ಬೆಂಗಳೂರು: ಪ್ರಿ ಕಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಾಣವಾಗುವ ರ‍್ಯಾಪಿಡ್ ರಸ್ತೆಗಳನ್ನು ಗುಣಮಟ್ಟ ಹಾಗೂ ದರಗಳನ್ನು ಪರಿಶೀಲಿಸಿದ ನಂತರ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ರ‍್ಯಾಪಿಡ್ ರಸ್ತೆಯನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಉತ್ತಮ ರಸ್ತೆಗಳ ಜೊತೆಗೆ ವೆಚ್ಚವೂ ಕಡಿಮೆಯಿರುವುದು ಬಹಳ ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್ ಟಾಪಿಂಗ್ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸಂಚಾರ ವ್ಯವಸ್ಥೆ ಯನ್ನು ಬದಲಾಯಿಸುವುದು, ದಟ್ಟಣೆಯಾಗುವುದು ಹೆಚ್ಚು. ಒಂದು ಬಾರಿ ವೈಟ್ ಟಾಪಿಂಗ್ ಆದ ನಂತರ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ಒಡೆದು ತೆಗೆಯುವುದು ದೊಡ್ಡ ಆತಂಕದ ಕೆಲಸ. ಅದಕ್ಕೆಂದೇ ರ‍್ಯಾಪಿಡ್ ರಸ್ತೆ ತಂತ್ರಜ್ಞಾನ ಬಂದಿದೆ. ಈ ತಂತ್ರಜ್ಞಾನ ಪ್ರಿ ಕಾಸ್ಟ್ ಸ್ಲ್ಯಾಬ್ ಗಳನ್ನು ತಯಾರಿಸಿ, ಆಂತರಿಕ ಜಾಯಿಂಟ್ ಹಾಕಿ, ಬಲಗೊಳಿಸಿ, ರಸ್ತೆಯನ್ನು ಪ್ರಾಯೋಗಿಕವಾಗಿ 500 ಮೀ. ಪೈಕಿ 375 ಮೀಟರ್ ಉದ್ದದ ರಸ್ತೆ ನಿರ್ಮಾಣ ವಾಗಿದೆ. ಅದನ್ನು ಪರಿಶೀಲಿಸಲು ಬಂದಿದ್ದು, ಹಲವಾರು ಸೂಚನೆಗಳನ್ನು ನೀಡಿದ್ದೇನೆ. 20 ಟನ್ ಮೇಲಿರುವ ವಾಹನಗಳನ್ನು ಸತತವಾಗಿ ಸಂಚಾರ ಮಾಡಿಸಿ, ವಿಶ್ಲೇಷಣೆ ಮಾಡಬೇಕಿದೆ. ಭಾರಿ ವಾಹನಗಳ ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಬೇಕೆಂದು ಸೂಚಿಸಿದ್ದೇನೆ. ಇಲ್ಲಿಯ ಜಾಯಿಂಟ್ ಗಳು, ಟೆನ್ಸಾಯಿಲ್ ಶಕ್ತಿ ಏನಿದೆ, ತಾಂತ್ರಿಕ ವಿವರಗಳನ್ನು ಸಲ್ಲಿಸಲು ಸೂಚಿಸಿದ್ದು, ಅಂತಿಮವಾಗಿ ಕಾಮಗಾರಿಯು ಕ್ಷಿಪ್ರವಾಗಿ ಆಗಬೇಕು, ಗುಣಮಟ್ಟವಿರಬೇಕು ಹಾಗೂ ವೆಚ್ಚವೂ ಸೂಕ್ತವಾಗಿರಬೇಕು ಎಂದು ಸೂಚಿಸಿದ್ದೇನೆ ಎಂದರು.
ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ, ಬೆಂಗಳೂರಿನಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್, ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದು ಎಂದರು.
ಈ ರಸ್ತೆಗಳಿಗೆ ವೈಟ್ ಟಾಪಿಂಗ್ ಗಿಂತ ಶೇ 30 ರಷ್ಟು ಹೆಚ್ಚು ವೆಚ್ಚವಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ವೆಚ್ಚವನ್ನು ಕಡಿತಗೊಳಿಸಬೇಕು. ನಮ್ಮ ಎಸ್.ಆರ್.ದರಗಳಿಗೆ ಹೊಂದುವಂತಿದ್ದರೆ ಮಾತ್ರ ಇದನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಎಸ್.ರಘು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.