ಆಗ್ರಾ : ಅತ್ಯಾಚಾರಿಗಳಿಗೆ ಚರ್ಮ ಕಿತ್ತು ಬರುವ ವರೆಗೂ ಚಿತ್ರ ಹಿಂಸೆ ನೀಡಬೇಕು ಎಂದಿದ್ದಾರೆ ಕೇಂದ್ರ ಸಚಿವೆ ಉಮಾ ಭಾರತಿ.
ಉತ್ತರ ಪ್ರದೇಶದಲ್ಲಿನ ಸಮಾಜವಾದಿ ಪಕ್ಷದ ಸರಕಾರ ಬುಲಂದ್‌ಶಹರ್ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ದೊರಕಿಸುವಲ್ಲಿ ವಿಫಲವಾಗಿದೆ ಎಂದಾಕೆ ದೂರಿದರು.
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವೆ ಉಮಾ ಭಾರತಿ, “ನಾನು ಮುಖ್ಯಮಂತ್ರಿಯಾಗಿದ್ದ ನಡೆದಿದ್ದ ಅತ್ಯಾಚಾರ ಪ್ರಕರಣ ಒಂದರಲ್ಲಿ ರೇಪಿಸ್ಟ್‌ಗಳಿಗೆ ಚಿತ್ರ ಹಿಂಸೆ ನೀಡುವಂತೆ ಆದೇಶಿಸಿದ್ದೆ ಮತ್ತು ಆ ಚಿತ್ರಹಿಂಸೆ ನೀಡುವುದನ್ನು ನೋಡುವಂತೆ ರೇಪ್ ಸಂತ್ರಸ್ತ ಮಹಿಳೆಯರಿಗೆ ಹೇಳಿದ್ದೆ’ ಎಂದು ಹೇಳಿದರು.
“ಅತ್ಯಾಚಾರದಂತಹ ಹೀನ ಅಪರಾಧ ಎಸಗುವ ವ್ಯಕ್ತಿಗಳನ್ನು ಸಂತ್ರಸ್ತರ ಎದುರು ತಲೆ ಕೆಳಗು ಮಾಡಿ ನೇತಾಡಿಸಬೇಕು ಮತ್ತು ಅವರ ಚರ್ಮ ಕಿತ್ತು ಬರುವ ವರೆಗೂ ಅವರಿಗೆ ಚಿತ್ರ ಹಿಂಸೆ ನೀಡಬೇಕು; ಅವರ ಗಾಯಗಳಿಗೆ ಉಪ್ಪು, ಮೆಣಸಿನ ಪುಡಿ ಸವರಬೇಕು; ಪ್ರಾಣ ಭಿಕ್ಷೆ ಬೇಡುವ ವರೆಗೂ ಅವರಿಗೆ ಆ ರೀತಿಯ ಚಿತ್ರಹಿಂಸೆ ನೀಡಬೇಕು’ ಎಂದು ಸಚಿವೆ ಉಮಾ ಭಾರತಿ ಹೇಳಿದರು.
“ನಾನು ಮುಖ್ಯಮಂತ್ರಿಯಾಗಿದ್ದಾಗ ರೇಪಿಸ್ಟ್ ಗಳಿಗೆ ಈ ರೀತಿಯಲ್ಲೇ ಚಿತ್ರ ಹಿಂಸೆ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದೆ. ಹಾಗೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುವುದೆಂದು ಅವರು ಹೇಳಿದ್ದರು. ಆದರೂ ನಾನು ಬಿಟ್ಟಿರಲಿಲ್ಲ; ಮೇಲಾಗಿ ಅತ್ಯಾಚಾರಿಯ ಆಕ್ರಂದನ ಕೇಳಿ ಅವರಿಗೆ ಶಾಂತಿ ಸಿಗುವಂತಾಗಲು, ಅತ್ಯಾಚಾರಿಗಳಿಗೆ ಚಿತ್ರ ಹಿಂಸೆ ನೀಡುವುದನ್ನು ಕೋಣೆಯ ಹೊರಗೆ ಕಿಟಕಿಯಿಂದ ನೋಡುವಂತೆ ರೇಪ್ ಸಂತ್ರಸ್ತ ಮಹಿಳೆಯರಿಗೆ ನಾನು ಹೇಳುತ್ತಿದ್ದೆ’ ಎಂದು ಉಮಾ ಭಾರತಿ ಹೇಳಿದರು.
ಕಳೆದ ವರ್ಷ ಜುಲೈಯಲ್ಲಿ ನೋಯ್ಡಾ ಕುಟುಂಬವೊಂದು ಕಾರಿನಲ್ಲಿ ಶಹಜಹಾನ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಕ್ಷಸೀ ಪ್ರವೃತ್ತಿಯ ಗ್ಯಾಂಗ್ ಒಂದು ನಡು ರಸ್ತೆಯಲ್ಲಿ ಅಡ್ಡಗಟ್ಟಿ, ಪುರುಷರನ್ನು ಹಗ್ಗದಿಂದ ಬಿಗಿದು ಕಟ್ಟಿ, 13ರ ಹರೆಯದ ಬಾಲಕಿಯ ಸಹಿತ ಮಹಿಳೆಯರನ್ನು ಹೊರಗೆಳೆದು ಅಮಾನುಷವಾಗಿ ಅತ್ಯಾಚಾರ ಎಸಗಿತ್ತು. ಅನಂತರ ದಾಳಿಕೋರರು ನಗದು, ಚಿನ್ನ , ಮೊಬೈಲ್ ಫೋನ್ ಸಹಿತ ಎಲ್ಲವನ್ನೂ ದೋಚಿದ್ದರು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ನೆನಪಿಸಿಕೊಟ್ಟರು.