಾಗಿ ಯಾರು ಹೊರತಾಗಿಲ್ಲ. ಇದರಿಂದ ನೊಂದ ಎರಡು ಜೀವಿಗಳನ್ನು ಕೂಡಿಸುವ ಕಾರ್ಯ ಲೋಕ ಅದಾಲತ್‌ದಿಂದ ಮಾಡಲಾಗುತ್ತಿದೆ. ಲೋಕ ಅದಾಲತ್‌ಗೆ ಕೂಡಿಸುವ ಅಧಿಕಾರವಿದೆ ಹೊರತು ಅಗಲಿಸುವ ಅಧಿಕಾರವಿಲ್ಲ. ಇದರಲ್ಲಿ ಪತಿ ಪತ್ನಿಯರ ಮನವೋಲಿಸಿ, ಒಂದು ಗೂಡಿಸುವುದೇ ರಾಷ್ಟ್ರೀಯ ಲೋಕ ಅದಾಲತ್ ಉದ್ದೇಶವಾಗಿದೆ.
– ಅನೀಲ ಕಟ್ಟಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ